ನವದೆಹಲಿ: ಭಾರತೀಯ ಚುನಾವಣಾ ಆಯೋಗ (Election Commission) ಶುಕ್ರವಾರ ಬಿಡುಗಡೆ ಮಾಡಿದ ಕರಡು ಮತದಾರರ ಪಟ್ಟಿಯಲ್ಲಿ ನನ್ನ ಹೆಸರಿಲ್ಲ ಎಂದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ (Tejaswi Yadav) ಹೇಳಿದ್ದಾರೆ.
ಪಾಟ್ನಾದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ತೇಜಸ್ವಿ, ಬಿಹಾರದಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆಯ ಸಮಯದಲ್ಲಿ ಎಣಿಕೆ ನಮೂನೆಯನ್ನು ಭರ್ತಿ ಮಾಡಿದ್ದೇನೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾನು ಹೇಗೆ ಸ್ಪರ್ಧಿಸಲಿ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಚುನಾವಣಾ ಆಯೋಗ ಸಂಪೂರ್ಣ ಸತ್ತು ಹೋಗಿದ್ದು, ತನ್ನ ಸ್ವಾಯತ್ತತೆ ಕಳೆದುಕೊಂಡಿದೆ: ರಾಹುಲ್ ಗಾಂಧಿ
ಎಪಿಕ್ ಸಂಖ್ಯೆಯ ಮೂಲಕ ನನ್ನ ಹೆಸರನ್ನು ಹುಡುಕಿದಾಗ ಯಾವುದೇ ಡೇಟಾ ಕಂಡುಬಂದಿಲ್ಲ ಎಂದು ಆರೋಪಿಸಿದ್ದಾರೆ. ಬೂತ್ ಮಟ್ಟದ ಅಧಿಕಾರಿ (ಬಿಎಲ್‌ಒ) ವೈಯಕ್ತಿಕವಾಗಿ ತಮ್ಮ ಭರ್ತಿ ಮಾಡಿದ ಫಾರ್ಮ್ ಅನ್ನು ಸಂಗ್ರಹಿಸಿದ್ದಾರೆ. ಆದರೆ, ಹೆಸರು ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ ಎಂದು ಆರೋಪಿಸಿದ್ದಾರೆ.
ಪ್ರತಿ ವಿಧಾನಸಭಾ ಕ್ಷೇತ್ರದಿಂದ ಸುಮಾರು 20 ರಿಂದ 30 ಸಾವಿರ ಹೆಸರುಗಳನ್ನು ತೆಗೆದುಹಾಕಲಾಗಿದೆ. ಒಟ್ಟು 65 ಲಕ್ಷ ಅಂದರೆ ಸುಮಾರು 8.5% ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಚುನಾವಣಾ ಆಯೋಗ ಜಾಹೀರಾತು ನೀಡಿದಾಗಲೆಲ್ಲಾ, ಎಷ್ಟೋ ಜನರು ಬೇರೆಡೆ ಸ್ಥಳಾಂತರಗೊಂಡಿದ್ದಾರೆ, ಎಷ್ಟೋ ಜನರು ಸಾವನ್ನಪ್ಪಿದ್ದಾರೆ ಮತ್ತು ಎಷ್ಟೋ ಜನರು ನಕಲಿ ಹೆಸರುಗಳನ್ನು ಹೊಂದಿದ್ದಾರೆ ಎಂದು ಉಲ್ಲೇಖಿಸಲಾಗುತ್ತಿತ್ತು ಎಂದು ತೇಜಸ್ವಿ ಯಾದವ್ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಬಿಹಾರ ಕರಡು ಮತದಾರರ ಪಟ್ಟಿ ಔಟ್
ಆದರೆ, ಚುನಾವಣಾ ಆಯೋಗವು ನಮಗೆ ಒದಗಿಸಿದ ಪಟ್ಟಿಯಲ್ಲಿ, ಯಾವುದೇ ಮತದಾರರ ವಿಳಾಸ, ಬೂತ್ ಸಂಖ್ಯೆ ಮತ್ತು ಎಪಿಕ್ ಸಂಖ್ಯೆಯನ್ನು ನೀಡಿಲ್ಲ. ಆದ್ದರಿಂದ ಮತದಾರರ ಪಟ್ಟಿಯಿಂದ ಯಾರ ಹೆಸರುಗಳನ್ನು ತೆಗೆದುಹಾಕಲಾಗಿದೆ ಎಂಬುದನ್ನು ನಾವು ಕಂಡುಹಿಡಿಯಲು ಸಾಧ್ಯವಿಲ್ಲ ಎಂದು ದೂರಿದ್ದಾರೆ.