– ಟಿಯಾಂಜಿನ್‌ನಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಸ್ಥೆಯ ಶೃಂಗಸಭೆ
– ಮೋದಿ- ಕ್ಸಿ ಜಿನ್‌ಪಿಂಗ್ ಮಧ್ಯೆ ದ್ವಿಪಕ್ಷೀಯ ಸಭೆ
ಬೀಜಿಂಗ್: ಪರಸ್ಪರ ನಂಬಿಕೆ, ಗೌರವ ಮತ್ತು ಸೂಕ್ಷ್ಮತೆಯ ಆಧಾರದ ಮೇಲೆ ಭಾರತ-ಚೀನಾ (India-China) ಸಂಬಂಧಗಳನ್ನು ಮುಂದಕ್ಕೆ ಕೊಂಡೊಯ್ಯಲು ಬದ್ಧರಾಗಿರುವುದಾಗಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಹೇಳಿದರು.
ಚೀನಾದ ಟಿಯಾಂಜಿನ್‌ನಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯಲ್ಲಿ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ (Xi Jinping) ದ್ವಿಪಕ್ಷೀಯ ಮಾತುಕತೆ ನಡೆಸಿದರು.
ಕಳೆದ ವರ್ಷ ರಷ್ಯಾದಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯನ್ನು ಪ್ರಸ್ತಾಪಿಸಿದ ಮೋದಿ, ಕಜಾನ್‌ನಲ್ಲಿ ನಾವು ಬಹಳ ಫಲಪ್ರದ ಚರ್ಚೆಗಳನ್ನು ನಡೆಸಿದ್ದೇವೆ, ಇದು ನಮ್ಮ ಸಂಬಂಧಗಳಿಗೆ ಸಕಾರಾತ್ಮಕ ನಿರ್ದೇಶನವನ್ನು ನೀಡಿತು. ಗಡಿಯಲ್ಲಿ ಸೇನೆಯನ್ನು ಪರಸ್ಪರ ಹಿಂದಕ್ಕೆ ಪಡೆದ ನಂತರ ಶಾಂತಿ ಮತ್ತು ಸ್ಥಿರತೆಯ ವಾತಾವರಣ ನಿರ್ಮಾಣವಾಗಿದೆ ಎಂದರು.
#WATCH | Tianjin, China: During his bilateral meeting with Chinese President Xi Jinping, Prime Minister Narendra Modi says, “I congratulate you on China’s successful chairmanship of the SCO. I thank you for the invitation to visit China and for our meeting today.”
(Source:… pic.twitter.com/KGFc8Curi6
— ANI (@ANI) August 31, 2025
ಭಾರತ ಮತ್ತು ಚೀನಾದಲ್ಲಿರುವ 2.8 ಬಿಲಿಯನ್ ಜನರ ಯೋಗಕ್ಷೇಮವು ನಮ್ಮ ದೇಶಗಳ ನಡುವಿನ ಸಹಕಾರವನ್ನು ಅವಲಂಬಿಸಿದೆ. ಪರಸ್ಪರ ಗೌರವ, ವಿಶ್ವಾಸ ಮತ್ತು ಸೂಕ್ಷ್ಮತೆಯ ಆಧಾರದ ಮೇಲೆ ನಮ್ಮ ಸಂಬಂಧವನ್ನು ಮುಂದಕ್ಕೆ ಕೊಂಡೊಯ್ಯಲು ಭಾರತ ಬದ್ಧವಾಗಿದೆ ಎಂದು ಪ್ರಧಾನಿ ಮೋದಿ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ಗೆ ಹೇಳಿದರು.
ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮಾತನಾಡಿ, ಜಗತ್ತು ಪರಿವರ್ತನೆಯತ್ತ ಸಾಗುತ್ತಿದೆ. ಚೀನಾ ಮತ್ತು ಭಾರತ ಎರಡು ಅತ್ಯಂತ ನಾಗರಿಕ ರಾಷ್ಟ್ರಗಳಾಗಿವೆ. ನಾವು ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶಗಳಾಗಿದ್ದೇವೆ ಮತ್ತು ಜಾಗತಿಕ ದಕ್ಷಿಣದ ಭಾಗವಾಗಿದ್ದೇವೆ. ಸ್ನೇಹಿತರಾಗಿ ಒಳ್ಳೆಯ ನೆರೆಹೊರೆಯವರಾಗಿ ಇರಲು ಡ್ರ್ಯಾಗನ್ ಮತ್ತು ಆನೆ ಒಟ್ಟಿಗೆ ಬರುವುದು ಅತ್ಯಗತ್ಯ ಎಂದು ತಿಳಿಸಿದರು.
