ತೆರಿಗೆ ಹಂಚಿಕೆಯಲ್ಲಿ ಅನ್ಯಾಯ ಆರೋಪ: ಕೇಂದ್ರದ ವಿರುದ್ಧ ದೆಹಲಿಯಲ್ಲಿ ಕೆಪಿಸಿಸಿ ಕಾನೂನು ಘಟಕದಿಂದ ಪ್ರತಿಭಟನೆ

Public TV
3 Min Read
Delhi KPCC Protest

ನವದೆಹಲಿ: ತೆರಿಗೆ ಹಂಚಿಕೆಯಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯ ಮಾಡಲಾಗುತ್ತಿದೆ ಎಂದು ಆರೋಪಿಸಿ ದೆಹಲಿಯ (Delhi) ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲಾಯಿತು. ಕೆಪಿಸಿಸಿ (KPPC) ಕಾನೂನು ವಿಭಾಗದ ಅಧ್ಯಕ್ಷ ಸಿ.ಎಂ.ಧನಂಜಯ ನೇತೃತ್ವದಲ್ಲಿ 200ಕ್ಕೂ ಅಧಿಕ ವಕೀಲರು ಪ್ರತಿಭಟನೆ ನಡೆಸಿದ್ದಾರೆ.

ಪ್ರತಿಭಟನೆಗೂ ಮುನ್ನ ಔಪಚಾರಿಕವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರ ಕಚೇರಿಗೆ ಮನವಿ ಪತ್ರ ಸಲ್ಲಿಕೆ ಮಾಡಲಾಯಿತು. ಪ್ರತಿಭಟನೆಯಲ್ಲಿ ಭಾಗಿಯಾದ ದೆಹಲಿ ವಿಶೇಷ ಪ್ರತಿನಿಧಿ ಟಿಬಿ ಜಯಚಂದ್ರ, ಬಿ.ಟಿ ಲಲಿತಾ ನಾಯಕ್ ಸೇರಿ ಹಲವು ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿ, ಕರ್ನಾಟಕಕ್ಕೆ ಆಗಿರುವ ಅನ್ಯಾಯ ಕೂಡಲೇ ಸರಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: Malegaon Case | ಮೋಹನ್ ಭಾಗವತ್ ಬಂಧನಕ್ಕೆ ಆದೇಶಿಸಿದ್ದ ತನಿಖಾಧಿಕಾರಿ – ನಿವೃತ್ತ ಇನ್ಸ್‌ಪೆಕ್ಟರ್‌ ಸ್ಫೋಟಕ ಹೇಳಿಕೆ

Delhi KPCC Protest 2

ಪ್ರತಿಭಟನೆ ವೇಳೆ ಸಿ.ಎಂ.ಧನಂಜಯ ಮಾತನಾಡಿ, ಕರ್ನಾಟಕಕ್ಕೆ ಕೇಂದ್ರ ಸರ್ಕಾರದಿಂದ ತೀವ್ರ ಅನ್ಯಾಯವಾಗುತ್ತಿದೆ. ತೆರಿಗೆ ಪಾಲು ಹಂಚಿಕೆ ಮತ್ತು ಅನುದಾನ ನೀಡುವಲ್ಲಿ ನರೇಂದ್ರ ಮೋದಿ (Narendra Modi) ನೇತೃತ್ವದ ಎನ್‌ಡಿಎ ಸರ್ಕಾರ, ಕನ್ನಡಿಗರನ್ನು ಮಲತಾಯಿ ಮಕ್ಕಳಂತೆ ನೋಡುತ್ತಿದೆ ಎಂದು ದೂರಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಕೇಸ್‌| ದಾರಿ ಬಿಡಿ ಮುಂದಕ್ಕೆ ಹೋಗಬೇಕು: ಪ್ರಣಬ್‌ ಮೊಹಂತಿ

ನಾವು ಕೇಂದ್ರಕ್ಕೆ ಕಟ್ಟುವ ತೆರಿಗೆ ವಾರ್ಷಿಕ 4.5 ಲಕ್ಷ ಕೋಟಿ ರೂ. ಇದರಲ್ಲಿ ನಮಗೆ ವಾಪಸ್ ಸಿಗುವುದು ಕೇವಲ 65 ಸಾವಿರ ಕೋಟಿ ರೂ. ನಾವು ಕಟ್ಟುವ 1 ರೂ. ತೆರಿಗೆಯಲ್ಲಿ ನಮಗೆ ಕೇವಲ 15 ಪೈಸೆ ವಾಪಸ್ ಬರುತ್ತಿದೆ. ವಿಶೇಷ ಅನುದಾನಗಳಿಗೂ ಕತ್ತರಿ ಹಾಕಲಾಗುತ್ತಿದೆ. ಕೇಂದ್ರ ಸರ್ಕಾರದ ಅನ್ಯಾಯದಿಂದ 2017-18ರಿಂದ ಈವರೆಗೂ ರಾಜ್ಯಕ್ಕೆ ಸುಮಾರು 2 ಲಕ್ಷ ಕೋಟಿ ರೂ. ನಷ್ಟವಾಗಿದೆ. ಕಳೆದ 5 ವರ್ಷಗಳಲ್ಲಿ 80 ಸಾವಿರ ಕೋಟಿ ರೂ. ಅನುದಾನ ಕಡಿಮೆಯಾಗಿದೆ ಎಂದು ಕಿಡಿಕಾರಿದ್ದಾರೆ.

