– 40 ವರ್ಷದಲ್ಲಿ ಎರಡು ಮೂರು ಬಾರಿ ಮಾತ್ರ ಉಡುಪಿಗೆ ಬಂದಿದ್ದಾಳೆ
– ಆಕೆಯ ವರ್ತನೆ, ಜೀವನ ಸರಿ ಇಲ್ಲ
ಉಡುಪಿ: ಸ್ನೇಹಿತೆಯರ ಜೊತೆ ಧರ್ಮಸ್ಥಳಕ್ಕೆ (Dharmasthala) ಹೋಗಿದ್ದ ನನ್ನ ಮಗಳು ಕಾಣೆಯಾಗಿದ್ದಾಳೆ ಎಂದು ಹೇಳಿಕೆ ನೀಡಿ ಸಂಚಲನ ಮೂಡಿಸಿದ್ದ ಸುಜಾತ ಭಟ್ (Sujatha Bhat) ವಿಚಾರದಲ್ಲಿ ಈಗ ಒಂದೊಂದೇ ಸತ್ಯಗಳು ಹೊರ ಬರುತ್ತಿವೆ. ಈಗ 9ನೇ ತರಗತಿ ಇದ್ದಾಗಲೇ ಸುಜಾತ ಭಟ್ ಆರೇಳು ತಿಂಗಳ ಬಸುರಿ ಆಗಿದ್ದ ವಿಚಾರ ಬೆಳಕಿಗೆ ಬಂದಿದೆ.
ಅನನ್ಯಾ ಭಟ್ (Ananya Bhat) ಫೋಟೋವನ್ನು ಸುಜಾತಾ ಭಟ್ ರಿಲೀಸ್ ಮಾಡುತ್ತಿದ್ದಂತೆ ಸಾಕಷ್ಟು ಹಲ್‌ಚಲ್ ಎದ್ದಿದೆ. ಯಾರದ್ದೋ ಮನೆಯ ಸೊಸೆ ಫೋಟೋ ತೋರಿಸಿ ತಮ್ಮ ಮಗಳು ಎನ್ನುತ್ತಿದ್ದಾರೆ ಎಂಬ ಆರೋಪದ ಬೆನ್ನಲ್ಲೇ ವಸಂತಾ ಎಂಬುವವರ ಸಹೋದರ ನನ್ನ ತಂಗಿ ಫೋಟೋ ಬಳಸಿಕೊಂಡಿದ್ದಾರೆ ಎಂದು ಆರೋಪ ಮಾಡಿದ್ದರು. ಇದೀಗ ಸ್ವತಃ ಸುಜಾತ ಭಟ್ ಸಹೋದರನೇ ಪಬ್ಲಿಕ್ ಟಿವಿಗೆ ಪ್ರತಿಕ್ರಿಸಿದ್ದು, ಆಕೆಗೆ ಮಗಳು ಇರಲು ಸಾಧ್ಯವೇ ಇಲ್ಲ ಎಂದಿದ್ದಾರೆ.
ಸಹೋದರ ತಮ್ಮ ಹೆಸರು ಹಾಗೂ ಮುಖವನ್ನು ಬಹಿರಂಗಪಡಿಸಬಾರದು ಎಂದು ಮಾಧ್ಯಮಗಳಿಗೆ ಷರತ್ತು ವಿಧಿಸಿ ಹೇಳಿಕೆ ನೀಡಿದ್ದರಿಂದ ಅವರ ಹೆಸರನ್ನು ಇಲ್ಲಿ ಪ್ರಕಟಿಸುತ್ತಿಲ್ಲ. ಇದನ್ನೂ ಓದಿ: Exclusive ಸುಜಾತ ಭಟ್ ತೋರಿಸಿದ ಫೋಟೋ ನನ್ನ ತಂಗಿಯದ್ದು: ಸಹೋದರ ವಿಜಯ್
ಸಹೋದರ ಹೇಳಿದ್ದೇನು?
ಸುಜಾತ ಭಟ್ ಒಂಬತ್ತನೇ ತರಗತಿ ಓದುತ್ತಿದ್ದಾಗಲೇ ಮನೆಯಿಂದ ಓಡಿ ಹೋಗಿದ್ದಳು. ಏಳೆಂಟು ತಿಂಗಳ ಬಸುರಿಯಾದ ವಿಚಾರ ಗೊತ್ತಾದ ನಂತರ ನನ್ನ ತಂದೆ ಕ್ಲಿನಿಕ್‌ನಲ್ಲಿ ಅಬಾರ್ಷನ್ ಮಾಡಿಸಿದ್ದರು. ನಮ್ಮ ಕುಟುಂಬದೊಂದಿಗೆ ಆಕೆ ಸಂಪರ್ಕದಲ್ಲಿ ಇಲ್ಲ. ಕೆಲ ವರ್ಷದ ಹಿಂದೆ ಬಂದಾಗ ಶಿವಮೊಗ್ಗದ ರಿಪ್ಪನ್ ಪೇಟೆಯಲ್ಲಿ ಯಾರದ್ದೋ ಜೊತೆಗೆ ಇದ್ದೇನೆ. ನಂತರ ಶಿವಮೊಗ್ಗದಿಂದ ಬೆಂಗಳೂರಿನಲ್ಲಿ ಈಗ ನೆಲೆಸಿದ್ದೇನೆ ಎಂದು ಹೇಳಿದ್ದಳು.
