ಮಂಗಳೂರು: ಧರ್ಮಸ್ಥಳದ ಅರಣ್ಯದಲ್ಲಿ ನೂರಾರು ಶವಗಳನ್ನು ಹೂತು ಹಾಕಿದ್ದೆ ಎಂದ ಅನಾಮಿಕನ ಪ್ರಕರಣದ ತನಿಖೆ ನಡೆಯುತ್ತಿದೆ. ಇದರ ನಡುವೆಯೇ ವ್ಯಕ್ತಿಯೊಬ್ಬರು ಎಸ್‌ಐಟಿ ಮುಂದೆ ಹಾಜರಾಗಿ, 13 ವರ್ಷದ ಹಿಂದೆ ಧರ್ಮಸ್ಥಳದಲ್ಲಿ ತನ್ನ ಸಹೋದರಿ ಕಾಣೆಯಾಗಿದ್ದಳು ಎಂದು ದೂರು ನೀಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಾವಲಮುಡೂರು ಗ್ರಾಮದ ಯುವತಿ ಹೇಮಾವತಿ 13 ವರ್ಷಗಳ ಹಿಂದೆ ಕಾಣೆಯಾಗಿದ್ದಾಳೆ ಎಂದು ಆಕೆ ಸಹೋದರ ನಿತಿನ್ ಎಸ್‌ಐಟಿ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. 13 ವರ್ಷಗಳ ಹಿಂದೆ ಆಕೆ ನಾಪತ್ತೆಯಾದಾಗ ಪೂಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದೆ. ಆದರೆ, ಅವರು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ನಿನ್ನ ತಂಗಿ ಸಿಕ್ಕರೆ ತಿಳಿಸುತ್ತೇವೆ ಎಂದು ಹೇಳಿದ್ದರು. 13 ವರ್ಷಗಳ ಹಿಂದೆ ಆಕೆ ಧರ್ಮಸ್ಥಳಕ್ಕೆ ಹೋಗಿ ಬರುತ್ತೇನೆ ಎಂದು ನಮ್ಮ ಊರಿನ ಮಹಿಳೆ ಜೊತೆ ಹೋಗಿದ್ದಳು. ಆದರೆ, ಆ ಮಹಿಳೆ ಮನೆಗೆ ವಾಪಸ್ ಆಗಿದ್ದಾಳೆ. ನನ್ನ ತಂಗಿ ಮರಳಿ ಬಂದಿಲ್ಲ. ಈ ಬಗ್ಗೆ ಆ ಮಹಿಳೆಗೆ ಕೇಳಿದರೆ ಆಕೆ ಕೂಡ ನನಗೆ ಗೊತ್ತಿಲ್ಲ ಎಂದು ಹೇಳುತ್ತಾಳೆ. ಎಸ್‌ಐಟಿ ರಚನೆಯಾದ ಬಳಿಕ ನ್ಯಾಯ ಸಿಗುವ ವಿಶ್ವಾಸ ಬಂದಿದೆ ಎಂದಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಅಲ್ಲ ಈಗ ಕನ್ಯಾಡಿಯ ಕಾಡಿನಲ್ಲೂ ಸಿಗಲಿಲ್ಲ ಯಾವುದೇ ಮೂಳೆ!
ಈ ಬಗ್ಗೆ ನಿತಿನ್ ʻಪಬ್ಲಿಕ್ ಟಿವಿʼ ಜೊತೆ ಮಾತನಾಡಿದ್ದು, ನನ್ನ ಸಹೋದರಿ 2012ರಲ್ಲಿ ಕಾಣೆಯಾಗಿದ್ದಾಳೆ. ಆಕೆಯನ್ನ ಕರೆದುಕೊಂಡ ಹೋದ ಮಹಿಳೆ ಸರ್ಕಾರಿ ನೌಕರಿಯಲ್ಲಿದ್ದಾಳೆ. ಆಕೆ ಹೆಸರನ್ನು ಪೊಲೀಸರಿಗೆ ತಿಳಿಸಿದ್ದೇನೆ. ಆಕೆ ವಿರುದ್ಧವೂ ಪುಂಜಾಲಕಟ್ಟೆಯಲ್ಲಿ ದೂರು ನೀಡಿದ್ದೇನೆ. ಆಕೆ ಮನೆ ಬಳಿ ಹೋಗಿ ಜಗಳ ಮಾಡಿದ್ದೇನೆ. ಆದರೂ ಆಕೆ ಏನೂ ಹೇಳಿಲ್ಲ. 13 ವರ್ಷಗಳ ಹಿಂದೆ ಹೋರಾಟ ಮಾಡುವಷ್ಟು ಧೈರ್ಯ ಇರಲಿಲ್ಲ. ಹಾಗಾಗಿ, ಮೇಲಾಧಿಕಾರಿಗಳ ಗಮನಕ್ಕೆ ತಂದಿರಲಿಲ್ಲ. ನಮ್ಮ ಸಹೋದರಿಗೆ ಏನಾಗಿದೆ ಅನ್ನೋದು ಗೊತ್ತಾಗಬೇಕು. ಆಕೆ ಹೋದಾಗಿನಿಂದ ನಮ್ಮ ಮನೆಯಲ್ಲಿ ತಾಯಿ ಅನಾರೋಗ್ಯ ಪೀಡಿತರಾಗಿದ್ದಾರೆ. ಈಗ ಮನೆಯಲ್ಲಿ ಮಾತನಾಡಿ ದೂರು ನೀಡಲು ಬಂದಿದ್ದೇನೆ. ಪುಂಜಾಲಕಟ್ಟೆ ಠಾಣೆಯಲ್ಲಿ ದೂರು ನೀಡಲು ಹೇಳಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ನನ್ನ ತಂಗಿ ಕಾಣೆಯಾದಾಗ 17 ವರ್ಷ ಈಗ ಆಕೆ ವಯಸ್ಸು 31-32 ವರ್ಷ ಇರಬಹುದು, ನಾವು ಧರ್ಮಸ್ಥಳ ಕ್ಷೇತ್ರದ ಮೇಲೆ ಯಾವುದೇ ಅಪಪ್ರಚಾರ ಮಾಡುವ ಉದ್ದೇಶ ಹೊಂದಿಲ್ಲ. ಕ್ಷೇತ್ರದ ಮೇಲೆ ಗೌರವವಿದೆ. ಆದರೆ, ನಮಗೆ ನ್ಯಾಯ ಸಿಗಬೇಕು. ನಮ್ಮ ತಂಗಿ ಏನಾದಳು? ಎಲ್ಲಿಗೆ ಹೋದಳು? ಇದ್ದಾಳೋ? ಇಲ್ವೋ? ಗೊತ್ತಾಗಬೇಕು ಅಷ್ಟೆ. ನನ್ನ ತಂಗಿಯನ್ನ ಕರೆದುಕೊಂಡು ಹೋದ ಮಹಿಳೆಯ ವಿರುದ್ಧವು ಪೊಲೀಸರು ತನಿಖೆ ಮಾಡಲಿ ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಬುರುಡೆ ರಹಸ್ಯ| ಇದೊಂದು ಖಾಲಿ ಡಬ್ಬ, ದೊಡ್ಡ ಷಡ್ಯಂತ್ರ ನಡೆದಿದೆ: ಡಿಕೆಶಿ