– ಬೆಂಗಳೂರು ನಗರದ ಸ್ವಚ್ಚತೆ ಕಾಪಾಡುವಲ್ಲಿ ಕಾರ್ಮಿಕರ ಪಾತ್ರ ಹಿರಿದು; ಡಿಸಿಎಂ
– 700ಕ್ಕೂ ಹೆಚ್ಚು ಕಾರ್ಮಿಕರಿಗೆ ಪ್ರತಿ ತಿಂಗಳು 1,500 ರೂಪಾಯಿ ಗ್ಯಾರಂಟಿ
ಬೆಂಗಳೂರು: ನಗರದ ಸ್ವಚ್ಚತೆ ಕಾಪಾಡುವಲ್ಲಿ ಜಲಮಂಡಳಿಯ ಸ್ವಚ್ಛತಾ ಕಾರ್ಮಿಕರ ಪಾತ್ರ ದೊಡ್ಡದಿದೆ. ಅವರ ಸೇವೆ ಹಾಗೂ ತ್ಯಾಗವನ್ನು ಗೌರವಿಸುವ ನಿಟ್ಟಿನಲ್ಲಿ ಬೆಂಗಳೂರು ಜಲಮಂಡಳಿ ಐತಿಹಾಸಿಕ ʻಜಲಮಂಡಳಿ ಅನ್ನಪೂರ್ಣ ಯೋಜನೆʼಯನ್ನು ಅನುಷ್ಠಾನಗೊಳಿಸಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ಜಲಮಂಡಳಿ ಸ್ವಚ್ಛತಾ ಕಾರ್ಮಿಕರಿಗೆ ‘ಅನ್ನಪೂರ್ಣ ಯೋಜನೆ’
ನಮ್ಮ ಜಲಮಂಡಳಿ ಸ್ವಚ್ಛತಾ ಕಾರ್ಮಿಕರಿಗೆ ಹೊಸ ಗೌರವ ಮತ್ತು ಆರ್ಥಿಕ ಭದ್ರತೆಯನ್ನು ನೀಡುವ ಉದ್ದೇಶದಿಂದ ಇಂದು ಬೆಂಗಳೂರಿನ ರಜತ ಭವನದಲ್ಲಿ ‘ಅನ್ನಪೂರ್ಣ ಯೋಜನೆ’ ಅಡಿ ಸ್ಮಾರ್ಟ್ ಕಾರ್ಡ್‌ಗಳನ್ನು ವಿತರಿಸಲಾಯಿತು.
ಈ ಯೋಜನೆಯಡಿಯಲ್ಲಿ, 700ಕ್ಕೂ ಹೆಚ್ಚು ಸ್ವಚ್ಛತಾ ಕಾರ್ಮಿಕರಿಗೆ… pic.twitter.com/LP1z9vzIls
— DK Shivakumar (@DKShivakumar) September 1, 2025
ಇಂದು ಜಲಮಂಡಳಿಯ ರಜತ ಭವನದಲ್ಲಿ “ಜಲಮಂಡಳಿ ಅನ್ನಪೂರ್ಣ ಯೋಜನೆ” ಅಡಿಯಲ್ಲಿ ಸ್ಮಾರ್ಟ್ ಕಾರ್ಡ್‌ಗಳನ್ನು ವಿತರಿಸಿ ಮಾತನಾಡಿದರು. ಈ ಯೋಜನೆಯಡಿ 700ಕ್ಕೂ ಹೆಚ್ಚು ನೈರ್ಮಲ್ಯೀಕರಣ ಕಾರ್ಮಿಕರಿಗೆ ಪ್ರತಿತಿಂಗಳು 1,500 ರೂಪಾಯಿಗಳನ್ನು ನೇರವಾಗಿ ಅವರ ಖಾತೆಗೆ ವರ್ಗಾವಣೆ ಆಗಲಿದ್ದು, ಆರೋಗ್ಯಕರ ಉಪಾಹಾರವನ್ನು ಖಚಿತಪಡಿಸುವ ಜೊತೆಗೆ ಆರ್ಥಿಕ ಭದ್ರತೆ ಮತ್ತು ಸಾಮಾಜಿಕ ಗೌರವವನ್ನೂ ನೀಡಲಿದೆ ಎಂದು ತಿಳಿಸಿದರು.
ಸ್ವಚ್ಛತಾ ಕಾರ್ಮಿಕರ ಜೀವನಮಟ್ಟವನ್ನು ಸುಧಾರಿಸುವುದು ಸರ್ಕಾರದ ಪ್ರಮುಖ ಗುರಿಯಾಗಿದ್ದು, ಅವರ ಮಕ್ಕಳೂ ಡಾಕ್ಟರ್, ಇಂಜಿನಿಯರ್, ಕೆಎಎಸ್ ಅಧಿಕಾರಿಗಳಾಗಿ ಬೆಳೆವ ಕನಸು ನನಸಾಗುವಂತೆ ಮಾಡಲು ಸರ್ಕಾರ ನಿಂತಿದೆ ಎಂದು ಭರವಸೆ ನೀಡಿದರು.
