ಮಂಡ್ಯ: ಆತನಿಗೆ 21 ವರ್ಷ ವಯಸ್ಸು, ಆಕೆ ಇನ್ನು ಅಪ್ರಾಪ್ತೆ. ಇಬ್ಬರ ಪ್ರೀತಿಗೆ ಹುಡುಗಿ ಮನೆಯವರ ವಿರೋಧವಿತ್ತು. ಆಕೆಗೆ 18 ವರ್ಷ ತುಂಬಿದ ಬಳಿಕ ಮದುವೆಯಾಗಲು (Marriage) ಕಾಯುತ್ತಿದ್ದ ಯುವಕ ಈಗ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಾನೆ. ಆತನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಕುಟುಂಬಸ್ಥರು, ಅಪ್ರಾಪ್ತೆ ಮನೆಯವರ ವಿರುದ್ಧ ದೂರು ದಾಖಲಿಸಿದ್ದಾರೆ.
ಮೀನು ಹಿಡಿಯಲು ಕೆರೆಗೆ ಬಳಿ ತೆರಳಿದ್ದ ಯುವಕ ಅನುಮಾನದಸ್ಪದವಾಗಿ ಸಾವನ್ನಪ್ಪಿದ್ದಾನೆ. ಮಂಡ್ಯ (Mandya) ಜಿಲ್ಲೆ ಮಳವಳ್ಳಿ ತಾಲೂಕಿನ ರಾಮಂದೂರು ಕೆರೆ ಬಳಿ ಈ ಘಟನೆ ನಡೆದಿದೆ. ರಾಮನಾಥ ಮೋಳೆ ಗ್ರಾಮದ 21 ವರ್ಷದ ಮಂಜುನಾಥ್ ಸಾವಿಗೀಡಾದ್ದಾನೆ. ಆರಂಭದಲ್ಲಿ ಹಳ್ಳಕ್ಕೆ ಬಿದ್ದಿದ್ದ ಆಟೋ, ರಕ್ತದ ಮಡುವಿನಲ್ಲಿ ಸಿಕ್ಕ ಮಂಜುನಾಥ್ ಮೃತದೇಹ ಕಂಡು ಅಪಘಾತ ಎಂದು ಭಾವಿಸಲಾಗಿತ್ತು. ಆದರೆ ತಲೆಯ ಭಾಗಕ್ಕೆ ಕಲ್ಲಿನಿಂದ ಹೊಡೆದಿರುವ ಗುರುತುಗಳು ಆತನ ಸಾವಿನ ಬಗ್ಗೆ ಅನುಮಾನ ಹುಟ್ಟುಹಾಕಿದೆ. ಮಗ ಅಪಘಾತದಲ್ಲಿ ಸತ್ತಿಲ್ಲ, ಕೊಲೆ ಮಾಡಲಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ.
ಅಂದಹಾಗೇ ಮೃತ ಮಂಜುನಾಥ್ ತಂದೆ ಶಿವಸ್ವಾಮಿ ಜೊತೆ ಕೆರೆಗಳಲ್ಲಿ ಮೀನು ಹಿಡಿಯುವ ಕೆಲಸ ಮಾಡ್ತಿದ್ದ, ದೂರದ ಸಂಬಂಧಿ ಮಳವಳ್ಳಿ ತಾಲೂಕಿನ ಗ್ರಾಮವೊಂದರ ಅಪ್ರಾಪ್ತೆಯನ್ನ ಪ್ರೀತಿಸುತ್ತಿದ್ದನಂತೆ. ಕಳೆದ 6 ತಿಂಗಳ ಹಿಂದೆ ಹೆಣ್ಣು ಕೇಳಲು ಹೋದಾಗ ಯುವತಿಯ ಮನೆಯವರು ನಿರಾಕರಿಸಿದ್ದಾರೆ. ಈ ವೇಳೆ ಪೋಷಕರನ್ನ ಬಿಟ್ಟು ಬಂದ ಅಪ್ರಾಪ್ತೆಯನ್ನ ಮಂಜು ತನ್ನ ಅಜ್ಜಿ ಮನೆಯಲ್ಲಿರಿಸಿದ್ದನಂತೆ. ಆಕೆಗೆ 18 ವರ್ಷ ತುಂಬಲು ಇನ್ನು 2 ತಿಂಗಳು ಬಾಕಿ ಇತ್ತು. 18 ವರ್ಷ ತುಂಬಿದ ಬಳಿಕ ಮದುವೆ ಆಗಲು ನಿರ್ಧರಿಸಲಾಗಿತ್ತಂತೆ. ಆದರೆ ಅಪ್ರಾಪ್ತೆಯ ಅಣ್ಣನಿಗೆ ಇದು ಇಷ್ಟವಿರಲಿಲ್ಲ. ಹಿಂದೊಮ್ಮೆ ಮಂಜುಗೆ ಬೆದರಿಕೆ ಕೂಡ ಹಾಕಿದ್ದ ಎನ್ನಲಾಗಿದೆ. ಹಾಗಾಗಿ ಅಪ್ರಾಪ್ತೆ ಅಣ್ಣನ ಮೇಲೆ ಮೃತ ಮಂಜುನಾಥ್ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ ಮಗನ ಸಾವಿನ ಬಗ್ಗೆ ಕುಟುಂಬಸ್ಥರಿಗೆ ಅನುಮಾನ ಹುಟ್ಟಿಕೊಂಡಿದೆ. ಕೊಲೆಯೋ, ಅಪಘಾತವೂ? ಪೊಲೀಸರ ತನಿಖೆಯಲ್ಲಷ್ಟೇ ಬಯಲಾಗಬೇಕು.