ಬೆಂಗಳೂರು: ದಲಿತ ಸಮುದಾಯವನ್ನು 3 ಗುಂಪಾಗಿ ವರ್ಗೀಕರಿಸಿ ಮೀಸಲಾತಿ ಹಂಚಿಕೆ ಜಾರಿಗೆ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
ಎಡಗೈ ಸಮುದಾಯಕ್ಕೆ ಶೇ.6, ಬಲಗೈ ಸಮುದಾಯ ಶೇ.6 (5% + 1% ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಸೇರಿ), ಸ್ಪೃಶ್ಯ ಸಮುದಾಯ ಶೇ.5 (ಸ್ಪೃಶ್ಯ 4% + 1% ಇತರೆ ಸೇರಿ) ಕಲ್ಪಿಸಲು ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
ಬೆಂಬಲಿಗರ ಜೊತೆ ವಿಧಾನಸೌಧಕ್ಕೆ ಬೃಹತ್ ಹಾರ ಹಾಗೂ ಸ್ವೀಟ್ ಬಾಕ್ಸ್ ಹಿಡಿದುಕೊಂಡು ಮಾಜಿ ಸಚಿವ ಆಂಜನೇಯ ಆಗಮಿಸಿದ್ದರು. ಸಿಎಂಗೆ ಹಾರ ಹಾಕಿ ಸಿಹಿ ತಿನ್ನಿಸಿ ದಲಿತ ನಾಯಕರು ಸಂಭ್ರಮಿಸಿದರು.
ಅಲೆಮಾರಿ ಸಮುದಾಯದ ಕೆಲವರಿಂದ ಅಸಮಾಧಾನ ವ್ಯಕ್ತವಾಗಿದೆ. ಕೆಂಗಲ್ ಗೇಟ್ ಬಳಿ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲೆಮಾರಿ ಸಮುದಾಯವನ್ನ ಇತರೆ ಸಮುದಾಯದ ಜೊತೆ ಸೇರಿಸಿ ಶೇ.5% ಮೀಸಲಾತಿ ವ್ಯಾಪ್ತಿಗೆ ಸೇರಿಸಿದ್ದಕ್ಕೆ ಆಕ್ರೋಶ ಹೊರಹಾಕಿದ್ದಾರೆ. ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಂಪುಟ ಸಭೆ ನಿರ್ಣಯದ ಬಗ್ಗೆ ಶಿವರಾಜ್ ತಂಗಡಗಿ ಮಾತನಾಡಿ, ಇಂದು ಐತಿಹಾಸಿಕ ನಿರ್ಧಾರವನ್ನ ಮಾಡಲಾಗಿದೆ. 3 ಗುಂಪಾಗಿ ವರ್ಗಿಕರಿಸಿ ಮೀಸಲಾತಿ ನೀಡಲಾಗಿದೆ. ಎಡಗೈ, ಬಲಗೈ ಹಾಗೂ ಇತರೆ ಅಂತಾ ವರ್ಗೀಕರಿಸಲಾಗಿದೆ. ಎಲ್ಲರ ಒಪ್ಪಿಗೆ ಪಡೆದು ಸಂಪುಟದಲ್ಲಿ ನಿರ್ಧರಿಸಲಾಗಿದೆ. ಎಲ್ಲರಿಗೂ ತೃಪ್ತಿ ಕೊಡುವ ರೀತಿ ಆಗಿದೆ ಎಂದು ತಿಳಿಸಿದ್ದಾರೆ.
ಹೆಚ್‌ಕೆ ಪಾಟೀಲ್ ಪ್ರತಿಕ್ರಿಯಿಸಿ, ಎಲ್ಲರೂ ಸಂತೋಷ, ಸಮಾಧಾನದಿಂದ ಬಂದಿದ್ದೇವೆ. ನಾಳೆ ಸಿಎಂ ಸಿದ್ದರಾಮಯ್ಯ ಸದನದಲ್ಲಿ ಸರ್ಕಾರ ನಿರ್ಧಾವರನ್ನ ಹೇಳ್ತಾರೆ. ಮುನಿಯಪ್ಪ, ಮಹದೇವಪ್ಪ, ತಂಗಡಗಿ, ಪರಮೇಶ್ವರ್ ಸಂತೋಷದಲ್ಲಿದ್ದಾರೆ ಎಂದು ಹೇಳಿದ್ದಾರೆ.
ಆಹಾರ ಸಚಿವ ಕೆಹೆಚ್. ಮುನಿಯಪ್ಪ ಮಾತನಾಡಿ, ಅಧಿವೇಶನದ ಸಂದರ್ಭದಲ್ಲಿ ನಾವು ಯಾವುದೇ ಪತ್ರಿಕಾ ಹೇಳಿಕೆಗಳನ್ನು ಕೊಡುವ ಹಾಗಿಲ್ಲ. ನಾಳೆ ಮುಖ್ಯಮಂತ್ರಿಗಳೇ ಇದರ ಕುರಿತು ಹೇಳಿಕೆ ನೀಡಲಿದ್ದಾರೆ. ಪರಿಶಿಷ್ಟ ಜಾತಿಯ ನೂರೊಂದು ಜಾತಿಗಳಿಗೂ ಸಾಮಾಜಿಕ ನ್ಯಾಯ ಸಿಕ್ಕಿದ್ದು, ಯಾವ ಜಾತಿಗೂ ಅನ್ಯಾಯವಾಗದ ರೀತಿಯಲ್ಲಿ ತೀರ್ಮಾನವಾಗಿದೆ.
ಎಲ್ಲರಿಗೂ ಒಳ್ಳೆಯದಾಗಲಿ ಎಂದು ಪ್ರತಿಕ್ರಿಯಿಸಿದ್ದಾರೆ.