– ಸಿಎಂಗೆ ಮಹಾರಾಜರ ಮೇಲೆ ರಕ್ತಗತ ದ್ವೇಷ
– ಫೇಕ್ ನ್ಯೂಸ್ ಹರಡಿದ ಮಹದೇವಪ್ಪ ಮೇಲೆ ಕೇಸ್ ಹಾಕಿ
ಮೈಸೂರು: ದಸರಾ (Dasara) ಶುರು ಮಾಡಿದ್ದು ಟಿಪ್ಪು ಸುಲ್ತಾನ್ (Tipu Sultan) ಅಂತನೂ ಹೇಳಿ ಬಿಡಿ ಎಂದು ಸಚಿವ ಮಹದೇವಪ್ಪ (H.C Mahadevappa) ವಿರುದ್ಧ ಮಾಜಿ ಸಂಸದ ಪ್ರತಾಪ್ ಸಿಂಹ (Pratap Simha) ಕಿಡಿಕಾರಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ ಕೆಆರ್‌ಎಸ್ ಡ್ಯಾಂಗೆ (KRS Dam) ಅಡಿಗಲ್ಲು ಹಾಕಿದ್ದು ಟಿಪ್ಪು ಎಂಬ ಮಹದೇವಪ್ಪ ಅವರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಜ್ಯೂನಿಯರ್ ಡಾಕ್ಟರ್ ಹೊಸ ಇತಿಹಾಸ ಬರೆಯಲು ಹೊರಟರೆ, ಸೀಯರ್ ಡಾಕ್ಟರ್ ಇತಿಹಾಸ ತಿರುಚಲು ಯತ್ನಿಸಿದ್ದಾರೆ ಎಂದು ಸಚಿವ ಡಾ.ಹೆಚ್.ಸಿ ಮಹದೇವಪ್ಪ ವಿರುದ್ಧ ಮಾಜಿ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ. ಜ್ಯೂನಿಯರ್ ಡಾಕ್ಟರ್ ಯತೀಂದ್ರ ನಾಲ್ವಡಿಗಿಂತ ನಮ್ಮಪ್ಪನೇ ದೊಡ್ಡ ವ್ಯಕ್ತಿ ಎಂದಿದ್ದರು. ಈಗ ಸೀನಿಯರ್ ಡಾಕ್ಟರ್ ಮಹದೇವಪ್ಪನ ಸರದಿ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಕೆಆರ್‌ಎಸ್ ಡ್ಯಾಂಗೆ ಮೊದಲು ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್: ಸಚಿವ ಮಹದೇವಪ್ಪ
ಟಿಪ್ಪು ಸುಲ್ತಾನ್ ಕೆಆರ್‍ಎಸ್‍ಗೆ ಅಡಿಗಲ್ಲು ಇಟ್ಟಿದ್ದರೆ ಯಾರೋ ಮುಲ್ಲಾನ ಮೌಲ್ವಿನೋ ಡಿಪಿಆರ್ ಮಾಡಿರಬೇಕು ತಾನೇ? ಅವರು ಯಾರು ಅಂತ ಹೇಳಿ? ಟಿಪ್ಪು ಅಳ್ವಿಕೆ ಇದ್ದ ವೇಳೆ ವಿಶ್ವೇಶ್ವರಯ್ಯ ಅವರೇ ಹುಟ್ಟಿರಲಿಲ್ಲ. ನಾಲ್ವಡಿ ಒಡೆಯರ್, ವಿಶ್ವೇಶ್ವರಯ್ಯ ಇರದಿದ್ದರೆ ಕೆಆರ್‍ಎಸ್ ಜಲಾಶಯವೇ ನಿರ್ಮಾಣ ಆಗುತ್ತಿರಲಿಲ್ಲ. 1799ರಲ್ಲಿ ಟಿಪ್ಪು ಸತ್ತು ಹೋದ. 1911ರಲ್ಲಿ ಕೆಆರ್‍ಎಸ್ ಕಟ್ಟಲು ಶುರು ಮಾಡಿದರು. ಎಲ್ಲಿಂದ ಎಲ್ಲಿಗೆ ಲಿಂಕ್ ಇದೆ ಮಹದೇವಪ್ಪ ಅವರೇ? ಎಂದು ಪ್ರಶ್ನಿಸಿದ್ದಾರೆ.
ನಾಲ್ವಡಿ ಬಗ್ಗೆ ಯಾಕೆ ನಿಮಗೆಲ್ಲಾ ಇಷ್ಟು ಕೋಪ? ಯತೀಂದ್ರ ಅವರು ಕಳೆದ ವಾರ ಅವಹೇಳನ ಮಾಡಿದರು. ಈಗ ನೀವು ಮುಂದುವರಿಸಿದ್ದೀರಿ. ಟಿಪ್ಪು ಸುಲ್ತಾನ್ ದಸರಾ ಶುರು ಮಾಡಿದ ಅಂತನೂ ಹೇಳಿ ಬಿಡಿ. ಫೇಕ್ ನ್ಯೂಸ್ ಹರಡಿದವರ ಮೇಲೆ ಕೇಸ್ ಹಾಕೋಕೆ ಕಾಯ್ದೆ ತರಲು ರಾಜ್ಯ ಸರ್ಕಾರ ಮುಂದಾಗಿದೆ. ಮೊದಲು ಈ ಕಾಯ್ದೆ ತರಲಿ. ಮೊದಲ ಕೇಸ್ ಮಹದೇವಪ್ಪ, ಪ್ರಿಯಾಂಕ ಖರ್ಗೆ, ಸಂತೋಷ್ ಲಾಡ್, ಯತೀಂದ್ರ ಮೇಲೆಯೆ ಹಾಕಿಸಿ. ಮಹಾರಾಜರ ಬಗ್ಗೆ ಸಿದ್ದರಾಮಯ್ಯಗೆ ರಕ್ತಗತವಾಗಿ ದ್ವೇಷ ಬಂದಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಟಿಪ್ಪು ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದ, ಅದಕ್ಕೆ ತಕರಾರು ಇಲ್ಲ. ಟಿಪ್ಪು ಹೇಗೆ ಸ್ವಾತಂತ್ರ್ಯ ಹೋರಾಟಗಾರ? ಸ್ವಾತಂತ್ರ್ಯ ಹೋರಾಟಕ್ಕೆ ಟೈಂ ಲೈನ್ ಇಲ್ವಾ? ಟಿಪ್ಪು ಅಳ್ವಿಕೆ ವೇಳೆ ಸ್ವಾತಂತ್ರ್ಯ ಹೋರಾಟ ಎನ್ನುವ ಕಲ್ಪನೆ ಇರಲಿಲ್ಲ. ತಮ್ಮ ಸಂಸ್ಥಾನ ಉಳಿವಿಗೆ ಹಲವರು ಬ್ರಿಟಿಷರ ವಿರುದ್ಧ ಹೋರಾಟ ಮಾಡಿದರು. ಒಂದು ಸಮುದಾಯದ ಮತಕ್ಕಾಗಿ ಇತಿಹಾಸ ತಿರುಚುವುದು ಶೋಭೆ ತರಲ್ಲ ಎಂದಿದ್ದಾರೆ. ಇದನ್ನೂ ಓದಿ: ಕೆಆರ್‌ಎಸ್ ಡ್ಯಾಂಗೆ ಟಿಪ್ಪು ಅಡಿಗಲ್ಲು ಹಾಕಿಲ್ಲ ಅಂತಾರೆ ತಜ್ಞರು; ನಾಮಫಲಕದಲ್ಲಿ ಏನಿದೆ?