ನವದೆಹಲಿ: 15 ತಿಂಗಳ ಹೆಣ್ಣು ಮಗುವಿನ ಅಳು ನಿಲ್ಲಿಸಲು ಡೇಕೇರ್‌ನ (Daycare) ಮಹಿಳಾ ಸಿಬ್ಬಂದಿ ತೊಡೆಗೆ ಕಚ್ಚಿ, ನೆಲಕ್ಕೆ ಬೀಸಾಕಿ ಹಲ್ಲೆ ನಡೆಸಿರುವ ಘಟನೆ ಗ್ರೇಟರ್ ನೋಯ್ಡಾದ (Greater Noida) ವಸತಿ ಸಂಕೀರ್ಣದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಆ.4ರಂದು ತಾಯಿಯೊಬ್ಬರು ತಮ್ಮ ಮಗುವನ್ನು ಡೇಕೇರ್ ಸೆಂಟರ್‌ನಿಂದ ಮನೆಗೆ ಕರೆತಂದಿದ್ದರು. ಆಗ ಮಗು ಜೋರಾಗಿ ಅಳುತ್ತಿತ್ತು. ಈ ವೇಳೆ ಮಗುವಿನ ಬಟ್ಟೆ ಬದಲಾಯಿಸುತ್ತಿದ್ದ ತಾಯಿ ತೊಡೆಯ ಮೇಲೆ ವೃತ್ತಾಕಾರದ ಗುರುತುಗಳನ್ನು ಕಂಡರು. ಇದರಿಂದ ಗಾಬರಿಗೊಂಡು ಮಗುವನ್ನು ವೈದ್ಯರ ಬಳಿ ಕರೆದುಕೊಂಡು ಹೋದರು. ಆಗ ವೈದ್ಯರು ಮಗುವಿಗೆ ಯಾರೋ ಕಚ್ಚಿದ್ದಾರೆ ಎಂದು ತಿಳಿಸಿದ್ದರು. ಬಳಿಕ ಡೇಕೇರ್ ಸೆಂಟರ್‌ಗೆ ತೆರಳಿದ ಪೋಷಕರು ಅಲ್ಲಿನ ಸಿಸಿಟಿವಿ ಪರಿಶೀಲಿಸಿದಾಗ ಹಲ್ಲೆ ಮಾಡಿರುವುದಾಗಿ ಕಂಡುಬಂದಿದೆ.ಇದನ್ನೂ ಓದಿ: ಮಹಿಳೆಯ ದೇಹ ತುಂಡರಿಸಿ ಎಸೆದಿದ್ದ ಪ್ರಕರಣಕ್ಕೆ ಟ್ವಿಸ್ಟ್ – ಡೆಂಟಿಸ್ಟ್ ಅಳಿಯನಿಂದಲೇ ಅತ್ತೆಯ ಹತ್ಯೆ
ಸಿಸಿಟಿವಿಯಲ್ಲಿ (CCTV) ಮಗುವಿನ ಅಳು ನಿಲ್ಲಿಸಲು ನೆಲಕ್ಕೆ ಬೀಸಾಕಿರುವುದು, ಕೆನ್ನೆಗೆ ಹೊಡೆದಿರುವುದು, ಕಚ್ಚಿರುವುದು, ಪ್ಲಾಸ್ಟಿಕ್ ಬ್ಯಾಟ್‌ನಿಂದ ಹೊಡೆದಿರುವ ದೃಶ್ಯಗಳು ಸೆರೆಯಾಗಿವೆ.
ಈ ಕುರಿತು ಮಗುವಿನ ಪೋಷಕರು ನೋಯ್ಡಾದ ಸೆಕ್ಟರ್-142 ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಡೇಕೇರ್ ಮಹಿಳಾ ಸಿಬ್ಬಂದಿಯನ್ನು ವಶಕ್ಕೆ ಪಡೆದಿದ್ದಾರೆ. ಇನ್ನೂ ಡೇಕೇರ್ ಮುಖ್ಯಸ್ಥರು ಮಗುವನ್ನು ಸಮಾಧಾನಪಡಿಸಲು ಹಾಗೂ ಸಿಬ್ಬಂದಿ ಹೊಡೆಯುತ್ತಿರುವಾಗ ರಕ್ಷಿಸಲು ಯಾವುದೇ ಪ್ರಯತ್ನ ಮಾಡಲಿಲ್ಲ. ಬದಲಾಗಿ ಮಗುವಿಗೆ ನಿಂದಿಸಿ, ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.ಇದನ್ನೂ ಓದಿ: ಟ್ರಾಫಿಕ್‌ನಲ್ಲಿ ಸಿಲುಕಿದ ಅಂಬುಲೆನ್ಸ್ – ರಸ್ತೆಯಲ್ಲಿ ಓಡಿ ಟ್ರಾಫಿಕ್ ಕ್ಲಿಯರ್ ಮಾಡಿದ ASI ಅಪರ್ಣಾ