ಏಳು ವರ್ಷಗಳ ಬಳಿಕ ಮೋದಿ ಅವರು ಚೀನಾಕ್ಕೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರಷ್ಯಾದ ಕಚ್ಚಾ ತೈಲವನ್ನು ಖರೀದಿಸಿದ್ದಕ್ಕೆ 25% ದಂಡ ಸೇರಿದಂತೆ ಭಾರತೀಯ ಸರಕುಗಳ ಮೇಲೆ ಶೇ. 50 ರಷ್ಟು ಸುಂಕ ವಿಧಿಸಿದ ಬಳಿಕ ಉಂಟಾಗಿರುವ ಭಾರತ ಮತ್ತು ಅಮೆರಿಕ ಸಂಬಂಧಗಳಲ್ಲಿನ ಬಿಕ್ಕಟ್ಟಿನ ಮಧ್ಯೆ ಭಾರತ-ಚೀನಾ ಮಾತುಕತೆ ನಡೆಸುತ್ತಿದೆ. ಇದನ್ನೂ ಓದಿ: ಭಾರತಕ್ಕೆ 50% ತೆರಿಗೆ ಹಾಕಿ – ಯುರೋಪ್‌ಗೆ ಅಮೆರಿಕ ಮನವಿ
#WATCH | Tianjin, China: During his bilateral meeting with Chinese President Xi Jinping, Prime Minister Narendra Modi says, “Last year in Kazan, we had very fruitful discussions which gave a positive direction to our relations. After the disengagement on the border, an atmosphere… pic.twitter.com/IT9leLWI3j
— ANI (@ANI) August 31, 2025
2020 ರ ಜೂನ್‌ನಲ್ಲಿ ಪೂರ್ವ ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಭಾರತೀಯ ಮತ್ತು ಚೀನೀ ಸೈನಿಕರ ನಡುವೆ ನಡೆದ ಘರ್ಷಣೆಗಳ ನಂತರ ಭಾರತ ಮತ್ತು ಚೀನಾ ನಡುವಿನ ಸಂಬಂಧಗಳು ಹದಗೆಟ್ಟವು. ಡೆಮ್‌ಚೋಕ್ ಮತ್ತು ಡೆಪ್ಸಾಂಗ್‌ನ್‌ನಿಂದ ಎರಡು ದೇಶಗಳು ಸೈನಿಕರನ್ನು ಹಿಂದಕ್ಕೆ ಪಡೆದ ನಂತರ ಭಾರತ ಮತ್ತು ಚೀನಾದ ಸಂಬಂಧ ಸ್ವಲ್ಪ ಸುಧಾರಣೆಯಾಗತೊಡಗಿತು.
ಶಾಂಘೈ ಸಹಕಾರ ಸಂಸ್ಥೆಯಲ್ಲಿ 10 ದೇಶಗಳು ಸದಸ್ಯ ರಾಷ್ಟ್ರಗಳಾಗಿವೆ. ಚೀನಾ, ಭಾರತದ ಜೊತೆಗೆ ಗುಂಪಿನಲ್ಲಿ ರಷ್ಯಾ, ಇರಾನ್, ಕಝಾಕಿಸ್ತಾನ್, ಕಿರ್ಗಿಸ್ತಾನ್, ಪಾಕಿಸ್ತಾನ, ತಜಿಕಿಸ್ತಾನ್, ಉಜ್ಬೇಕಿಸ್ತಾನ್ ಮತ್ತು ಬೆಲಾರಸ್ ಇವೆ. ಚೀನಾದಲ್ಲಿ ನಡೆಯುತ್ತಿರುವ ಈ ವರ್ಷದ SCO ಪ್ಲಸ್ ಶೃಂಗಸಭೆಯಲ್ಲಿ ಇಪ್ಪತ್ತು ದೇಶಗಳು ಭಾಗಿಯಾಗುತ್ತಿವೆ.
