– ಜನಿವಾರ ಧರಿಸೋದು ಜಾತಿ ವೇಷಕ್ಕಲ್ಲ ಎಂದ ಧರ್ಮಾಧಿಕಾರಿ
– ಶ್ರೀಕ್ಷೇತ್ರದೊಂದಿಗೆ ನಾವಿದ್ದೇವೆ – ಜೈನ ಮಠಗಳ ಭಟ್ಟಾರಕರಿಂದ ಅಭಯ
ಮಂಗಳೂರು: ಧರ್ಮಸ್ಥಳದ (Dharmasthala) ಬೆಳವಣಿಗೆಯಿಂದ ಪುರುಷರಿಗಿಂತ, ಮಹಿಳೆಯರೇ ಹೆಚ್ಚಾಗಿ ಕಣ್ಣೀರಿಟ್ಟಿದ್ದಾರೆ, ವೇದನೆ ಪಡ್ತಿದ್ದಾರೆ. ಕೆಲ ಹೆಣ್ಣುಮಕ್ಕಳು ಯಾವುದೇ ರೀತಿಯ ಹೋರಾಟಕ್ಕೆ, ಪ್ರತಿಭಟನೆಗೂ ತಯಾರಿದ್ದಾರೆ. ಆದ್ರೆ ಅಂತಹ ಹೋರಾಟ ಅಗತ್ಯವಿಲ್ಲ. ಎಲ್ಲವೂ ಮಂಜುನಾಥ ಸ್ವಾಮಿಗೆ ಬಿಟ್ಟಿದ್ದೇವೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ಧರ್ಮಸ್ಥಳ ಅಪಪ್ರಚಾರ ಖಂಡಿಸಿ ಇಂದು ನಡೆದ ಜೈನ ಮುನಿಗಳ ಕಾರ್ಯಕ್ರಮದಲ್ಲಿ ರಾಜ್ಯದ ಎಲ್ಲಾ ಜೈನ ಮಠಗಳ ಭಟ್ಟಾರಕರು ಪಾಲ್ಗೊಂಡಿದ್ದರು. ವಿವಿಧ ಜೈನ ಸಂಘ (Jains Union) ಸಂಸ್ಥೆಗಳಿಂದ ನೂರಾರು ಜನ ಭಾಗಿಯಾಗಿದ್ದರು. ಇದಕ್ಕೂ ಮುನ್ನ ಧರ್ಮಸ್ಥಳ ಪ್ರವೇಶದ್ವಾರದಿಂದ ದೇಗುಲದ ವರೆಗೆ ಪಾದಯಾತ್ರೆ ನಡೆಸಿದರು. ಬಳಿಕ ಧರ್ಮಸ್ಥಳದ ಅಮೃತ ವರ್ಷಿಣಿ ಸಭಾಂಗಣದಲ್ಲಿ ಜೈನ ಸಮುದಾಯದ ಮುನಿಗಳು, ಜೈನ ಮಠಗಳ ಭಟ್ಟಾರಕರ ನೇತೃತ್ವದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಿತು.
ಈ ವೇಳೆ ಮಾತನಾಡಿದ ಡಾ.ಡಿ.ವೀರೇಂದ್ರ ಹೆಗ್ಗಡೆ (Veerendra Heggade), ಇಂದು ಶ್ರೀ ಕ್ಷೇತ್ರಕ್ಕೆ ಬಹಳ ವಿಶೇಷವಾದ ಕಳೆ ಬಂದಿದೆ. ಇಷ್ಟೊಂದು ಆಶಯಧಾರಿಗಳು, ಆಶೀರ್ವಚನ ನೀಡುತ್ತಿರೋದು ತುಂಬಾ ದೊಡ್ಡದು. ಇಷ್ಟೊಂದು ಸಂಖ್ಯೆಯಲ್ಲಿ ಕ್ಷೇತ್ರಕ್ಕೆ ಬಂದಿರೋದು ಸಂತಸ ತಂದಿದೆ. ಇಂದು ಮೂಡಬಿದ್ರೆ ಭಟ್ಟಾರಕರ ಪಟ್ಟಾಭೀಷೇಕದ ದಿನ, ಅವರು ಕೂಡ ನಿಮ್ಮೊಂದಿಗಿದ್ದೇವೆ ಎಂಬ ಸಂದೇಶ ಕೊಟ್ಟಿದ್ದಾರೆ ಇದಕ್ಕಿಂತ ದೊಡ್ಡ ಮಾತು ನನಗೆ ಬೇಡ ಎಂದು ತಿಳಿಸಿದರು.
