ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ (Jammu Kashmir) ಕಳೆದ ಎರಡು ದಿನಗಳಿಂದ ನಿರಂತರ ಮಳೆಯಿಂದಾಗಿ ಹಲವೆಡೆ ಭಾರೀ ಹಾನಿ ಸಂಭವಿಸಿದೆ. ಕಳೆದ ಎರಡು ದಿನಗಳಲ್ಲಿ 41 ಮಂದಿ ಸಾವನ್ನಪ್ಪಿದ್ದಾರೆ.
ವೈಷ್ಣೋದೇವಿ ಯಾತ್ರಾ (Vaishno Devi Yatra) ಮಾರ್ಗದಲ್ಲಿ ಭೂಕುಸಿತಕ್ಕೆ ಬಲಿಯಾದವರ ಸಂಖ್ಯೆ 36ಕ್ಕೆ ಏರಿದೆ. 20 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮತ್ತಷ್ಟು ಜನ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಶಂಕೆಯಿದ್ದು, ರಕ್ಷಣಾ ಕಾರ್ಯ ಮುಂದುವರಿದೆ. ವೈಷ್ಣೋದೇವಿ ದೇಗುಲಕ್ಕೆ ಹೋಗುವ ಮಾರ್ಗದ ಅರ್ಧಕುವರಿಯಲ್ಲಿರುವ ಇಂದರ್ಪ್ರಸ್ಥ ಭೋಜನಾಲಯದ ಬಳಿ ಭೂ ಕುಸಿತ ಸಂಭವಿಸಿತ್ತು. ದೋಡಾ ಜಿಲ್ಲೆಯಲ್ಲಿ ಮೇಘಸ್ಫೋಟ ಸಂಭವಿಸಿ ನಾಲ್ವರು ಮೃತರಾಗಿದ್ದಾರೆ.
ನೂರಾರು ಮನೆಗಳು, ಸೇತುವೆಗಳು, ನೀರಿನಲ್ಲಿ ಕೊಚ್ಚಿ ಹೋಗಿವೆ. ಎಲ್ಲಾ ಜಲಾಶಯಗಳು ತುಂಬಿ ತುಳುಕುತ್ತಿದ್ದು ನದಿಗಳಿಗೆ ನೀರು ಬಿಡಲಾಗಿದೆ. ನದಿಪಾತ್ರಗಳು ಮುಳುಗಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಮೊಬೈಲ್ ಟವರ್‌ಗಳು ಮತ್ತು ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದರಿಂದ ಮೂಲಸೌಕರ್ಯ ತೀವ್ರವಾಗಿ ಹಾನಿಗೊಳಗಾಗಿದೆ. ಇದನ್ನೂ ಓದಿ: ವೈಷ್ಣೋದೇವಿ ಯಾತ್ರಾ ಮಾರ್ಗದಲ್ಲಿ ಮತ್ತೆ ಭೂಕುಸಿತ – ಸಾವಿನ ಸಂಖ್ಯೆ 30ಕ್ಕೆ ಏರಿಕೆ
ಪಂಜಾಬ್‌ನ ಪ್ರವಾಹ ಪೀಡಿತ ಗ್ರಾಮದಿಂದ 22 ಸಿಆರ್‌ಪಿಎಫ್ ಸಿಬ್ಬಂದಿ ಮತ್ತು ಮೂವರು ನಾಗರಿಕರನ್ನು ಸೇನಾ ಹೆಲಿಕಾಪ್ಟರ್‌ನಲ್ಲಿ ರಕ್ಷಣೆ ಮಾಡಲಾಗಿದೆ. ಸೇನಾ ಹೆಲಿಕಾಪ್ಟರ್ ತೆರಳುತ್ತಲೇ ಇತ್ತ ಯೋಧರು ಆಶ್ರಯ ಪಡೆದಿದ್ದ ಕಟ್ಟಡ ಕೆಲವೇ ಕ್ಷಣಗಳಲ್ಲಿ ಕುಸಿದಿದೆ. ಗುರುದಾಸ್‌ಪುರದ ಕರ್ತಾರಪುರ ಕಾರಿಡಾರ್ ಮುಳುಗಡೆಯಾಗಿದೆ. ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ಬಿಯಾಸ್ ನದಿಯ ಪ್ರವಾಹದ ಆತಂಕ ತರಿಸಿದೆ. ಉತ್ತರಾಖಂಡ್‌ನಲ್ಲಿ ಜೀವಗಂಗೆ, ಯಮುನೆಯ ರುದ್ರತಾಂಡವ ಹೇಳತೀರದಾಗಿದೆ.
ಜಮ್ಮು ಮತ್ತು ಕಾಶ್ಮೀರದ ಸಿಎಂ ಒಮರ್ ಅಬ್ದುಲ್ಲಾ ಶ್ರೀನಗರದಿಂದ ಜಮ್ಮುವಿಗೆ ಧಾವಿಸಿ ಈ ಪ್ರದೇಶದ ಪರಿಸ್ಥಿತಿಯನ್ನು ವೈಯಕ್ತಿಕವಾಗಿ ಪರಿಶೀಲಿಸಿದ್ದಾರೆ. ಜಮ್ಮು ಪ್ರದೇಶದಲ್ಲಿ ಭಾರೀ ಮಳೆ ಮತ್ತು ಪ್ರವಾಹದಿಂದ ಉಂಟಾದ ಪರಿಸ್ಥಿತಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ವೈಷ್ಣೋದೇವಿ ದೇಗುಲಕ್ಕೆ ಹೋಗುವ ಮಾರ್ಗದಲ್ಲಿ ಭೂಕುಸಿತ; ಐವರು ಸಾವು – ಯಾತ್ರೆ ಸ್ಥಗಿತ
ಆಂಧ್ರ ಪ್ರದೇಶದಲ್ಲೂ ವರ್ಷಧಾರೆ; ಭಾರೀ ಅವಾಂತ
ಆಂಧ್ರ ಪ್ರದೇಶದಲ್ಲೂ ವರ್ಷಧಾರೆ ಭಾರಿ ಅವಾಂತರ ಸೃಷ್ಟಿಸಿದೆ. ಕಾಮಾರೆಡ್ಡಿ ರೆಡ್ಡಿ ಜಿಲ್ಲೆಯ ನಿಜಾಮ್ ಸಾಗರದ ಬಳಿ ಬ್ರಿಡ್ಜ್ ಕಾಮಗಾರಿಯ ವಾಟರ್ ಟ್ಯಾಂಕರ್‌ಹೊಳೆಯಲ್ಲಿ ಕೊಚ್ಚಿ ಹೋಗಿದೆ. ಟ್ಯಾಂಕ್ ಏರಿ ಕಾರ್ಮಿಕರು ರಕ್ಷಣೆಗೆ ಅಂಗಲಾಚಿದ್ದಾರೆ.