ನವದೆಹಲಿ: ಸುಪ್ರೀಂ ಕೋರ್ಟ್ (Supreme Court) ಆವರಣದಲ್ಲೇ ವಕೀಲರೊಬ್ಬರು (Lawyer) ಶ್ವಾನ ಪ್ರಿಯನ ಕೆನ್ನೆಗೆ ಬಾರಿಸಿದ ಘಟನೆ ನಡೆದಿದೆ.
ದೆಹಲಿಯಲ್ಲಿನ ಬೀದಿ ನಾಯಿಗಳನ್ನು (Stray Dogs) ವಸತಿ ಪ್ರದೇಶಗಳಿಂದ ಆಶ್ರಯ ತಾಣಗಳಿಗೆ ಸ್ಥಳಾಂತರಿಸುವ ಆದೇಶದ ವಿರುದ್ಧ ಅ.11 ರಂದು ಸುಪ್ರೀಂ ಕೋರ್ಟ್ ಹೊರಗೆ ಶ್ವಾನ ಪ್ರಿಯರು ಮತ್ತು ವಕೀಲರ ನಡುವೆ ವಾಗ್ವಾದ ವಾಗಿದೆ. ಈ ವೇಳೆ, ವಕೀಲರೊಬ್ಬರು ವ್ಯಕ್ತಿಯೊಬ್ಬನನ್ನು ಎಳೆದುಕೊಂಡು ಕೆನ್ನೆಗೆ ಬಾರಿಸಿದ್ದಾರೆ. ಈ ವಿಡಿಯೋ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಬೀದಿ ನಾಯಿಗಳನ್ನು ಆಶ್ರಯ ತಾಣಕ್ಕೆ ಸೇರಿಸೋ ತೀರ್ಪನ್ನು ಪರಿಶೀಲಿಸುತ್ತೇನೆ: ಸಿಜೆಐ
ವೈರಲ್ ಆದ ವಿಡಿಯೋ ಆದೇಶ ಬಂದ ದಿನದ್ದು ಎನ್ನಲಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇನ್ನೂ ವಿಡಿಯೋದಲ್ಲಿ, ಶ್ವಾನಪ್ರಿಯರು ವಕೀಲರನ್ನು ನಿಂದಿಸುವುದು ಸಹ ದಾಖಲಾಗಿದೆ. ಈ ವೇಳೆ ಕೋಪಗೊಂಡ ವಕೀಲರು ಹಲ್ಲೆ ನಡೆಸಿದ್ದಾರೆ.
ಸೋಮವಾರ ಸುಪ್ರೀಂ ಕೋರ್ಟ್ ದೆಹಲಿಯಲ್ಲಿ ಹೆಚ್ಚುತ್ತಿರುವ ಬೀದಿ ನಾಯಿಗಳ ದಾಳಿಯ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು. ಅಲ್ಲದೇ ಮಕ್ಕಳು ಮತ್ತು ವೃದ್ಧರ ಮೇಲೆ ಬೀದಿ ನಾಯಿಗಳು ದಾಳಿ ನಡೆಸುತ್ತಿವೆ. ಮಕ್ಕಳು ಹೆದರಿಕೆ ಇಲ್ಲದೇ ಹೊರಗೆ ಓಡಾಡಬೇಕು ಎಂದರೆ ಸೂಕ್ತ ಕ್ರಮಕೈಗೊಳ್ಳಬೇಕು. ಯಾವ ಮಕ್ಕಳು ರೇಬಿಸ್‌ಗೆ ತುತ್ತಾಗಬಾರದು. 2 ತಿಂಗಳೊಳಗಾಗಿ ನಾಯಿಗಳನ್ನು ಆಶ್ರಯತಾಣಗಳಿಗೆ ಸೇರಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿತ್ತು. ಈ ತೀರ್ಪಿನ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ.
ಈ ತೀರ್ಪು ಹೊರಬೀಳುತ್ತಿದ್ದಂತೆ ಪ್ರಾಣಿಪ್ರಿಯರು, ಸೆಲೆಬ್ರಿಟಿಗಳು ತೀರ್ಪಿನ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದರು. ಮಾಜಿ ಕೇಂದ್ರ ಸಚಿವೆ ಮೇನಕಾ ಗಾಂಧಿಯವರು ಸಹ ಈ ಆದೇಶವನ್ನು ತೀವ್ರವಾಗಿ ಟೀಕಿಸಿದ್ದರು. 3 ಲಕ್ಷ ನಾಯಿಗಳಿವೆ ಅವುಗಳನ್ನು ಆಶ್ರಯ ತಾಣಕ್ಕೆ ಸಾಗಿಸಲು, ನಿರ್ವಹಿಸಲು ಸುಮಾರು 15,000 ಕೋಟಿ ರೂ. ವೆಚ್ಚವಾಗುತ್ತದೆ ಎಂದು ಅಸಮಾಧಾನ ಹೊರಹಾಕಿದ್ದರು.
ಹಲವಾರು ಆಕ್ಷೇಪಗಳು ಕೇಳಿಬಂದ ಬೆನ್ನಲ್ಲೇ ಆದೇಶವನ್ನು ಮರುಪರಿಶೀಲಿಸುವುದಾಗಿ ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ತಿಳಿಸಿದ್ದಾರೆ. ಇದನ್ನೂ ಓದಿ: 2 ತಿಂಗಳಲ್ಲಿ ಇಡೀ ದೆಹಲಿಯನ್ನ ಬೀದಿನಾಯಿಗಳಿಂದ ಮುಕ್ತಗೊಳಿಸಬೇಕು – ಸುಪ್ರೀಂ ಆದೇಶ