– ಹಲವು ರಸ್ತೆಗಳು ಜಲಾವೃತ, ಸವಾರರಿಗೆ ಸಂಕಷ್ಟ
ಬೆಳಗಾವಿ: ಜಿಲ್ಲೆಯಾದ್ಯಂತ ಸುರಿದ ಧಾರಾಕಾರ ಮಳೆಗೆ (Rain) ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿದ್ದು, ಜಲಾವೃತಗೊಂಡ ರಸ್ತೆ ದಾಟಲು ಆಗದೇ ಯಲ್ಲಮ್ಮನ (Savadatti Yallamma) ಗುಡ್ಡದ ಭಕ್ತರು ಪರದಾಡಿದ್ದಾರೆ. ಮತ್ತೊಂದೆಡೆ ನಿರಂತರ ಮಳೆಗೆ ಯಲ್ಲಮ್ಮನ ಗುಡ್ಡದ ಪ್ರದೇಶದಲ್ಲಿ ಸಹ್ಯಾದ್ರಿ, ಕೊಡಚಾದ್ರಿ ಸೃಷ್ಟಿಯಾಗಿದ್ದು ಪ್ರವಾಸಿಗರನ್ನ ಕೈಬೀಸಿ ಕರೆಯುತ್ತಿದೆ.
ಸುಡುಬಿಸಿಲಿನ ಬೇಗೆಗೆ ಬೆಂದಿದ್ದ ಸವದತ್ತಿ ಜನರಿಗೆ ಮಳೆರಾಯನ ತಂಪೆರಿದಿದ್ದಷ್ಟೇ ಅಲ್ಲಾ, ಸಾಕಷ್ಟು ಅವಾಂತರಗಳನ್ನೇ ಸೃಷ್ಟಿಸಿದ್ದಾನೆ. ರಭಸವಾಗಿ ಸುರಿದ ಧಾರಾಕಾರ ಮಳೆಗೆ ಯಲ್ಲಮ್ಮನ ಗುಡ್ಡಕ್ಕೆ ಸಂಪರ್ಕಿಸುವ ರಸ್ತೆಗಳು ಹಳ್ಳಗಳಿಂದ ಜಲಾವೃತಗೊಂಡು ಸಂಪೂರ್ಣ ಬಂದ್ ಆಗಿದೆ. ಇದರಿಂದಾಗಿ ದೇವಸ್ಥಾನಕ್ಕೆ ಬರೋ ಭಕ್ತರು ದೇವಿಯ ದರ್ಶನವಿಲ್ಲದೇ ಪರದಾಡಿದ್ದಾರೆ. ನೂಲಹುಣ್ಣಿಮೆ ಹಿನ್ನೆಲೆ ರೇಣುಕಾ ಯಲ್ಲಮ್ಮನ ದೇವಸ್ಥಾನದಲ್ಲಿ ಜಾತ್ರೆ ಪ್ರಾರಂಭವಾಗುತ್ತದೆ. ಹಾಗಾಗಿ ಯಲ್ಲಮ್ಮನ ಗುಡ್ಡಕ್ಕೆ ಮಹಾರಾಷ್ಟ್ರ, ಗೋವಾ, ವಿಜಯಪುರ, ಬಾಗಲಕೋಟೆ, ಗದಗ, ಧಾರವಾಡ, ಹುಬ್ಬಳ್ಳಿ ಸೇರಿದಂತೆ ಕರ್ನಾಟಕದ ಮೂಲೆಮೂಲೆಗಳಿಂದ ಭಕ್ತರು ದೇವಿಯ ದರ್ಶನಕ್ಕೆ ಆಗಮಿಸುತ್ತಾರೆ. ಇದನ್ನೂ ಓದಿ: ಮೇಘಸ್ಪೋಟಕ್ಕೆ ನಾಶವಾಯ್ತು ಧರಾಲಿ – ಗ್ರಾಮದ ವಿಶೇಷತೆ ಏನು? ಮೊದಲು ಹೇಗಿತ್ತು?