ಕಳೆದ 40 ವರ್ಷದಲ್ಲಿ ಎರಡು ಮೂರು ಬಾರಿ ಮಾತ್ರ ಉಡುಪಿಗೆ (Udupi) ಬಂದಿದ್ದಳು. ಎರಡು ಬಾರಿ ಕಾರಿನ ಚಾಲಕನ ಜೊತೆ ಉಡುಪಿಗೆ ಬಂದಾಗ ನಾನು ಈಗ ಕೋಟ್ಯಾಧೀಶೆ ಎಂದು ಕುಟುಂಬದ ಮುಂದೆ ಹೇಳಿಕೊಳ್ಳುತ್ತಿದ್ದಳು. ಸಹೋದರಿಗೆ ಅನನ್ಯ ಭಟ್ ಎಂಬ ಮಗಳು ಇರಲು ಸಾಧ್ಯವೇ ಇಲ್ಲ. ಮದುವೆಯಾದ ಬಗ್ಗೆ ಮತ್ತು ಮಗಳು ಇರುವ ಬಗ್ಗೆ ಒಂದು ಬಾರಿ ನಮ್ಮ ಬಳಿ ಹೇಳಿಲ್ಲ.
ಧರ್ಮಸ್ಥಳದವರಿಂದ ನಮಗೆ ಯಾವುದೇ ಅನ್ಯಾಯವಾಗಿಲ್ಲ. ನಮ್ಮ ಚಿಕ್ಕಪ್ಪ ನಮ್ಮ ಜಮೀನನ್ನು ಧರ್ಮಸ್ಥಳದವರಿಗೆ ದಾನ ಕೊಟ್ಟಿದ್ದಾರೋ ಮಾರಿದ್ದಾರೋ ಗೊತ್ತಿಲ್ಲ. ಆ ಕಾಲದಲ್ಲಿ ನಮ್ಮ ತಂದೆಗೆ ಒಂದೂವರೆಯಿಂದ ಎರಡು ಲಕ್ಷ ರೂಪಾಯಿ ಕೊಟ್ಟಿದ್ದಾರೆ. ಆ ಹಣದಲ್ಲಿ ನಾವು ಮನೆ ಕಟ್ಟಿ ವಾಸ ಮಾಡುತ್ತಿದ್ದೇವೆ. ಸುಜಾತ ಹೇಳುತ್ತಿರುವ ಅನಿಲ್ ಭಟ್ ಯಾರು ಎನ್ನುವುದು ನಮಗೆ ಗೊತ್ತಿಲ್ಲ. ರಂಗಪ್ರಸಾದ್ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ.
ವಿಶೇಷ ತನಿಖಾ ತಂಡದ ಮುಂದೆ ನಾನು ಸುಜಾತ ಬಗ್ಗೆ ಹೇಳಿಕೆ ನೀಡಲು ಸಿದ್ಧನಿದ್ದೇನೆ. ಆದರೆ ನನ್ನ ಕೆಲಸ ಬಿಟ್ಟು ಹೇಳಿಕೆ ನೀಡುವುದಿಲ್ಲ. ರಜಾ ದಿನದಲ್ಲಿ ಕರೆದರೆ ನಾನು ಹೇಳಿಕೆ ನೀಡುತ್ತೇನೆ. ಪೊಲೀಸರು ನನಗೆ ಸಂಬಳ ನೀಡಿದರೆ ನಾನು ಬಂದು ಹೇಳಿಕೆ ಕೊಡುತ್ತೇನೆ.
ಸುಜಾತ ಪರೀಕಾಕ್ಕೆ ಹೋಗಿ ಜಾಗದ ಬಗ್ಗೆ ವಿಚಾರಣೆ ಮಾಡುತ್ತಿದ್ದಳು ಎಂಬ ಮಾಹಿತಿ ಸಿಕ್ಕಿತ್ತು. ಆಕೆಯ ವರ್ತನೆ ಮತ್ತು ಜೀವನ ಸರಿ ಇಲ್ಲ. ಮನೆ ಬಿಟ್ಟು ಓಡಿ ಹೋಗಿದ್ದವಳನ್ನು ನಾವೇ ಕರೆದುಕೊಂಡು ಬಂದು ಕೂಡಿ ಹಾಕಿ ಬುದ್ದಿ ಹೇಳಿದ್ದೆವು. ಬುದ್ದಿ ಹೇಳಿದ ನಂತರವೂ ಆಕೆ ಬದಲಾಗಲಿಲ್ಲ, ಮತ್ತೆ ಓಡಿ ಹೋಗಿದ್ದಳು.