ಬೆಂಗಳೂರು: ಸಿದ್ದರಾಮಯ್ಯ (Siddaramaiah) ನಮಗೆ ಸಿಎಂ ಅಲ್ಲ, ಡಿಕೆಶಿ (DK Shivakumar) ಇಲ್ಲೇ ಇದ್ದಾರೆ. ಅವರೇ ಸಾಕು, ಡಿಕೆಶಿಯವರೇ ನಮಗೆ ಸಿಎಂ ಎಂದು ವಿಪಕ್ಷ ನಾಯಕ ಆರ್ ಅಶೋಕ್ (R Ashok) ಹೇಳಿದ ಪ್ರಸಂಗ ಇಂದು ನಡೆಯಿತು.
ವಿಧಾನಸಭೆಯಲ್ಲಿ ಮಧ್ಯಾಹ್ನದ ಬಳಿಕ ಸಿಎಂ ಸಿದ್ದರಾಮಯ್ಯನವರು ಒಳ ಮೀಸಲಾತಿಗೆ ಸಂಬಂಧಿಸಿದಂತೆ ಹೇಳಿಕೆ ನೀಡಿದರು.
ಸುಪ್ರೀಂಕೋರ್ಟ್ (Supreme Court) ನಿರ್ದೇಶನಗಳನ್ನು ಗಮನದಲ್ಲಿಟ್ಟುಕೊಂಡು ಒಳಮೀಸಲಾತಿ ಒದಗಿಸಲಾಗಿದೆ. ಶಾಶ್ವತ ಪರಿಶಿಷ್ಟ ಜಾತಿಗಳ ಆಯೋಗ ರಚಿಸಲು ಸರ್ಕಾರ ತೀರ್ಮಾನಿಸಿದೆ. ಒಳ ಮೀಸಲಾತಿ ಹೋರಾಟಗಾರರ ವಿರುದ್ಧ ದಾಖಲಿಸಿದ ಮೊಕದ್ದಮೆಗಳನ್ನು ವಾಪಸ್ ಪಡೆಯಲು ಸರ್ಕಾರ ತೀರ್ಮಾನಿಸಿದೆ. ಒಳಮೀಸಲಾತಿ ಕುರಿತ ದಶಕಗಳ ಬೇಡಿಕೆಗೆ ನಮ್ಮ ಸರ್ಕಾರ ನ್ಯಾಯ ಒದಗಿಸಿಕೊಟ್ಟಿದ್ದು ಸಾಮಾಜಿಕ ನ್ಯಾಯ ಕಲ್ಪಿಸುವಲ್ಲಿ ನಮ್ಮ ಸರ್ಕಾರ ಬದ್ಧತೆ ತೋರಿದೆ ಎಂದು ಹೇಳಿದರು. ಇದನ್ನೂ ಓದಿ: ದಲಿತ ಸಮುದಾಯ 3 ಗುಂಪಾಗಿ ವರ್ಗೀಕರಿಸಿ ಮೀಸಲಾತಿ ಹಂಚಿಕೆ ಜಾರಿಗೆ ಸಂಪುಟ ನಿರ್ಧಾರ
ಒಳಮೀಸಲಾತಿ ಜಾರಿ ಬಗ್ಗೆ ಸಿಎಂ ಹೇಳಿಕೆಗೆ ವಿಪಕ್ಷದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಸಿಎಂ ಹೇಳಿಕೆಯ ಮೇಲೆ ಚರ್ಚೆಗೆ ಬಿಜೆಪಿ ನಾಯಕರು ಪಟ್ಟು ಹಿಡಿದರು. ಇದು ರಾಜಕೀಯ ಹೇಳಿಕೆ, ನಮಗೂ ಇದರ ಮೇಲೆ ಚರ್ಚೆಗೆ ಅವಕಾಶ ಕೊಡಿ ಎಂದು ಅಶೋಕ್ ಹೇಳಿದರು.
