250 ವರ್ಷಗಳ ಸುದೀರ್ಘ ಮುನಿಸಿಗೆ ತೆರೆ: ಉಡುಪಿಯಲ್ಲಿ ಸೋದೆಶ್ರೀ- ಕುಕ್ಕೆಶ್ರೀಗಳ ಮಹಾ ಸಮಾಗಮ

Public TV
2 Min Read
SWAMIJI

ಉಡುಪಿ: ನಮ್ಮ ನಿಮ್ಮಂತ ಸಾಮಾನ್ಯ ಜನರಿಗೆ ಕೋಪ ಬರುತ್ತೆ. ಮನಸ್ತಾಪ ಆಗುತ್ತೆ. ಆದ್ರೆ ಜೀವನದಲ್ಲಿ ಅರಿಷಡ್ವರ್ಗಗಳನ್ನು ದಾಟಿದ ಸ್ವಾಮೀಜಿಗಳಿಗೂ ಶತ- ಶತಮಾನಗಳಿಗೂ ದ್ವೇಷ ಇರುತ್ತದೆ. ಕುಕ್ಕೆ ಸುಬ್ರಹ್ಮಣ್ಯ ಮಠ ಮತ್ತು ಉಡುಪಿಯ ಸೋದೆ ವಾದಿರಾಜ ಮಠದ ಯತಿಗಳು ಮುಖಾಮುಖಿಯಾಗಿ 250 ವರ್ಷ ದಾಟಿದೆ. ಆದ್ರೆ ಇದೀಗ ಕೋಪ ಮರೆದು ಬಾಂಧವ್ಯ ಬೆಳೆಸಲು ಎರಡು ಮಠಗಳು ಮುಂದಾಗಿದೆ.

vlcsnap 2017 05 18 11h53m02s228

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ. ದಕ್ಷಿಣ ಭಾರತದಲ್ಲೇ ಅತೀ ಪ್ರಸಿದ್ಧ ಧಾರ್ಮಿಕ ಕೇಂದ್ರ. ಕುಕ್ಕೆ ಸುಬ್ರಹ್ಮಣ್ಯ ಮಠದಲ್ಲಿ ವಿದ್ಯಾಪ್ರಸನ್ನ ಶ್ರೀಗಳು ಸದ್ಯದ ಪೀಠಾಧಿಕಾರಿಗಳು. ಇನ್ನು ಉಡುಪಿ ಶ್ರೀಕೃಷ್ಣಮಠಕ್ಕೆ ಒಳಪಡುವ 8 ಮಠಗಳಿವೆ. 800 ವರ್ಷಗಳ ಹಿಂದೆ 8 ಮಠಗಳ ಸ್ವಾಮೀಜಿಗಳ ಪೈಕಿ ಸೋದೆ ಮಠದ ವಾದಿರಾಜ ಸ್ವಾಮಿಗಳು ಹಿರಿಯರು. ಸದ್ಯ ಸೋದೆ ಪೀಠಕ್ಕೆ ವಿಶ್ವವಲ್ಲಭತೀರ್ಥರು ಪೀಠಾಧಿಕಾರಿಗಳು. ಎರಡೂ ಮಠಗಳು ಧಾರ್ಮಿಕವಾಗಿ ಮತ್ತು ಆರ್ಥಿಕವಾಗಿ ಬಲಿಷ್ಠ ಮಠಗಳು.

