ಹಿರಿಯ ನಟ ಬಾಲಣ್ಣ ಅವರ ಅಭಿಮಾನ್ ಸ್ಟುಡಿಯೋಗೆ (Abhiman Studio) ಸರ್ಕಾರ ನೀಡಿದ್ದ ಜಾಗವನ್ನು ವಶಪಡಿಸಿಕೊಳ್ಳಬೇಕು ಅಂತ ಬೆಂಗಳೂರಿನ ಜಿಲ್ಲಾಧಿಕಾರಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಪತ್ರ ಬರೆದಿದ್ದಾರೆ. ಈ ಪತ್ರ ಬರೆದ ಬೆನ್ನಲ್ಲೇ ಡಾ.ವಿಷ್ಣುಸೇನಾ ಸಮತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್, ಅರಣ್ಯ ಸಚಿವ ಈಶ್ವರ್ ಬಿ ಖಂಡ್ರೆ ಅವರನ್ನು ಭೇಟಿ ಮಾಡಿದ್ದಾರೆ. ಅಭಿಮಾನ್ ಸ್ಟುಡಿಯೋದಲ್ಲಿದ್ದ ವಿಷ್ಣು ಸಮಾಧಿಯನ್ನು ನೆಲಸಮಗೊಳಿಸಲಾಗಿದೆ. ಆ ಸಮಾಧಿಯನ್ನು ಮರುಸ್ಥಾಪಿಸಬೇಕು ಮತ್ತು ಅಭಿಮಾನ್ ಸ್ಟುಡಿಯೋ ಜಾಗವನ್ನು ಸರ್ಕಾರ ವಾಪಸ್ಸು ಪಡೆಯಬೇಕು ಅಂತ ಮನವಿ ನೀಡಿದ್ದಾರೆ.
ಭಾರಿ ವಿವಾದದಿಂದ ಕೂಡಿದ್ದ ಬೆಂಗಳೂರಿನ ಅಭಿಮಾನ್ ಸ್ಡುಡಿಯೋ ಮುಟ್ಟುಗೋಲಿಗೆ ಆಗ್ರಹ ಕೇಳಿ ಬಂದಿತ್ತು. ಅಭಿಮಾನ್ ಸ್ಡುಡಿಯೋಗಾಗಿ ಬಾಲಕೃಷ್ಣಗೆ ನೀಡಿದ್ದ ಪ್ರದೇಶವನ್ನ ಹಿಂಪಡೆಯಲು ಹೋರಾಟ ಕೂಡ ಮಾಡಲಾಗಿತ್ತು. ಇದೀಗ ಅರಣ್ಯ ಇಲಾಖೆಯು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದೆ. ಸಹಜವಾಗಿಯೇ ಇದು ಕುತೂಹಲಕ್ಕೆ ಕಾರಣವಾಗಿದೆ.ಇದನ್ನೂ ಓದಿ: ಕಿಚ್ಚನ ಬರ್ತ್‌ಡೇ ಸೆಲಬ್ರೇಷನ್‌ಗೆ ಸ್ಥಳ, ಟೈಮಿಂಗ್ ಫಿಕ್ಸ್!
ಜಿಲ್ಲಾಧಿಕಾರಿಗೆ ಬರೆದ ಪತ್ರದಲ್ಲಿ ಏನಿದೆ?
ಇದೇ ಆಗಸ್ಟ್ 7 ರಂದು ರಾತ್ರೋರಾತ್ರಿ ಅಭಿಮಾನ್ ಸ್ಡುಡಿಯೋದಲ್ಲಿದ್ದ ಕನ್ನಡದ ಮೇರುನಟ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಸಮಾಧಿಯನ್ನ ಧ್ವಂಸ ಮಾಡಲಾಗಿತ್ತು. ಈ ಕಾರಣಕ್ಕೆ ಭಾರೀ ವಿವಾದಕ್ಕೀಡಾಗಿದ್ದ ಜಾಗವನ್ನ ಇದೀಗ ಸರ್ಕಾರ ವಶಪಡಿಸಿಕೊಳ್ಳುವಂತೆ ಅರಣ್ಯ ಇಲಾಖೆ ಡಿಸಿ ಜಗದೀಶ್ ಅವರಿಗೆ ಪತ್ರ ಬರೆದಿದೆ. ಈ ಮೂಲಕ ಅಭಿಮಾನ್ ಸ್ಟುಡಿಯೋ ಜಾಗ ವಿವಾದ ಮತ್ತೊಂದು ತಿರುವು ಪಡೆದುಕೊಂಡಿದೆ.
