ನವದೆಹಲಿ: ಉತ್ತರಾಖಂಡದ (Uttarakhand) ಉತ್ತರಕಾಶಿಯಲ್ಲಿ (Uttarakashi) ಸಂಭವಿಸಿದ ಭೀಕರ ಪ್ರವಾಹದಿಂದ ಉಂಟಾದ ವಿನಾಶದ ಪ್ರಮಾಣದ ಚಿತ್ರಣಗಳನ್ನು ಇಸ್ರೋ (ISRO) ಬಹಿರಂಗಪಡಿಸಿದೆ.
ಆ.5 ರಂದು ಸಂಭವಿಸಿದ ಈ ದುರಂತದಲ್ಲಿ ಐದು ಜನರು ಸಾವನ್ನಪ್ಪಿದ್ದಾರೆ. 50 ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ. ಹಿಮನದಿಯ ಕೊಳ ಸ್ಫೋಟವೇ ಪ್ರವಾಹಕ್ಕೆ ಕಾರಣ ಎಂದು ತಜ್ಞರು ತಿಳಿಸಿದ್ದಾರೆ. ಇದನ್ನೂ ಓದಿ: ಉತ್ತರಕಾಶಿಯಲ್ಲಿ ಮೇಘಸ್ಫೋಟ – ಈವರೆಗೆ 274 ಮಂದಿ ರಕ್ಷಣೆ, ಪತ್ತೆಯಾಗದ 59 ಜನರು
ಪ್ರವಾಹದ ಎರಡು ದಿನಗಳ ನಂತರ ಇಸ್ರೋದ ಕಾರ್ಟೊಸ್ಯಾಟ್-2S ಉಪಗ್ರಹವು, ಪ್ರವಾಹ ಪೀಡಿತ ವಲಯದ ಚಿತ್ರಗಳನ್ನು ಸೆರೆಹಿಡಿದಿದೆ. ಆ.7 ರಂದು ತೆಗೆದ ಈ ಚಿತ್ರಗಳು, ಖೀರ್ ಗಡ್ ಹೊಳೆ ಭಾಗೀರಥಿ ನದಿಯನ್ನು ಸೇರುವ ಧರಾಲಿ ಗ್ರಾಮದಲ್ಲಿ ಮಣ್ಣು ಮತ್ತು ಕಲ್ಲಿನ ರಾಶಿ ಸುಮಾರು 20 ಹೆಕ್ಟೇರ್‌ಗಳನ್ನು ಆವರಿಸುವುದನ್ನು ತೋರಿಸಿವೆ.
ಈ ಚಿತ್ರಗಳು, ರಕ್ಷಣಾ ಕಾರ್ಯಾಚರಣೆ, ಪ್ರವಾಹದಲ್ಲಿ ಮುಳುಗಿರುವ ಪ್ರದೇಶಗಳು, ಸಂಪರ್ಕ ಕಡಿತಗೊಂಡ ಹಳ್ಳಿಗಳ ಸಂಪರ್ಕ ಪುನಃಸ್ಥಾಪಿಸಲು ಅಧಿಕಾರಿಗಳಿಗೆ ಸಹಾಯ ಮಾಡುತ್ತಿವೆ ಎಂದು ಇಸ್ರೋ ತಿಳಿಸಿದೆ. ಇದನ್ನೂ ಓದಿ: ಅಪ್ಪಾ.. ನಾವು ಬದುಕುಳಿಯಲ್ಲ, ಇಲ್ಲಿ ನೀರು ತುಂಬಿದೆ: ಉತ್ತರಾಖಂಡ ಪ್ರವಾಹದಲ್ಲಿ ಮಗನ ಕೊನೆ ಮಾತು ನೆನೆದು ತಂದೆ ಕಣ್ಣೀರು
ಕಾಲುವೆ ಹೊಳೆಯಂತೆ ಹರಿದಿರುವುದು, ಮೂಲಸೌಕರ್ಯಗಳ ನಾಶ, ಹಲವಾರು ಮನೆಗಳ ಕಣ್ಮರೆ, ರಸ್ತೆ-ತೋಟ-ಸೇತುವೆಗಳು ನಾಶವಾಗಿರುವುದನ್ನು ಈ ಚಿತ್ರಗಳಲ್ಲಿ ಕಾಣಬಹುದಾಗಿದೆ. ಮನೆಗಳು ಮಣ್ಣು ಮತ್ತು ಅವಶೇಷಗಳಡಿ ಕೊಚ್ಚಿ ಹೋಗಿವೆ. ಪ್ರವಾಹದಿಂದ ಸಾಕಷ್ಟು ಹಾನಿಯಾಗಿದೆ.
ಪ್ರವಾಹಕ್ಕೂ ಹಿಂದಿನ ಚಿತ್ರಣ ಹಾಗೂ ಪ್ರವಾಹ ನಂತರದ ಚಿತ್ರಗಳನ್ನು ಹಂಚಿಕೊಳ್ಳಲಾಗಿದೆ. ಧರಾಲಿ ಮತ್ತು ಭಾಗೀರಥಿ ನದಿಯ 2024 ರ ಜೂನ್ ತಿಂಗಳಲ್ಲಿ ತೆಗೆದ ಚಿತ್ರ ಇದರಲ್ಲಿದೆ. ನದಿಯ ದಡದಲ್ಲಿ ಮನೆಗಳು ಸಾಲಾಗಿ ನಿಂತಿವೆ. ಆದರೆ, ಈಗಿನ ಚಿತ್ರಗಳು ಪ್ರವಾಹದಿಂದಾಗಿ ಎಲ್ಲೆಡೆ ಮಣ್ಣು ಮತ್ತು ಕಲ್ಲಿನ ರಾಶಿ ತುಂಬಿರುವುದು ಕಾಣುತ್ತದೆ. ಜನವಸತಿ ಪ್ರವಾಹಕ್ಕೆ ಸಿಲುಕಿ ನಾಶವಾಗಿವೆ. ಇದನ್ನೂ ಓದಿ: ಮೇಘಸ್ಫೋಟವಲ್ಲ ಉತ್ತರಾಖಂಡದಲ್ಲಿ ಸಂಭವಿಸಿದ್ದು ಹಿಮಕೊಳ ಸ್ಫೋಟ!