ಗದಗ: ಮಸೀದಿಯೊಳಗೆ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ, ಪೂಜಿಸುವ ಮೂಲಕ ಭಾವೈಕ್ಯತೆ ಮೆರೆದ ಘಟನೆ ಜಿಲ್ಲೆಯ ರೋಣ ತಾಲೂಕಿನ ಸಂದಿಗವಾಡ (Sandigawada) ಗ್ರಾಮದಲ್ಲಿ ಕಂಡುಬಂದಿದೆ.
ಜಾತಿ, ಧರ್ಮಗಳ ಹೆಸರಿನಲ್ಲಿ ಕಿತ್ತಾಟ ಮಾಡುವವರಿಗೆ ಸಂದಿಗವಾಡ ಗ್ರಾಮಸ್ಥರು ಮಾದರಿಯಾಗಿದೆ. ಕಳೆದ 3 ವರ್ಷಗಳಿಂದ ಸಂದಿಗವಾಡದ ಮಸೀದಿಯಲ್ಲಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುತ್ತಾ ಬಂದಿದ್ದಾರೆ. ಸ್ವತಃ ಮುಸ್ಲಿಂ ಯುವಕರೇ ಸೇರಿ ಗಣೇಶ ಮೂರ್ತಿಯನ್ನು ತಂದು ಮಸೀದಿಯಲ್ಲಿ ಪ್ರತಿಷ್ಠಾಪಿಸಿದ್ದು ಗಮನಾರ್ಹವಾಗಿದೆ. ಮುಸ್ಲಿಂ ಯುವಕರ ಜೊತೆಗೆ ಹಿಂದುಗಳು ಸೇರಿ ಒಟ್ಟಾಗಿ ಗಣೇಶನ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಳ್ಳುವ ಮೂಲಕ ಸಾಮರಸ್ಯ, ಭಾವೈಕ್ಯತೆಯಿಂದ ಗಣೇಶ ಹಬ್ಬವನ್ನು (Ganesha Chaturthi) ಆಚರಿಸಿದ್ದಾರೆ. ಇದನ್ನೂ ಓದಿ: ಡಿಕೆಶಿ ಒಂದು ಕಾಲು ಬಿಜೆಪಿಯಲ್ಲಿ ಇಟ್ಟಿದ್ದಾರೆ: ಯತ್ನಾಳ್ ಹೊಸ ಬಾಂಬ್
ಮಸೀದಿಯಲ್ಲಿನ ವಿನಾಯಕನಿಗೆ ಮುಸ್ಲಿಂ ಯುವಕರೇ ಮೊದಲ ಪೂಜೆಯನ್ನು ಸಲ್ಲಿಸಿದ್ದಾರೆ. ಮಸೀದಿಯ ವಿಘ್ನೇಶ್ವರನನ್ನು ನೋಡಲು ಗದಗ ಎಸ್ಪಿ ರೋಹನ್ ಜಗದೀಶ್, ನರಗುಂದ ಡಿವೈಎಸ್ಪಿ ಪ್ರಭು, ರೋಣ ಸಿಪಿಐ ಸೇರಿದಂತೆ ಅನೇಕರು ಆಗಮಿಸಿದ್ದರು. ಇದನ್ನೂ ಓದಿ: ಸೋಮವಾರ ಮೈಸೂರಿಗೆ ರಾಷ್ಟ್ರಪತಿ ಮುರ್ಮು – ಅರಮನೆಗೆ ಭೇಟಿ, ಚಾಮುಂಡಿ ಬೆಟ್ಟದಲ್ಲೂ ವಿಶೇಷ ಪೂಜೆ
ದೀಪಾವಳಿ, ದಸರಾ, ಯುಗಾದಿ, ಹೋಳಿ, ಜಾತ್ರೆ, ಮೊಹರಂ, ರಂಜಾನ್, ಈದ್‌ಮಿಲಾದ್, ಗಣೇಶ ಚತುರ್ಥಿ ಹೀಗೆ ಗ್ರಾಮದಲ್ಲಿ ಪ್ರತಿಯೊಂದು ಹಬ್ಬ ಹರಿದಿನಗಳನ್ನು ಯಾವುದೇ ಜಾತಿ-ಭೇದವಿಲ್ಲದೇ ಆಚರಿಸಿಕೊಂಡು ಬರುವ ಮೂಲಕ ಸಂದಿಗವಾಡ ಗ್ರಾಮಸ್ಥರು ಭಾವೈಕ್ಯತೆಗೆ ಸಾಕ್ಷಿಯಾಗಿದ್ದಾರೆ.