ಕಾರವಾರ: ಉತ್ತರ ಕನ್ನಡ (Uttara Kannada) ಜಿಲ್ಲೆಯ ಕೈಗಾದಲ್ಲಿ ಸ್ಥಾಪನೆಯಾಗಿರುವ ಕೈಗಾ ಅಣು ವಿದ್ಯುತ್ ಸ್ಥಾವರದಿಂದ (Kaiga Nuclear Power Plant) ಹೊರಸೂಸುವ ವಿಕಿರಣದಿಂದ ಕ್ಯಾನ್ಸರ್ ಹೆಚ್ಚಾಗಿರುವುದು ಪತ್ತೆಯಾಗಿಲ್ಲ ಎಂದು ಕೈಗಾ ಅಣುಸ್ಥಾವರದ ಬಿ.ವಿನೋದ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಕೈಗಾದಲ್ಲಿ ಮಾಧ್ಯಮಗಳ ಜೊತೆಗಿನ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೈಗಾ ಅಣು ಸ್ಥಾವರದಿಂದ ಅರಣ್ಯ ನಾಶವಾಗಿದೆ. ಕ್ಯಾನ್ಸರ್ ಪ್ರಮಾಣ ಹೆಚ್ಚಾಗಿದೆ ಎಂದು ವಿರೋಧಗಳು ವ್ಯಕ್ತವಾಗುತ್ತಿದೆ. ಆದರೆ, ಈವರೆಗೆ ನಡೆಸಿದ ಸಂಶೋಧನೆಯಲ್ಲಿ ಅಣು ವಿಕಿರಣದಿಂದಲೇ ಕ್ಯಾನ್ಸರ್ ಪತ್ತೆಯಾಗಿದೆ ಎಂಬುದು ದೃಢಪಡಿಸಿಲ್ಲ. ಕೈಗಾದ 1 ರಿಂದ 4ನೇ ಅಣು ವಿದ್ಯುತ್ ಸ್ಥಾವರಗಳ ವಿದ್ಯುತ್ ಉತ್ಪಾದನೆ ಪ್ರಕ್ರಿಯೆಯ ವೇಳೆ ಸ್ಥಾವರಗಳ ತಾಪಮಾನ ನಿಯಂತ್ರಿಸಲು ಬಳಕೆಯಾಗುವ ನೀರನ್ನು ಶುದ್ದೀಕರಿಸಿ, ವಿಕಿರಣಕಾರಕ ಅಂಶಗಳಿಲ್ಲದಂತೆ ಶುದ್ದೀಕರಿಸಿದ ಬಳಿಕವೇ ನದಿಗೆ ಬಿಡಲಾಗುತ್ತಿದೆ. ಇದೇ ನದಿಯ ನೀರನ್ನು ಕೈಗಾ ಟೌನ್‌ಶಿಪ್‌ಗೆ ಬಳಕೆ ಮಾಡುತ್ತಿದ್ದೇವೆ. ಮೂರು ದಶಕಗಳಿಂದ ಇದೇ ನೀರನ್ನು ನಾವೂ ಸೇವಿಸುತ್ತಿದ್ದೇವೆ. ನಮಗ್ಯಾರಿಗೂ ಕ್ಯಾನ್ಸರ್ ಬಂದಿಲ್ಲ. ಹೀಗೆ ಬರಲು ಸಾಧ್ಯವಿಲ್ಲ. ಹೊರಸೂಸುವ ವಿಕಿರಣವು ಕೇವಲ 1% ಮಾತ್ರ ಇದ್ದು, ಇದು ನಾವು ತೆಗೆದುಕೊಳ್ಳುವ ನೈಸರ್ಗಿಕ ಆಹಾರದಲ್ಲಿ ಇರುವ ವಿಕಿರಣದ ಅಂಶಕ್ಕಿಂತ ಕಡಿಮೆ ಇದೆ ಎಂದರು. ಇದನ್ನೂ ಓದಿ: ಪ್ರಸಾದ್ ಯೋಜನೆಯಡಿ ಕೊಲ್ಲೂರು ದೇವಸ್ಥಾನ ಸೇರಿಸಿ: ನಿರ್ಮಲಾ ಸೀತಾರಾಮನ್‌ಗೆ ಬಿ.ವೈ.ರಾಘವೇಂದ್ರ ಮನವಿ
ಉದ್ಯೋಗದಲ್ಲಿ ಸ್ಥಳೀಯರಿಗೆ ಅನ್ಯಾಯ ಆಗುತ್ತಿದೆ ಎಂಬುದು ಅನಗತ್ಯ ಆರೋಪ. ಕೈಗಾ ಅಣು ವಿದ್ಯುತ್ ಉತ್ಪಾದನಾ ಘಟಕದಲ್ಲಿ 995 ಕಾಯಂ ನೌಕರರ ಪೈಕಿ 483 ಮಂದಿ ಕರ್ನಾಟಕದವರು. 2,057 ಹೊರಗುತ್ತಿಗೆ ನೌಕರರ ಪೈಕಿ 1,062 ಇದೇ ಜಿಲ್ಲೆಯವರಿದ್ದಾರೆ. ನಿಗಮಕ್ಕೆ ಕಾಯಂ ನೌಕರರ ಆಯ್ಕೆಗೆ ಕೇಂದ್ರ ಕಚೇರಿಯಿಂದಲೇ ಪರೀಕ್ಷೆ ನಡೆಸಲಾಗುತ್ತದೆ. ಸ್ಥಳೀಯವಾಗಿ ಸೌಕರ್ಯಗಳಿಲ್ಲದ ಕಾರಣಕ್ಕೆ ಹೊರಜಿಲ್ಲೆಯಲ್ಲಿ ಪರೀಕ್ಷೆ ನಡೆಸುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು.
