ಬೆಂಗಳೂರು: ವಿಧಾನಸಭೆಯಲ್ಲಿ (Legislative Assembly) ಮಂಡನೆಯಾಗಿದ್ದ ಜನಸಂದಣಿ ನಿಯಂತ್ರಣ ವಿಧೇಯಕ-2025ಕ್ಕೆ ವಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ವಿಧೇಯಕದ ಪರಿಶೀಲನೆಗೆ ಸದನ ಸಮಿತಿ ರಚಿಸುವುದಾಗಿ ರೂಲಿಂಗ್ ಕೊಟ್ಟಿದ್ದಾರೆ. ವಿಧೇಯಕದ ಕೆಲ ಅಂಶಗಳನ್ನು ವಿರೋಧಿಸಿದ ಬಿಜೆಪಿ, ಜೆಡಿಎಸ್ ಶಾಸಕರು ಸದನ ಸಮಿತಿ ರಚಿಸುವಂತೆ ಒತ್ತಾಯಿಸಿದ್ದರು. ಹಾಗಾಗಿ ಬಿಲ್ ಅಂಗೀಕಾರ ಮಾಡದೇ ಸದನ ಸಮಿತಿ ಪರಿಶೀಲನೆಗೆ ವಹಿಸಲಾಗಿದೆ.
ಬುಧವಾರವಷ್ಟೇ (ಆ.20) ವಿಧೇಯಕ ಮಂಡಿಸಿ ಗುರುವಾರ (ಆ.21) ಅಂಗೀಕಾರಕ್ಕೆ ಗೃಹ ಸಚಿವ ಪರಮೇಶ್ವರ್ (G.Parameshwar) ಪ್ರಸ್ತಾಪಿಸಿದ್ದರು. ಕೌಟುಂಬಿಕ ಕಾರ್ಯಕ್ರಮಗಳಾದ ಮದುವೆ ಸೇರಿ ಇತರೆ ಖಾಸಗಿ ಕಾರ್ಯಕ್ರಮಗಳಿಗೆ ಈ ನಿಯಮಗಳು ಅನ್ವಯ ಆಗಲ್ಲ. ಖಾಸಗಿ ಆವರಣಗಳೊಳಗೆ ನಡೆಸುವ ಕೌಟುಂಬಿಕ ಸಮಾರಂಭಗಳಿಗೆ ಈ ನಿಯಮಗಳು ಅನ್ವಯ ಆಗಲ್ಲ. ಬಾಡಿಗೆ, ಭೋಗ್ಯ, ಗುತ್ತಿಗೆಗೆ ಪಡೆದ ಸ್ಥಳಗಳಲ್ಲಿ ನಡೆಸುವ ಖಾಸಗಿ ಆವರಣಗಳೊಳಗೆ ನಡೆಸುವ ಕಾರ್ಯಕ್ರಮಗಳಿಗೆ ಈ ನಿಯಮಗಳು ಅನ್ವಯ ಆಗಲ್ಲ ಎಂದು ಪರಮೇಶ್ವರ್ ಸ್ಪಷ್ಟಪಡಿಸಿದರು.ಇದನ್ನೂ ಓದಿ: ಗಣಿ ನಷ್ಟ ವಸೂಲಾತಿಗೆ ಸರ್ಕಾರದಿಂದ ಹೊಸ ಕಾಯ್ದೆ – ಆಯುಕ್ತರ ನೇಮಕಕ್ಕೆ ಮುಂದಾದ ಸರ್ಕಾರ
