ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ಆಗಿದೆ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಆರೋಪಕ್ಕೆ ಕೇಂದ್ರ ಚುನಾವಣಾ ಆಯೋಗ (Election Commission) ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಇಂಡಿಯಾ ಒಕ್ಕೂಟ ಸಭೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಮತಗಳ್ಳತನ ಆರೋಪವನ್ನು ಅಸಂಬದ್ಧ ವಿಶ್ಲೇಷಣೆ ಎಂದು ಚುನಾವಣಾ ಆಯೋಗ ಕರೆದಿದೆ. ದಾರಿತಪ್ಪಿಸುವ ವ್ಯಾಖ್ಯಾನಗಳನ್ನು ಹರಡಿದ್ದಕ್ಕಾಗಿ ದೇಶದ ಕ್ಷಮೆಯಾಚಿಸಿ ಎಂದು ಚುನಾವಣಾ ಆಯೋಗ ಒತ್ತಾಯಿಸಿದೆ. ಇದನ್ನೂ ಓದಿ: ಮೋದಿ ಮತಗಳ್ಳತನ ಮಾಡಿ ಪ್ರಧಾನಿಯಾಗಿದ್ದಾರೆ: ರಾಹುಲ್ ಗಾಂಧಿ ವಾಗ್ದಾಳಿ
ರಾಹುಲ್ ಗಾಂಧಿ ತಮ್ಮ ವಿಶ್ಲೇಷಣೆಯಲ್ಲಿ ನಂಬಿಕೆ ಇಟ್ಟರೆ, ಚುನಾವಣಾ ಆಯೋಗದ ವಿರುದ್ಧದ ಆರೋಪಗಳು ನಿಜವೆಂದು ನಂಬಿದರೆ, ಘೋಷಣೆಗೆ ಸಹಿ ಹಾಕುವಲ್ಲಿ ಅವರಿಗೆ ಯಾವುದೇ ಸಮಸ್ಯೆ ಇರಬಾರದು. ಅವರು ಘೋಷಣೆಗೆ ಸಹಿ ಹಾಕದಿದ್ದರೆ, ತಮ್ಮ ವಿಶ್ಲೇಷಣೆ ಮತ್ತು ಅಸಂಬದ್ಧ ಆರೋಪಗಳಲ್ಲಿ ನಂಬಿಕೆ ಇಟ್ಟಿಲ್ಲ ಎಂದರ್ಥ. ಈ ಸಂದರ್ಭದಲ್ಲಿ, ಅವರು ರಾಷ್ಟ್ರದ ಕ್ಷಮೆಯಾಚಿಸಬೇಕು. ಅವರಿಗೆ ಎರಡು ಆಯ್ಕೆಗಳಿವೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.
ಮತಗಳ್ಳತನ ಆರೋಪಗಳನ್ನು ಮಾಡುತ್ತಿರುವ ಕಾಂಗ್ರೆಸ್ ನಾಯಕ, ಗುರುವಾರ ಸಂಜೆ ಬಿಹಾರದಲ್ಲಿ ವಿಶೇಷ ಪರಿಷ್ಕರಣೆ ಅಥವಾ ಎಸ್‌ಐಆರ್, ಉಪರಾಷ್ಟ್ರಪತಿ ಚುನಾವಣೆ ಮತ್ತು ಇತರ ವಿಷಯಗಳ ಕುರಿತು ಚರ್ಚಿಸಲು ಕರೆಯಲಾಗಿದ್ದ ಇಂಡಿಯಾ ಒಕ್ಕೂಟದ ಡಿನ್ನರ್ ಸಭೆಯಲ್ಲಿ ಸ್ಫೋಟಕ ಹೇಳಿಕೆಗಳನ್ನು ನೀಡಿದ್ದರು. 