ನಗರದ ನೀರು ಮತ್ತು ಒಳಚರಂಡಿ ಸೇವೆಗಳಲ್ಲಿ ನಷ್ಟದಿಂದ ಲಾಭದತ್ತ ಸಾಗುತ್ತಿರುವ ಬದಲಾವಣೆಯನ್ನು ಉಲ್ಲೇಖಿಸಿದ ಡಿಸಿಎಂ, ಟ್ಯಾಂಕರ್ ಮಾಫಿಯಾಗೆ ಕಡಿವಾಣ ಹಾಕಿದ ಪರಿಣಾಮವಾಗಿ ಇಂದು ನಾಗರಿಕರಿಗೆ ಸರಳವಾಗಿ ನೀರು ದೊರೆಯುತ್ತಿದೆ. 5ನೇ ಹಂತದ ಕಾವೇರಿ ಯೋಜನೆ ಯಶಸ್ವಿಯಾಗಿ ಜಾರಿಯಾಗಿದೆ ಇದೀಗ ಬೆಳೆಯುತ್ತಿರುವ ನಗರಕ್ಕೆ ನೀರು ಪೂರೈಸಲು ಕಾವೇರಿ 6ನೇ ಹಂತದ ಯೋಜನೆಯನ್ನು ಪ್ರಾರಂಭಿಸಲಾಗಿದೆ ಎಂದರು.
ಜಲಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ಅವರು ಈ ಯೋಜನೆಯ ತಾಂತ್ರಿಕ ಅಂಶಗಳನ್ನು ವಿವರಿಸಿದರು. ಸ್ವಚ್ಛತಾ ಕಾರ್ಮಿಕರು ನಮ್ಮ ನಗರವನ್ನು ಸ್ವಚ್ಛವಾಗಿ ಇಡಲು ಹಗಲು-ರಾತ್ರಿ ಶ್ರಮಿಸುತ್ತಿದ್ದಾರೆ. ಈ ಯೋಜನೆಯ ಮೂಲಕ ನಾವು ಅವರ ಶ್ರಮವನ್ನು ಗೌರವಿಸುತ್ತಿದ್ದೇವೆ. ಅವರು ಉತ್ತಮ ಉಪಹಾರ ಸೇವಿಸಲಿ ಎನ್ನುವುದು ಈ ಯೋಜನೆಯ ಉದ್ದೇಶವಾಗಿದೆ. ಪ್ರತಿದಿನದ ಉಪಾಹಾರಕ್ಕಾಗಿ ನೇರ ಹಣ ಪಾವತಿಸುವ ಈ ವ್ಯವಸ್ಥೆ ಕಾರ್ಮಿಕರ ಗೌರವವನ್ನು ಹೆಚ್ಚಿಸುವುದರೊಂದಿಗೆ ಇತರೆ ನಗರಗಳಿಗೆ ಮಾದರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಮುಖ್ಯ ಆಡಳಿತಾಧಿಕಾರಿ ಮದನ್ ಮೋಹನ್, ಪ್ರಧಾನ ಮುಖ್ಯ ಎಂಜನಿಯರ್ ಬಿ.ಎಸ್ ದಲಾಯತ್, ಮುಖ್ಯ ಎಂಜಿನಿಯರ್ ಎಸ್.ವಿ ವೆಂಕಟೇಶ,ರಾಜೀವ್, ದೇವರಾಜ್, ಜಯಶಂಕರ್, ಪರಮೇಶ, ಮುಖ್ಯ ಲೆಕ್ಕಾಧಿಕಾರಿಗಳು ಹಾಗೂ ಆರ್ಥಿಕ ಸಲಹೆಗಾರರಾದ ಸುಬ್ಬರಾಮಯ್ಯ, ಜಲಮಂಡಳಿ ನೌಕರ ಸಂಘದ ಅಧ್ಯಕ್ಷರಾದ ಗೋವಿಂದರಾಜು, ಬೆಂಗಳೂರು ನೀರು ಸರಬರಾಜು ಹಾಗೂ ಸ್ಯಾನಿಟರಿ ಅಸೋಸಿಯೇಷನ್ ವರ್ಕರ್ಸ್ ಯೂನಿಯನ್ ಅಧ್ಯಕ್ಷರಾದ ಸಿದ್ದಪ್ಪ ಸೇರಿದಂತೆ ಮಂಡಳಿಯ ಅಧಿಕಾರಿಗಳು ಉಪಸ್ಥಿತರಿದ್ದರು.