ಈ ವೇಳೆ ಸ್ಫೀಕರ್ ಖಾದರ್ ಅವರು ಸದನದಲ್ಲಿ ಹೇಳಿಕೆಗಳ ಮೇಲೆ ಚರ್ಚೆಗೆ ಅವಕಾಶ ಇಲ್ಲ ಎಂದು ತಿಳಿಸಿದರು. ಇದಕ್ಕೆ ಅಶೋಕ್ ಸಿಎಂ ಪಲಾಯನ ವಾದ ಮಾಡುತ್ತಿದ್ದಾರೆ ಎಂದು ಮೂದಲಿಸಿದರು. ಇದನ್ನೂ ಓದಿ: ಕ್ರಿಮಿನಲ್ ಕೇಸಲ್ಲಿ ಜನಪ್ರತಿನಿಧಿಗಳ ಬಂಧನವಾದ್ರೆ ಹುದ್ದೆಯಿಂದ ವಜಾ – ಮಸೂದೆ ಮಂಡನೆ, ಲೋಕಸಭೆಯಲ್ಲಿ ಕೋಲಾಹಲ
ಸಿಎಂ ಮಾತನಾಡಿ, ನನ್ನ 42 ವರ್ಷದಲ್ಲಿ ಯಾವತ್ತೂ ಪಲಾಯನ ಮಾಡಿಲ್ಲ. ಇಂಥವೆಲ್ಲ ಎಷ್ಟೋ ನೋಡಿದ್ದೀನಿ, ನಮಗೆ ನಿಮ್ಮ ಭಯವೇ ಇಲ್ಲ ಅಂತ ಟಾಂಗ್ ನೀಡಿದರು. ಇದಕ್ಕೆ ಅಶೋಕ್, ಸಿಎಂ ಭಯದಿಂದ ಓಡಿಹೋಗಿದ್ದಾರೆ ಎಂದು ಮತ್ತೆ ವಾಗ್ದಾಳಿ ನಡೆಸಿದರು. ಗಲಾಟೆ ಜೋರಾಗುತ್ತಿದ್ದಂತೆ ನಿಮ್ಮನ್ನು ಕಂಡರೆ ನನಗೆ ಭಯವಿಲ್ಲ ಎಂದು ಹೇಳಿ ಸದನದಿಂದ ಪರಿಷತ್ ಕಡೆ ಸಿಎಂ ಹೊರಟರು.
ಸಿಎಂ ಹೋಗುತ್ತಿದ್ದಂತೆ ವಿಪಕ್ಷಗಳು ಚರ್ಚೆಗೆ ಪಟ್ಟು ಹಿಡಿದರು. ಈ ವೇಳೆ ಅಶೋಕ್ ಸಿದ್ದರಾಮಯ್ಯ ನಮಗೆ ಸಿಎಂ ಅಲ್ಲ, ಡಿಕೆಶಿ ಇಲ್ಲೇ ಇದ್ದಾರೆ, ಅವರೇ ಸಾಕು, ಡಿಕೆಶಿಯವರೇ ನಮಗೆ ಸಿಎಂ ಎಂದು ಹೇಳಿ ಟಾಂಗ್ ನೀಡಿದರು.
ಖಾದರ್ ಅವರು ನಾಳೆ ಚರ್ಚೆಗೆ ಅವಕಾಶ ಕೊಡುವುದಾಗಿ ಹೇಳಿಕೆಗೂ ವಿಪಕ್ಷ ಸದಸ್ಯರು ಮಣಿಯಲಿಲ್ಲ. ಖಾದರ್ ಚರ್ಚೆಗೆ ಅನುಮತಿ ನಿರಾಕರಿಸಿದ್ದಕ್ಕೆ ವಿಪಕ್ಷ ಸದಸ್ಯರು ಸಭಾತ್ಯಾಗ ಮಾಡಿದರು.