ಕೈಗಾದ 1 ರಿಂದ 4ನೇ ಅಣು ಸ್ಥಾವರ ಘಟಕಗಳು ಈವರೆಗೆ 1.3 ಲಕ್ಷ ಮಿಲಿಯನ್ ಯುನಿಟ್ ವಿದ್ಯುತ್ ಉತ್ಪಾದಿಸಿವೆ. ಕಲ್ಲಿದ್ದಲು, ಉಷ್ಣ ವಿದ್ಯುತ್ ಸ್ಥಾವರಗಳಿಂದ ಪರಿಸರಕ್ಕೆ ಹಾನಿ ಹೆಚ್ಚು. ಅಣು ಸ್ಥಾವರಗಳಿಂದ ಪರಿಸರಕ್ಕೆ ಅಷ್ಟೇನೂ ಹಾನಿ ಇಲ್ಲ. ಹೀಗಾಗಿ, ಗರಿಷ್ಠಮಟ್ಟದ ವಿದ್ಯುತ್ ಉತ್ಪಾದಿಸುವ ಮೂಲಕ ಪರಿಸರಕ್ಕೆ ಹಾನಿಯುಂಟಾಗುವ ಪ್ರಮಾಣವನ್ನೂ ಕೈಗಾದ ಘಟಕಗಳು ನಿಯಂತ್ರಿಸಿವೆ. ಅರಣ್ಯ ವೃದ್ಧಿಗಾಗಿ ಹಣ ವಿನಿಯೋಗ ಮಾಡಲಾಗುತ್ತಿದೆ. ಕೈಗಾ ಅಣು ವಿದ್ಯುತ್ ಉತ್ಪಾದನಾ ಘಟಕವು ಸಾಮಾಜಿಕ ಜವಾಬ್ದಾರಿ ನಿಧಿ (ಸಿಎಸ್‌ಆರ್) ಅಡಿಯಲ್ಲಿ ಕೈಗಾದಿಂದ 16 ಕಿ.ಮೀ ವ್ಯಾಪ್ತಿಯ ಹಳ್ಳಿಗಳಲ್ಲಿ ಆರೋಗ್ಯ ಶಿಕ್ಷಣ ಸ್ವಚ್ಛತೆ ಕೌಶಲಾಭಿವೃದ್ಧಿ ಚಟುವಟಿಕೆಗೆ 119 ಕೋಟಿಯಷ್ಟು ಮೊತ್ತ ವಿನಿಯೋಗಿಸಿದೆ. ಗ್ರಾಮೀಣ ಅಭಿವೃದ್ಧಿಗೆ ಅವುಗಳಲ್ಲಿ 110 ಕೋಟಿಯಷ್ಟು ವಿನಿಯೋಗಿಸಲಾಗಿದ್ದು, ಶಾಲೆ ಕಟ್ಟಡ ಸೇತುವೆಗಳನ್ನು ನಿರ್ಮಿಸಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಜನೌಷಧಿ ಕೇಂದ್ರಗಳನ್ನು ಮುಚ್ಚಿಸಿಲ್ಲ, ಸರ್ಕಾರಿ ಆಸ್ಪತ್ರೆ ಆವರಣಗಳಲ್ಲಿ ಮಾತ್ರ ನಿರ್ಬಂಧಿಸಲು ನಿರ್ಧಾರ: ದಿನೇಶ್ ಗುಂಡೂರಾವ್