ಈ ವೇಳೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ (R.Ashok) ಮಾತನಾಡಿ, ರಾಜಕೀಯ ಸಮಾವೇಶಗಳಿಗೂ ಅನ್ವಯ ಆಗುತ್ತದೆ, ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಕಾನೂನು ಮಾಡಿ ಅಂತಾ ಆಗ್ರಹಿಸಿದರು. ಶಾಸಕರಾದ ಸುರೇಶ್ ಕುಮಾರ್ ಮಾತನಾಡಿ, ಪೋಸ್ಟ್ ಮಾರ್ಟಮ್ ವಿಧೇಯಕ ಇದು. ಧಾರ್ಮಿಕ ಉತ್ಸವಗಳಿಗೂ ಲಕ್ಷಾಂತರ ಜನ ಸೇರುತ್ತಾರೆ. ಕಾಯ್ದೆ ತರದೇ ನಿಯಮ ರೂಪಿಸಿ ಎಂದು ಆಕ್ರೋಶ ಹೊರಹಾಕಿದರು. ಶಾಸಕ ಸುನೀಲ್ ಕುಮಾರ್ ಮಾತನಾಡಿ, ಪೊಲೀಸರು ಈ ನಿಯಮಗಳನ್ನ ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇದೆ, ಪ್ರತಿಭಟನೆ, ಕಾರ್ಯಕ್ರಮಗಳನ್ನು ಹತ್ತಿಕ್ಕುವ ಪ್ರಯತ್ನ ಎಂದರು. ಅಂತಿಮವಾಗಿ ವಿರೋಧ ಪಕ್ಷಗಳ ಆಕ್ಷೇಪದ ಹಿನ್ನೆಲೆಯಲ್ಲಿ ಬಿಲ್ ಅಂಗೀಕಾರಕ್ಕೆ ಹಾಕದೇ ಸದನ ಸಮಿತಿಗೆ ವಹಿಸಲಾಗಿದೆ.
ಜನಸಂದಣಿ ನಿಯಂತ್ರಣ ವಿಧೇಯಕದಲ್ಲಿ ಏನಿದೆ?
-ಜನಸಂದಣಿ 7 ಸಾವಿರಕ್ಕಿಂತ ಕಮ್ಮಿ ಇದ್ದರೆ ಪೊಲೀಸ್ ಠಾಣೆ ಅಧಿಕಾರಿಯು ಆಯೋಜಕರ ಅರ್ಜಿಯ ಮೇರೆಗೆ ವಿಚಾರಣೆ ನಡೆಸಿ ಅನುಮತಿ ನೀಡಬಹುದು.
-ಜನಸಂದಣಿ 7 ಸಾವಿರಕ್ಕಿಂತ ಹೆಚ್ಚು 50 ಸಾವಿರಕ್ಕಿಂತ ಕಡಿಮೆ ಇದ್ದಾಗ ಡಿಸಿಪಿ ಅವರು ಪರಿಶೀಲಿಸಿ ಅನುಮತಿ ಕೊಡಲು ಅವಕಾಶ.
-ಜನಸಂದಣಿ 50 ಸಾವಿರಕ್ಕೂ ಹೆಚ್ಚಿದ್ದರೆ ಎಸ್‌ಪಿ ಅಥವಾ ಪೊಲೀಸ್ ಆಯುಕ್ತರು ಆಯೋಜಕರ ಅರ್ಜಿ ಮೇರೆಗೆ ಪರಿಶೀಲಿಸಿ ಅನುಮತಿ ಕೊಡಬಹುದು.
-ಸಮಾರಂಭದ ಆಯೋಜಕರು ಸಮಾರಂಭದ ಹತ್ತು ದಿನಗಳ ಮೊದಲು ಪೂರ್ಣ ವಿವರವನ್ನು ಲಿಖಿತ ಅರ್ಜಿ ಸಲ್ಲಿಸಬೇಕು.
-ಕಾರ್ಯಕ್ರಮದಲ್ಲಿ ಆಸ್ತಿ ಮತ್ತು ಪ್ರಾಣ ಹಾನಿ ಆದರೆ ಕಾರ್ಯಕ್ರಮದ ಆಯೋಜಕರೇ ಹೊಣೆಗಾರರು.
