ಡಾಲಿ ಧನಂಜಯ್ (Daali Dhananjaya) ನಾಯಕನಾಗಿ ನಟಿಸುತ್ತಿರುವ ‘ಹಲಗಲಿ’ ಚಿತ್ರದ ಫಸ್ಟ್ ಲುಕ್ ಗುರುವಾರ ಸಂಜೆ ಅದ್ದೂರಿಯಾಗಿ ಬಿಡುಗಡೆ ಆಗುತ್ತಿದೆ. ಅದಕ್ಕೂ ಮುನ್ನ ಸಿನಿಮಾದ ಗ್ಲಿಂಪ್ಸ್ (Glimpse Release) ರಿಲೀಸ್ ಮಾಡಿದೆ ಚಿತ್ರತಂಡ. ಆ ಗ್ಲಿಂಪ್ಸ್ ನಾನಾ ಅರ್ಥಗಳನ್ನು ನೀಡುತ್ತಿದೆ. ಡಾಲಿ ಅಭಿಮಾನಿಗಳು ಅದನ್ನು ಹಬ್ಬದ ರೀತಿಯಲ್ಲಿ ಆಚರಿಸುತ್ತಿದ್ದಾರೆ.
ಬ್ರಿಟಿಷರ ವಿರುದ್ಧ ಮೊಟ್ಟ ಮೊದಲ ಗೆರಿಲ್ಲಾ ವಾರ್ ಮಾಡಿದ ಹಲಗಲಿ ವೀರರ ಕುರಿತು ಈ ಚಿತ್ರದಲ್ಲಿ ಡಾಲಿ ಅವರು ಬೇಡರ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಗ್ಲಿಂಪ್ಸ್ ಬಿಡುಗಡೆಗೂ ಮುನ್ನವೇ ಚಿತ್ರತಂಡ ಹಂಚಿಕೊಂಡಿರುವ ಈ ಎರಡೂ ಫೋಟೋಗಳು ಸಾಕಷ್ಟು ಕುತೂಹಲ ಮೂಡಿಸಿದೆ.
ಸುಕೇಶ್ ನಾಯಕ್ ನಿರ್ದೇಶನದ ಈ ಚಿತ್ರವನ್ನು ಕಲ್ಯಾಣ್ ಚಕ್ರವರ್ತಿ ಡಿ ಅವರು 80 ಕೋಟಿ ವೆಚ್ಚಿದಲ್ಲಿ ನಿರ್ಮಿಸುತ್ತಿದ್ದಾರೆ. ಕನ್ನಡದ ಜತೆಗೆ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಮೂಡಿ ಬರುತ್ತಿರುವ ಚಿತ್ರ ಇದಾಗಿದೆ. ಮೊಟ್ಟ ಮೊದಲ ಬಾರಿಗೆ ಡಾಲಿ ಧನಂಜಯ್ ಅವರು ಐತಿಹಾಸಿಕ ಕತೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
1857ರಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚು ಹೊತ್ತಿದಾಗ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಹಲಗಲಿ ಗ್ರಾಮದ ಬೇಡರು, ಬ್ರಿಟಿಷರ ವಿರುದ್ಧ ಸಮರ ಸಾರಿದ್ದರು. ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಬ್ರಿಟಿಷರಿಗೆ ಗೆರಿಲ್ಲಾ ವಾರ್ ಮೂಲಕ ಸಿಂಹಸ್ವಪ್ನವಾಗಿ ಕಾಡಿದ ಹಲಗಲಿ ಬೇಡರ ಈ ಚರಿತ್ರಿಕ ಕಥನವನ್ನು ದಾಖಲಿಸುವ ನಿಟ್ಟಿನಲ್ಲಿ ಈ ಚಿತ್ರ ಮೂಡಿ ಬರುತ್ತಿದೆ.