2024 ರ ಲೋಕಸಭಾ ಚುನಾವಣೆ ಹಾಗೂ ಕರ್ನಾಟಕ ವಿಧಾನಸಭಾ ಕ್ಷೇತ್ರದಲ್ಲಿ ಭಾರಿ ಮತಗಳ್ಳತನ ಬೆಳಕಿಗೆ ಬಂದಿದೆ ಎಂದು ಆರೋಪಿಸಿದ್ದರು. ಇದನ್ನೂ ಓದಿ: ರಾಹುಲ್ ಆರೋಪದಲ್ಲಿ ಯಾವುದೇ ಹುರುಳಿಲ್ಲ, ದಾಖಲೆ ಇದ್ದರೆ ಕೋರ್ಟ್‌ಗೆ ಹೋಗಿ: ಶೆಟ್ಟರ್
ಕರ್ನಾಟಕದಲ್ಲಿ ನಡೆದ ಸಮೀಕ್ಷೆಯಲ್ಲಿ ಆರು ಪ್ರಮುಖ ಅಕ್ರಮಗಳು ಬಯಲಾಗಿವೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಒಂದೇ ಮತದಾರರ ಪಟ್ಟಿಯಲ್ಲಿ ಮತದಾರ ಹಲವು ಬಾರಿ ಕಾಣಿಸಿಕೊಳ್ಳುವುದು, ಬಹು ರಾಜ್ಯಗಳಲ್ಲಿ ಒಂದೇ ಮತದಾರ ಮತ ಚಲಾಯಿಸಿರುವುದು, ಅಸ್ತಿತ್ವದಲ್ಲಿಲ್ಲದ ವಿಳಾಸಗಳು, ಒಂದೇ ವಿಳಾಸದಲ್ಲಿ ಹಲವು ಮತದಾರರು, ಮತದಾರರ ಗುರುತಿನ ಚೀಟಿಗಳಲ್ಲಿ ಪ್ರತ್ಯೇಕಿಸಲಾಗದ ಫೋಟೋ ಸೇರಿದಂತೆ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಆಡಳಿತಾರೂಢ ಬಿಜೆಪಿಯೊಂದಿಗೆ ಶಾಮೀಲಾಗಿ ಚುನಾವಣಾ ಆಯೋಗವು ವಿಧಾನಸಭಾ ಚುನಾವಣೆಯಲ್ಲಿ ಈ ಕೆಲಸ ಮಾಡಿದೆ. ಆಯೋಗವು ಡಿಜಿಟಲ್ ಮತದಾರರ ಪಟ್ಟಿಯನ್ನು ಒದಗಿಸಲು ನಿರಾಕರಿಸಿದೆ ಎಂದು ರಾಗಾ ಬೇಸರ ಹೊರಹಾಕಿದ್ದಾರೆ.
ಬಿಜೆಪಿ ಕೂಡ ರಾಹುಲ್ ಗಾಂಧಿ ಅವರನ್ನು ತರಾಟೆಗೆ ತೆಗೆದುಕೊಂಡಿದೆ. ಕರ್ನಾಟಕದ ಮತದಾರರ ಪಟ್ಟಿಯಲ್ಲಿದೆ ಎಂದು ಅವರು ಹೇಳಿಕೊಂಡಿರುವ ಅನರ್ಹ ಮತದಾರರ ಹೆಸರುಗಳನ್ನು ಒಳಗೊಂಡಿರುವ ಘೋಷಣೆಯನ್ನು ಸಲ್ಲಿಸಲು ಅವರು ಏಕೆ ಹಿಂಜರಿಯುತ್ತಿದ್ದಾರೆಂದು ಪ್ರಶ್ನಿಸಿದೆ. ಇದನ್ನೂ ಓದಿ: ಪ್ರಜಾಪ್ರಭುತ್ವಕ್ಕೆ ವಿಷವಿಕ್ಕುವ ಘೋರ ಷಡ್ಯಂತ್ರ – ರಾಹುಲ್ ವಿರುದ್ಧ ಹೆಚ್‌ಡಿಕೆ ಕಿಡಿ