-ಕಾರ್ಯಕ್ರಮಗಳಿಗೆ ಅರ್ಜಿ ಹಾಕಿದ ನಾಲ್ಕು ದಿನಗಳ ಒಳಗೆ ಪರಿಶೀಲಿಸಿ, ಅನುಮತಿ ಕೊಡುವ ಅಥವಾ ಕೊಡದಿರುವ ಬಗ್ಗೆ ಸಕ್ಷಮ ಪ್ರಾಧಿಕಾರಗಳು ನಿರ್ಧಾರ ತೆಗೆದುಕೊಳ್ಳಬೇಕು ಮತ್ತು ಇದನ್ನು ಲಿಖಿತವಾಗಿ ಆಯೋಜಕರಿಗೆ ತಿಳಿಸಬೇಕು.
-ಅನುಮತಿ ಪಡೆಯುವ ವೇಳೆ ಆಯೋಜಕರು 1 ಕೋಟಿ ರೂ. ಮೌಲ್ಯದ ನಷ್ಟ ಭರ್ತಿ ಬಾಂಡ್ ಸಲ್ಲಿಸಬೇಕು.
-ಅನುಮತಿ ಪಡೆಯದೇ ಕಾರ್ಯಕ್ರಮ ಆಯೋಜಿಸಿದರೆ 3 ವರ್ಷದಿಂದ 7 ವರ್ಷದವರೆಗೆ ಕಾರಾಗೃಹ ವಾಸ ಹಾಗೂ 1 ಕೋಟಿ ರೂ.ವರೆಗೆ ದಂಡ.
-ಕಾರ್ಯಕ್ರಮದಲ್ಲಿ ಸುಳ್ಳು ವದಂತಿ ಹಬ್ಬಿಸಿ, ಹಿಂಸಾಚಾರ, ಕುಕೃತ್ಯ ಎಸಗಲು ಪ್ರೇರೆಪಿಸಿದರೆ, ಅದರಿಂದ ನಾಗರಿಕರಿಗೆ ತೊಂದರೆ, ಶಾಂತಿಭಂಗ ಉಂಟಾದರೆ 3 ವರ್ಷದವರೆಗೆ ಜೈಲು ಶಿಕ್ಷೆ, 50 ಸಾವಿರ ರೂ.ವರೆಗೆ ದಂಡ
-ಜನಸಂದಣಿ ವಿಪತ್ತಿಗೆ ಕಾರಣವಾದರೆ, ವ್ಯಕ್ತಿಯ ದುಷ್ಕೃತ್ಯದಿಂದ ನಾಗರಿಕರಿಗೆ ದೈಹಿಕ ಆಸ್ತಿ ಹಾನಿಯಾದರೆ 3 ವರ್ಷದಿಂದ 7 ವರ್ಷದವರೆಗೆ ಜೈಲುಶಿಕ್ಷೆ, ಪ್ರಾಣ ಹಾನಿಯಾದರೆ ಕನಿಷ್ಟ 10 ವರ್ಷದಿಂದ ಜೀವಾವಧಿವರೆಗೆ ಶಿಕ್ಷೆ.
-ಪೊಲೀಸರ ನಿರ್ದೇಶನಗಳನ್ನು ಪಾಲಿಸದಿದ್ದರೆ, ಉಲ್ಲಂಘಿಸಿದರೆ 1 ತಿಂಗಳವರೆಗೆ ಸಮುದಾಯ ಸೇವೆ ಮಾಡಬೇಕು ಮತ್ತು 50 ಸಾವಿರ ರೂ. ಜುಲ್ಮಾನೆ ಭರಿಸಬೇಕು.ಇದನ್ನೂ ಓದಿ: ಬೀದಿ ನಾಯಿಗಳ ಸ್ಥಳಾಂತರ ಸಂಬಂಧ ಎಂಸಿಡಿ ಅಧಿಸೂಚನೆ – ಅರ್ಜಿಯ ತುರ್ತು ವಿಚಾರಣೆ ನಿರಾಕರಿಸಿದ ಸುಪ್ರೀಂ