SODE

ಯಾವ ಕಾರಣಕ್ಕೆ ಮುನಿಸು?: ಈ ಎರಡು ಮಠಗಳ ಸ್ವಾಮೀಜಿಗಳು ಮಾತು ಬಿಟ್ಟು- ಮುಖಾಮುಖಿಯಾಗದೆ ಸರಿಸುಮಾರು 250 ವರ್ಷಗಳೇ ಕಳೆದಿವೆ. 18ನೇ ಶತಮಾನದ ಕಥೆಯಿದು. ಉಡುಪಿಯ ಉಂಡಾರು ಗ್ರಾಮದ ಸೋದರರು ಸುಬ್ರಹ್ಮಣ್ಯ ಮತ್ತು ಸೋದೆ ಮಠದ ಪೀಠಾಧಿಪತಿಗಳಾದರು. ಸೋದೆ ಮಠದಲ್ಲಿ ವಿಶ್ವನಿಧಿತೀರ್ಥರು ದೀಕ್ಷೆ ಪಡೆದರು. ಅವರ ತಮ್ಮ ವಿಶ್ವಾಧೀಶ್ವರ ತೀರ್ಥರು ಕುಕ್ಕೆಗೆ ಶ್ರೀಗಳಾದರು. ಒಂದು ಬಾರಿ ಕುಕ್ಕೆ ಮಠದ ಪೂಜೆಗೆ ಸೋದೆ ಶ್ರೀಗಳನ್ನು ಆಹ್ವಾನಿಸಲಾಯ್ತು. ಆದ್ರೆ ವಾಹನದ ವ್ಯವಸ್ಥೆಗಳು ಇಲ್ಲದಿರುವುದರಿಂದ ಪೂಜೆಯ ಘಳಿಗೆಗೆ ಸೋದೆ ಶ್ರೀಗಳು ತಲುಪಲಾಗಿಲ್ಲ.

vlcsnap 2017 05 18 11h53m47s171

ಕೋಪಗೊಂಡ ಕುಕ್ಕೆಶ್ರೀಗಳು ಕಾಯದೆ ಪೂಜೆ ಆರಂಭಿಸಿ ಮುಗಿಸಿಯೇ ಬಿಟ್ಟರು. ಸೋದೆಶ್ರೀಗಳು ಇದನ್ನು ಅವಮಾನವೆಂದು ಪರಿಗಣಿಸಿ ಮತ್ತೆಂದೂ ಬರುವುದಿಲ್ಲ. ಇಂದಿನಿಂದ ಮಾತುಕತೆಯಿಲ್ಲ ಎಂದು ಹೇಳಿ ವಾಪಾಸ್ಸಾದರು. ಅಂದಿನಿಂದ ಇಂದಿನ ತನಕವೂ ಎರಡು ಮಠಗಳ ಪರಂಪರೆಯಲ್ಲಿ ಬಂದ ಯತಿಗಳು ಒಬ್ಬರೊಬ್ಬರ ಮುಖ ನೋಡಿಕೊಂಡಿಲ್ಲ. ಎಲ್ಲೂ ಭೇಟಿಯಾಗಿಲ್ಲ. ಸೋದೆ ಶ್ರೀಗಳು ಕುಮಾರಧಾರಾ ನದಿಯನ್ನು ದಾಟಿ ಸುಬ್ರಹ್ಮಣ್ಯ ಊರಿಗೂ ಹೋಗಿಲ್ಲ.

vlcsnap 2017 05 18 11h55m24s110

ಡೇಟ್ ಫಿಕ್ಸ್: ಇದೀಗ ಎರಡೂ ಮಠಗಳ ಸ್ವಾಮೀಜಿಗಳು ಕೋಪ ಮರೆತು- ಒಂದಾಗೋದಕ್ಕೆ ಡೇಟ್ ಫಿಕ್ಸಾಗಿದೆ. ಉಡುಪಿಯ ಅನಂತೇಶ್ವರ ದೇವಸ್ಥಾನದಲ್ಲಿ ಮೇ 29ರಂದು ಉಡುಪಿಯ ಎಲ್ಲಾ ಮಠಾಧೀಶರ ಸಮ್ಮುಖದಲ್ಲಿ ಸುಬ್ರಹ್ಮಣ್ಯಶ್ರೀ ಮತ್ತು ಸೋದೆ ಶ್ರೀಗಳ ಸಮಾಗಮವಾಗಲಿದೆ.

