ಗದಗ: ಇಬ್ಬರು ಅಂತರರಾಜ್ಯ ಖತರ್ನಾಕ್ ಸರಗಳ್ಳರನ್ನ ಬಂಧಿಸುವಲ್ಲಿ ಗದಗ ಜಿಲ್ಲೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಉತ್ತರ ಪ್ರದೇಶದ ರವಿ ಬಾವರಾ (33), ಶಾಹಿಲ್ ಮೊಹಮ್ಮದ್ (25) ಬಂಧಿತ ಕಳ್ಳರು. ಆ.03 ರಂದು ಶಿವಸಾಯಿ ನಗರದಲ್ಲಿ ಮಹಿಳೆಯೊಬ್ಬರು ಬೆಳಗ್ಗೆ ಬನ್ನಿ ಕಟ್ಟೆಗೆ ಹೋಗುತ್ತಿದ್ದಾಗ ಬೈಕ್‌ನಲ್ಲಿ ಬಂದಿದ್ದ ಇಬ್ಬರು ಸರಗಳ್ಳರು 1 ಲಕ್ಷ 20 ಸಾವಿರ ರೂ. ಮೌಲ್ಯದ 20 ಗ್ರಾಂ ತೂಕದ ಬಂಗಾರದ ಮಂಗಳ ಸೂತ್ರವನ್ನು ಕಿತ್ತು ಪರಾರಿಯಾಗಿದ್ದರು. ಇದನ್ನೂ ಓದಿ: ಬಾತ್ ಟಬ್‌ನಲ್ಲಿ ಮೂವರು ಮಕ್ಕಳನ್ನು ಕೊಂದು, ತಾಯಿ ಆತ್ಮಹತ್ಯೆಗೆ ಯತ್ನ
ಅಲ್ಲದೇ ಖದೀಮರು ಸಂಭಾಪೂರ ರಸ್ತೆಯ ಮನೆ ಮುಂದೆ ಕಸ ಗುಡಿಸುತ್ತಿದ್ದ ಮಹಿಳೆಯ ಮಾಂಗಲ್ಯ ಸರವನ್ನು ಎಗರಿಸಿದ್ದರು. ಆ ಕುರಿತು ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ: ತವರು ಮನೆಯಿಂದ ಹಣ ತರದ ಪತ್ನಿಯನ್ನ ಬರ್ಬರವಾಗಿ ಕೊಂದ ಪತಿಗೆ ಮರಣದಂಡನೆ
ಪ್ರಕರಣ ಬೆನ್ನತ್ತಿದ ಬೆಟಗೇರಿ ಬಡಾವಣೆ ಪೊಲೀಸರು ಎಸ್ಪಿ ರೋಹನ್ ಜಗದೀಶ್ ಮಾರ್ಗದರ್ಶನ ಹಾಗೂ ಡಿಎಸ್ಪಿ ನೇತೃತ್ವದಲ್ಲಿ ನಾಲ್ಕು ತಂಡ ರಚಿಸಿ ಕಾರ್ಯಚರಣೆ ಆರಂಭಿಸಿದ್ದರು. ಖದೀಮರು ಕ್ಯಾಟರಿಂಗ್ ಕೆಲಸ ಮಾಡುವುದರ ಜೊತೆಗೆ ಕಳ್ಳತನಕ್ಕೆ ಕೈ ಹಾಕಿದ್ದರು. ಬೈಕ್ ಕಳ್ಳತನ ಮಾಡಿ, ಅದೇ ಬೈಕ್‌ನಲ್ಲಿ ಸರಗಳ್ಳತನ ಮಾಡುತ್ತಿದ್ದರು. ಬೈಕ್‌ನಲ್ಲಿ ಪೆಟ್ರೋಲ್ ಖಾಲಿಯಾದಾಗ ಅಲ್ಲಿಯೇ ಬಿಟ್ಟು, ಬಸ್ ಹತ್ತುತ್ತಿದ್ದರು. ನಂತರ ಪುನಃ ಬೇರೆ ಕಡೆ ಬೈಕ್ ಕಳ್ಳತನ ಮಾಡಿ, ಸರಗಳ್ಳತನವನ್ನು ಮುಂದುವರಿಸಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದರು. ಇದೀಗ ಈ ಇಬ್ಬರು ಅಂತರರಾಜ್ಯ ಕಳ್ಳರನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರಿಂದ ಒಟ್ಟು 5 ಲಕ್ಷ 94 ಸಾವಿರ ರೂ. ಮೌಲ್ಯದ ಚಿನ್ನಾಭರಣ, 2 ಬೈಕ್, 2 ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ. ಡಿವೈಎಸ್ಪಿ ಮುರ್ತುಜಾ ಖಾದ್ರಿ, ಸಿಪಿಐ ಧೀರಜ್ ಶಿಂಧೆ, ಪಿಎಸ್‌ಐ ಮಾರುತಿ ಜೋಗದಂಡಕರ್, ಬಿ.ಟಿ ರಿತ್ತಿ ಮತ್ತು ಅನೇಕ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಪ್ರಕರಣ ಬೇಧಿಸಿದ ಪೊಲೀಸರ ಕಾರ್ಯಕ್ಕೆ ಎಸ್ಪಿ ರೋಹನ್ ಜಗದೀಶ್ ಶ್ಲಾಘಿಸಿ, ಬಹುಮಾನ ಘೋಷಿಸಿದ್ದಾರೆ.