ಎಸ್‌ಐಟಿ ತನಿಖೆ ನಡೆಯುತ್ತಿರೋದ್ರಿಂದ ಹೆಚ್ಚು ಮಾತನಾಡಬಾರದು ಅಂತ ಆದೇಶ ಆಗಿದೆ. ಆದ್ರೆ ಭಕ್ತರೊಬ್ಬರು ನನಗೆ ಹೇಳ್ತಿದ್ದರು. ಈ ಬೆಳವಣಿಗೆ ಆದಾಗಿನಿಂದ ಪುರುಷರಿಗಿಂತ ಮಹಿಳೆಯರು ಹೆಚ್ಚು ಕಣ್ಣೀರು ಹಾಕಿದ್ದಾರೆ, ವೇದನೆ ಪಡ್ತಿದ್ದಾರೆ. ನಮಗೆ, ಕುಟುಂಬಕ್ಕೆ ನೆಮ್ಮದಿಯಿಲ್ಲ. ನೀವೇ ಏನಾದ್ರೂ ಮಾಡಿ ಅಂತ ಹೇಳಿಕೊಂಡಿದ್ರು. ಕೆಲ ಹೆಣ್ಣುಮಕ್ಕಳು ಯಾವುದೇ ರೀತಿಯ, ಹೋರಾಟಕ್ಕೆ, ಪ್ರತಿಭಟನೆಗೆ ತಯಾರಿದ್ದಾರೆ. ಆದ್ರೆ ಅಂತಹ ಹೋರಾಟ ಅಗತ್ಯವಿಲ್ಲ. ಎಲ್ಲವೂ ಸ್ವಾಮಿ ಮೇಲೆ ಬಿಟ್ಟದ್ದೇವೆ, ಅದರ ಫಲ ಈಗ ಸಿಗುತ್ತಿದೆ ಎಂದು ತಿಳಿಸಿದರು.
ನಾವು ಮಾಡುವ ಪ್ರಯತ್ನಗಳಿಗೆ ಸ್ವಾಮಿಯ ಅನುಗ್ರಹ ಇದ್ದೇ ಇದೆ. ನಾವು ಸತ್ಯ ಬಿಟ್ಟು ಹಿಂದೆ ಹೋಗಿಲ್ಲ, ಮುಂದೆಯೂ ಹೋಗಲ್ಲ. ಆದ್ದರಿಂದ ಭಕ್ತರು ತಾಳ್ಮೆಯಿಂದಿರಬೇಕು, ಶಾಂತಿ ಕಾಪಾಡಬೇಕು ಎಂದು ಕರೆ ನೀಡಿದರು.
ಜನಿವಾರ ಇರೋದು ಜಾತಿ ವೇಷಕ್ಕಲ್ಲ
ಮುಂದುವರಿದು… ಸತ್ಯಕ್ಕೆ ಎರಡು ಮುಖ ಇಲ್ಲ, ಒಂದೇ ಮುಖ. ವ್ಯಕ್ತಿ ಯಾವುದೇ ಧರ್ಮವಾಗಲಿ, ಆ ಧರ್ಮಕ್ಕೆ ಶರಣಾಗಬೇಕು. ಇಲ್ಲದಿದ್ದರೆ ಅವರು ಅನುಯಾಯಿಗಳೇ ಅಲ್ಲ. ಇಷ್ಟೊಂದು ಜನ ಶ್ರೀಗಳು ನಮಗೆ ಧೈರ್ಯ ಕೊಟ್ಟಿದ್ದಾರೆ. ಎಲ್ಲರ ಮೇಲೂ ಮಂಜುನಾಥನ ಆಶೀರ್ವಾದ ಇಲ್ಲಲಿ ಎಂದರಲ್ಲದೇ ಜನಿವಾರ ಜಾತಿ ವೇಷಕ್ಕಲ್ಲ, ಮೂರು ಧರ್ಮಗಳ ಆಚರಿಸೋದಕ್ಕಾಗಿ ಜನಿವಾರ ಧಾರಣೆ ಮಾಡ್ತೀವಿ. ಅದೇ ರೀತಿ ದಶಲಕ್ಷಣ ಇರೋದು ಪೂಜೆಗಲ್ಲ ಪ್ರಾರ್ಥನೆ ಮಾಡೋಕೆ ಎಂದು ಕಿವಿಮಾತು ಹೇಳಿದರು.
ಬಳಿಕ ರಾಜ್ಯದ ಜೈನ ಭಟ್ಟಾರಕರು ವೀರೇಂದ್ರ ಹೆಗ್ಗೆಡೆ ಅವರನ್ನ ಸನ್ಮಾನಿಸಿ ಗೌರವಿಸಿದರು.