KUKKE SHREE

ಹಿಂದಿನಿಂದ ಆದ ವಿಘಟನೆಯಿಂದ ಅವರನ್ನು ದೂರ ಮಾಡಿರಬಹುದು. ಚಿಂತನೆಯಲ್ಲಿ- ವೈಯಕ್ತಿಕವಾಗಿ ಭಿನ್ನಾಭಿಪ್ರಾಯವಿಲ್ಲ. ಇದೀಗ ಎರಡು ಸ್ವಾಮೀಜಿಗಳ ಸಮಾಗಮವಾಗುತ್ತದೆ. ಇದು ಭಕ್ತರಿಗೆ ಬಹಳ ಸಂತೋಷ ಕೊಡುವ ವಿಚಾರ. ಉಡುಪಿ- ಸುಬ್ರಹ್ಮಣ್ಯ- ಸೋದೆಯಲ್ಲಿ ಪೂಜೆ ನಡೆಯಲಿದೆ. ಕೌಟುಂಬಿಕವಾದ ಜಗಳದಲ್ಲಿ ಅನ್ನ ನೀರು ಬಿಡುವಂತಹ ಹಲವು ಪ್ರಕರಣಗಳು ಕರಾವಳಿಯಲ್ಲಿದೆ. ಇಂತಹ ಮುನಿಸು ಮಾಡಿಕೊಂಡವರು ಕೋಪ ಬಿಡಬಹುದು. ಅದಕ್ಕೊಂದು ಆರಂಭವನ್ನು ಶ್ರೀಧ್ವಯರು ನೀಡುತ್ತಿದ್ದಾರೆ ಎಂದು ಕೃಷ್ಣಮಠದ ಭಕ್ತ ಪ್ರದೀಪ್ ಕುಮಾರ್ ಕಲ್ಕೂರ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಹೇಳಿದರು.

SUBHRAHAMANYA

ದೇವರಲ್ಲಿ ಕ್ಷಮೆ: ನಾಲ್ಕು ದಿನಗಳ ಕಾಲ ಈ ಕಾರ್ಯಕ್ರಮ ನಡೆಯಲಿದೆ. ಮೊದಲು ಅನಂತೇಶ್ವರ- ನಂತರ ಚಂದ್ರಮೌಳೇಶ್ವರ ಅಲ್ಲಿಂದ ಶ್ರೀಕೃಷ ಮಠಕ್ಕೆ ತೆರಳಿ ಇಬ್ಬರೂ ಜೊತೆಯಾಗಿ ನಿಂತು ದೇವರಲ್ಲಿ ಕ್ಷಮೆ ಕೋರಲಿದ್ದಾರೆ. ಉಡುಪಿಯ ಕಾರ್ಯಕ್ರಮ ಮುಗಿಸಿ ಕುಕ್ಕೆ ಸುಬ್ರಹ್ಮಣ್ಯ, ಶಿರಸಿಯ ಸೋಂದಾ ಮಠದಲ್ಲಿ ಅಲ್ಲಿನ ದೇವರ ಸಮ್ಮುಖದಲ್ಲಿ ಪ್ರಾರ್ಥನೆ ಮಾಡಿ ಮತ್ತೆ ತಮ್ಮ ಸೋದರತೆಯ ಸಂಬಂಧ ಆರಂಭಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಎರಡೂ ಜಿಲ್ಲೆಯ ಸಾವಿರಾರು ಮಂದಿ ಭಕ್ತರು, ರಾಜ್ಯವ್ಯಾಪಿ ಜನರು ಬಂದು ಪಾಲ್ಗೊಳ್ಳುವ ನಿರೀಕ್ಷೆಯಿದೆ.

vlcsnap 2017 05 18 12h01m29s156

Share This Article
Leave a Comment

Leave a Reply

Your email address will not be published. Required fields are marked *