ಅಗರ್ತಲಾ: ಹೆಣ್ಣು ಹುಟ್ಟಿತೆಂದು ಬೇಸರಗೊಂಡು ತ್ರಿಪುರ ರಾಜ್ಯ ರೈಫಲ್ಸ್ ಸಿಬ್ಬಂದಿ ತನ್ನ ಮಗುವಿಗೆ ವಿಷ ಹಾಕಿ ಕೊಂದಿರುವ ಘಟನೆ ನಡೆದಿದೆ. ಈ ಘಟನೆ ತ್ರಿಪುರದ ಖೋವಾಯಿ ಜಿಲ್ಲೆಯಲ್ಲಿರುವ ಅಹೆಡಬಾರಿ ಗ್ರಾಮದಲ್ಲಿ ನಡೆದಿದೆ.
ಮಗುವನ್ನು ಖೋವಾಯಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ರಾಜ್ಯ ರಾಜಧಾನಿ ಅಗರ್ತಲಾ ಜಿಬಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಷ್ಟರಲ್ಲಾಗಲೇ ಮಗು ಮೃತಪಟ್ಟಿತ್ತು. ಮರಣೋತ್ತರ ಪರೀಕ್ಷೆಗೆ ವೈದ್ಯರು ಮೃತದೇಹವನ್ನು ಮೋರ್ಗ್ನಲ್ಲಿ ಇಟ್ಟುಕೊಂಡಿದ್ದಾರೆ.
ಪ್ರಸ್ತುತ ಎಡಿಸಿ ಖುಮುಲ್ವಾಂಗ್ ಪ್ರಧಾನ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 10ನೇ ಬೆಟಾಲಿಯನ್ ಟಿಎಸ್‌ಆರ್ ರಾಥೀಂದ್ರಾ ಡೆಬ್ಬರ್ಮಾನನ್ನು ಬಂಧಿಸಲಾಗಿದೆ. ಆರೋಪಿಯನ್ನು ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ನ್ಯಾಯಾಲಯ ಆದೇಶಿಸಿದೆ.
ಮಗುವಿನ ತಾಯಿ ಮಿಥಾಲಿ ಡೆಬ್ಬರ್ಮಾ, ತಮ್ಮ ಪತಿಯು ಮಗಳಿಗೆ ವಿಷವನ್ನು ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಗಂಡು ಮಗು ಬೇಕು ಎಂಬ ಆಸೆಯನ್ನು ಪತಿ ವ್ಯಕ್ತಪಡಿಸುತ್ತಿದ್ದರು. ಎರಡೂ ಹೆಣ್ಣುಮಕ್ಕಳಾಗಿದ್ದಕ್ಕೆ ಬೇಸರಗೊಂಡಿದ್ದರು. ಅದೇ ಕಾರಣಕ್ಕೆ ನನಗೆ ಹಿಂಸೆ ನೀಡುತ್ತಿದ್ದರೆಂದು ದೂರಿದ್ದಾರೆ.
ನಾವು ಸಹೋದರಿಯ ಮನೆಗೆ ಹೋಗಿದ್ದೆವು. ಮಗಳಿಗೆ ಬಿಸ್ಕೆಟ್ ಕೊಡಿಸಲು ಹತ್ತಿರದ ಅಂಗಡಿಯೊಂದಕ್ಕೆ ಪತಿ ಕರೆದೊಯ್ದಿದ್ದರು. ಮನೆಗೆ ಬಂದಿದ್ದಾಗ ಮಗಳು ವಾಂತಿ ಮಾಡಿಕೊಳ್ಳಲು ಶುರುಮಾಡಿದಳು. ಬಾಯಿಯಲ್ಲಿ ಔಷಧಿ ವಾಸನೆ ಬರುತ್ತಿತ್ತು. ಈ ಬಗ್ಗೆ ಪತಿಯನ್ನು ವಿಚಾರಿಸಿದಾಗ ಸತ್ಯ ತಿಳಿದುಬಂತು. ಈ ವೇಳೆ ಪತಿ ನನ್ನ ಮೇಲೆ ಹಲ್ಲೆ ನಡೆಸಿದ ಎಂದು ಮಿಥಾಲಿ ತಿಳಿಸಿದ್ದಾರೆ.