ಆದರೆ ಉಗರಗೋಳದಲ್ಲಿ ರಸ್ತೆ ಸಂಪೂರ್ಣವಾಗಿ ಬಂದ್ ಆಗಿದ್ದರಿಂದ ಭಕ್ತರು ಪರದಾಡಿದ್ದರು. ಅಷ್ಟೇ ಅಲ್ಲದೇ ಉಗರಗೋಳ ಗ್ರಾಮದಲ್ಲಿ ಕೊಚ್ಚಿಕೊಂಡು ಹೋಗುತ್ತಿರುವ ಬೈಕ್ ರಕ್ಷಣೆಗೆ ವ್ಯಕ್ತಿಯೊಬ್ಬರು ಹರಸಾಹಸ ಪಟ್ಟಿದ್ದಾರೆ. ಜೊತೆಗೆ ಯಲ್ಲಮ್ಮನ ಗುಡ್ಡದ ಎಣ್ಣೆ ಹೊಂಡದಲ್ಲಿ ರಭಸವಾಗಿ ಹರಿಯುತ್ತಿರುವ ಮಳೆಯ ನೀರಿನಲ್ಲಿ ವ್ಯಕ್ತಿಯೊಬ್ಬರು ಸಿಲುಕಿದ್ದರು. ಇದನ್ನೂ ಓದಿ: `ಪಬ್ಲಿಕ್ ಟಿವಿ’ ವಿದ್ಯಾಮಂದಿರಕ್ಕೆ ಇಂದು ಚಾಲನೆ
ಇನ್ನು, ಸವದತ್ತಿ ತಾಲೂಕಿನಾದ್ಯಂತ ಸುರಿದ ಭಾರೀ ಮಳೆಯಿಂದಾಗಿ ಸಹ್ಯಾದ್ರಿ-ಕೊಡಚಾದ್ರಿಯನ್ನೇ ಮೀರಿಸುವಂತೆ ಸುಕ್ಷೇತ್ರ ಯಮ್ಮಲ್ಲನ ಗುಡ್ಡದ ಸುತ್ತಮುತ್ತಲಿನ ಪ್ರದೇಶ ನಿರ್ಮಾಣವಾಗಿದೆ. ಬೆಟ್ಟ-ಕಲ್ಲುಬಂಡೆಗಳ ಮೇಲೆ ಎಲ್ಲೆಂದರಲ್ಲಿ ಸುಂದರ ಕಿರುಜಲಪಾತಗಳು ಸೃಷ್ಟಿಯಾಗಿದ್ದು, ಬೆಟ್ಟದಿಂದ ನೀರು ಜಾರಿ ದುಮ್ಮಿಕ್ಕುತ್ತಿದೆ. ಬೆಟ್ಟದಿಂದ ಜಾರುವ ನೀರ್ಝರಿಗಳ ದೃಶ್ಯ ನೋಡುಗರ ಕಣ್ಮನ ಸೆಳೆಯುತ್ತಿದೆ. ಮತ್ತೊಂದೆಡೆ ಯಲ್ಲಮ್ಮನ ಗುಡ್ಡದಲ್ಲಿ ಭಾರಿ ಮಳೆಗೆ ಎಣ್ಣೆಹೊಂಡ ಸಂಪೂರ್ಣ ಜಲಾವೃತಗೊಂಡರೆ, ಧಾರಾಕಾರ ಮಳೆಯ ನೀರು ಶ್ರೀರೇಣುಕಾ ಯಲ್ಲಮ್ಮನ ದೇವಸ್ಥಾನಕ್ಕೆ ನುಗ್ಗಿದೆ. ದೇವಸ್ಥಾನ ಕೌಂಟರ್‌ಗಳು, ದೇವಸ್ಥಾನ ಗರ್ಭಗುಡಿ ಹೀಗೆ ದೇವಸ್ಥಾನ ಸುತ್ತಲೂ ಮಳೆ ನೀರು ಆವರಿಸಿಕೊಂಡಿದೆ. ಉತ್ತರ ಕರ್ನಾಟಕ ಶಕ್ತಿದೇವಿ ಯಲ್ಲಮ್ಮನ ದೇವಿಗೂ ಮಳೆರಾಯ ಜಲದಿಗ್ಭಂಧನ ಹಾಕಿದ್ದಾನೆ. ಇದನ್ನೂ ಓದಿ: ಭಾರತದ ಮೋಸ್ಟ್ ವಾಂಟೆಡ್ ʻಸಲೀಂ ಪಿಸ್ತೂಲ್ʼ ನೇಪಾಳದಲ್ಲಿ ಅರೆಸ್ಟ್
ರಾಮದುರ್ಗ ತಾಲೂಕಿನಲ್ಲೂ ಭಾರೀ ಪ್ರಮಾಣದಲ್ಲಿ ಮಳೆಯಾಗಿದ್ದು, ತಾಲೂಕಿನ ಕಿಲ್ಲಾತೋರಗಲ್ ಬಳಿ ಗುಡ್ಡ ಕುಸಿತವಾಗಿದೆ. ನಡುರಸ್ತೆಯಲ್ಲೇ ಬೃಹತ್ ಕಲ್ಲು ಬಂಡೆಗಳು ಉರುಳಿ ಬಿದಿದ್ದು, ಯಾವುದೇ ವಾಹನ ಸಂಚಾರವಿಲ್ಲದೇ ಭಾರೀ ಅನಾಹುತವೊಂದು ತಪ್ಪಿದೆ. ಮಳೆಯಿಂದ ಏನೆಲ್ಲಾ ಅನಾಹುತ ಆಗಿದೇ ಅನೋದನ್ನ ಪರಿಶೀಲನೆ ಮಾಡುತ್ತಿದ್ದೇವೆ ಎಂದು ಸವದತ್ತಿ ತಹಶಿಲ್ದಾರರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಬಿಹಾರದಲ್ಲಿ ಮತಪಟ್ಟಿ ವಿಶೇಷ ಪರಿಷ್ಕರಣೆಗೆ ವಿರೋಧವೇಕೆ?- ಕಾಂಗ್ರೆಸ್ಸಿಗರಿಗೆ ಬಿ.ವೈ.ವಿಜಯೇಂದ್ರ ಪ್ರಶ್ನೆ