ಬೆಂಗಳೂರು ದಕ್ಷಿಣ ತಾಲೂಕು ಕೆಂಗೇರಿ ಹೋಬಳಿ, ಮೈಲಸಂದ್ರ ಗ್ರಾಮಕ್ಕೆ ಸೇರಿದ ಸರ್ವೇ ನಂ, 26ರಲ್ಲಿ ಅಭಿಮಾನ್ ಸ್ಟುಡಿಯೋಗೆ ಸರ್ಕಾರ ನೀಡಿರುವ ಅರಣ್ಯ ಪ್ರದೇಶ ಆದೇಶವನ್ನು ರದ್ದುಪಡಿಸಿ ಜಾಗ ಹಿಂಪಡೆಯುವ ಬಗ್ಗೆ ಅರಣ್ಯ ಇಲಾಖೆ ಪತ್ರದಲ್ಲಿ ಉಲ್ಲೇಖಿಸಿದೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್ ರವೀಂದ್ರಕುಮಾರ್ ಅವರು ಜಿಲ್ಲಾಧಿಕಾರಿ ಜಗದೀಶ್ ಅವರಿಗೆ ಪತ್ರ ಬರೆದಿದ್ದಾರೆ. ಸರ್ಕಾರಿ ಆದೇಶದ ಅನ್ವಯ 09-04-1969 ರಂದು ರಂದು 20 ಎಕರೆ ಪ್ರದೇಶವನ್ನು ಟಿ ಎನ್ ಬಾಲಕೃಷ್ಣ ರವರಿಗೆ ಅಭಿಮಾನ್ ಚಿತ್ರ ಸ್ಡುಡಿಯೋ ಸ್ಥಾಪಿಸುವ ಸಲುವಾಗಿ 20 ವರ್ಷಗಳ ಅವಧಿಗೆ ಗೇಣಿ ಆಧಾರದ ಮೇಲೆ ನೀಡಲಾಗಿತ್ತು. ಸರ್ಕಾರಿ ಆದೇಶದಲ್ಲಿ ಅಭಿಮಾನ್ ಸ್ಡುಡಿಯೋ ಅಭಿವೃದ್ಧಿ ಹೊರತಾಗಿ ಬೇರೆ ಯಾವುದೇ ಉದ್ದೇಶಕ್ಕೆ ಬಳಸದಿರಲು ಮಾರಾಟ/ ಪರಭಾರೆ ಕೊಡದಿರಲು ಷರತ್ತು ವಿಧಿಸಿ ಆದೇಶ ನೀಡಲಾಗಿತ್ತು. ಉಲ್ಲಂಘನೆಯಾದಲ್ಲಿ ಮಂಜೂರಾತಿ ರದ್ಧುಪಡಿಸಿ ಭುಮಿಯನ್ನು ಸರ್ಕಾರ ಹಿಂಪಡೆಯಲಾಗುವುದು ಎನ್ನುವ ಆದೇಶ ಸ್ಪಷ್ಟವಾಗಿ ನಮೂದಿಸಲಾಗಿತ್ತು. ಇದನ್ನ ಮನವಿ ಪತ್ರದಲ್ಲಿ ಮತ್ತೆ ಸೂಚಿಸಿ ಅರಣ್ಯ ಇಲಾಖೆ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ.
ಇದೀಗ ವಿಷ್ಣು ಅಭಿಮಾನಿಗಳಿಂದ ಮೇಲಿಂದ ಮೇಲೆ ಮರು ತನಿಖೆಗೆ ಆದೇಶ, ಅಭಿಮಾನ್ ಸ್ಡುಡಿಯೋ ಉದ್ದೇಶ ಉಲ್ಲಂಘನೆ ವಿಚಾರವಾಗಿ ಕಾನೂನು ಹೋರಾಟ ಜಾರಿಯಲ್ಲಿರುವ ವೇಳೆಯೇ ಪ್ರದೇಶವನ್ನ ಸರ್ಕಾರ ವಶಪಡಿಸಿಕೊಳ್ಳುವಂತೆ ಅರಣ್ಯ ಇಲಾಖೆ ಕೋರಿದೆ. ಅಂದಹಾಗೆ ಬಾಲಕೃಷ್ಣ ನಿಧನದ ಬಳಿಕ ಅವರ ಮಕ್ಕಳಾದ ಗಣೇಶ್ ಹಾಗೂ ಮೊಮ್ಮಗ ಕಾರ್ತಿಕ್ ಅನಧಿಕೃತವಾಗಿ 10 ಎಕರೆ ಆಸ್ತಿ ಮಾರಾಟ ಮಾಡಿದ್ದಾರೆ ಎಂದು ನಮೂದಿಸಲಾಗಿದೆ. ಅಭಿಮಾನ್ ಸ್ಡುಡಿಯೋ ನವೀಕರಣ ಮಾಡುವ ಸಲುವಾಗಿ ಬೇಕಾಗುವ ಹಣಕ್ಕಾಗಿ ಆಸ್ತಿ ಮಾರಾಟಕ್ಕೆ ಅನುಮತಿ ಕೇಳಿ ಮಾರಿದ್ದರು. ಆದರೆ ಸ್ಡುಡಿಯೋ ಅಭಿವೃದ್ಧಿಪಡಿಸದೆ ವೈಯಕ್ತಿಕವಾಗಿ ಉಪಯೋಗಿಸಿಕೊಂಡಿದ್ದಾರೆ. ಹೀಗಾಗಿ ಇಲ್ಲಿಯೂ ಉದ್ದೇಶವನ್ನ ಉಲ್ಲಂಘನೆ ಮಾಡಿದ್ದಾರೆ ಅನ್ನೋದು ಕೂಡ ಅರ್ಜಿ ಪತ್ರದಲ್ಲಿ ದಾಖಲಾಗಿದೆ. ಹೀಗಾಗಿ ಕೂಡಲೇ ಅಭಿಮಾನ್ ಸ್ಡುಡಿಯೋ ಆಸ್ತಿಯನ್ನ ಮುಟ್ಟುಗೋಲು ಹಾಕಬೇಕೆನ್ನುವುದು ಅರಣ್ಯ ಇಲಾಖೆಯ ಬೇಡಿಕೆಯಾಗಿದೆ.ಇದನ್ನೂ ಓದಿ: ರಿಷಿ ಹೊಸ ಸಿನಿಮಾಗೆ ಮುಹೂರ್ತ: ಬಿಗ್ ಬಾಸ್ ಸ್ಪರ್ಧಿ ನಾಯಕಿ