ದೇಶದ ಒಟ್ಟಾರೆ ಜನಸಂಖ್ಯೆಯಲ್ಲಿ ಕರ್ನಾಟಕ 5% ಪಾಲು ಹೊಂದಿದೆ. ಆದರೆ ನಾವು ದೇಶದ ಜಿಡಿಪಿಗೆ ನೀಡುತ್ತಿರುವ ಕೊಡುಗೆ 8.7% ದೇಶದಲ್ಲೇ ಅತೀ ಹೆಚ್ಚು ಜಿಎಸ್‌ಟಿ ಕರ್ನಾಟಕದಿಂದ ಸಂಗ್ರಹವಾಗುತ್ತಿದೆ. ಆದರೆ ಕೇಂದ್ರ ಸರ್ಕಾರ ಮಾತ್ರ ಕರ್ನಾಟಕಕ್ಕೆ ನಿರಂತರ ಅನ್ಯಾಯ ಮಾಡುತ್ತಾ ನಮ್ಮನ್ನು ಶೋಷಣೆ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕೆಲಸದಾಕೆಯ ಮೇಲೆ ರೇಪ್‌ – ಪ್ರಜ್ವಲ್‌ ರೇವಣ್ಣ ಅತ್ಯಾಚಾರಿ ಎಂದು ಕೋರ್ಟ್‌ ತೀರ್ಪು

Delhi KPCC Protest 1

ಕಳೆದ ವರ್ಷ ನಮ್ಮ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಇಡೀ ಸರ್ಕಾರವೇ ನವದೆಹಲಿಯಲ್ಲಿ ಪ್ರತಿಭಟನೆ ನಡೆಸಿತ್ತು. ಸಿಎಂ ಈ ಬಗ್ಗೆ ನಿರಂತರವಾಗಿ ಧ್ವನಿ ಎತ್ತುತ್ತಲೇ ಬಂದಿದ್ದಾರೆ. ಅನೇಕ ಪತ್ರಗಳನ್ನು ಪ್ರಧಾನಿ ಮತ್ತು ಹಣಕಾಸು ಸಚಿವರಿಗೆ ಬರೆದು ನ್ಯಾಯ ಕೊಡುವಂತೆ ಮನವಿ ಮಾಡಿದ್ದಾರೆ. ಆದರೆ ಕೇಂದ್ರ ಸರ್ಕಾರ ತಾರತಮ್ಯ ಮುಂದುವರೆಸುವ ಮೂಲಕ ಕರ್ನಾಟಕದ ಅಭಿವೃದ್ಧಿ ತಡೆಯುವ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದ್ದಾರೆ.

ಕಳೆದ ಜೂನ್‌ನಲ್ಲಿ ನಡೆದ ಹಣಕಾಸು ಆಯೋಗದ ಸಭೆಯಲ್ಲಿ ಭಾಗಿಯಾಗಿದ್ದ ಸಿಎಂ ಸಿದ್ದರಾಮಯ್ಯ ಅವರು ರಾಜ್ಯಕ್ಕೆ ಆದ ಅನ್ಯಾಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. 14ನೇ ಹಣಕಾಸು ಆಯೋಗದಲ್ಲಿ ನಮ್ಮ ತೆರಿಗೆ ಪಾಲು 4.713% ಕ್ಕೆ ಮತ್ತು 15ನೇ ಹಣಕಾಸು ಆಯೋಗದಲ್ಲಿ ತೆರಿಗೆ ಪಾಲು 3.647%ಕ್ಕೆ ಇಳಿಕೆ ಮಾಡಿದ್ದರಿಂದ ತೆರಿಗೆ ಹಂಚಿಕೆಯಲ್ಲಿ ನಮ್ಮ ಪಾಲನ್ನು ಒಟ್ಟಾರೆ 23% ರಷ್ಟು ಇಳಿಕೆ ಮಾಡಿದ್ದಾರೆ. 5 ವರ್ಷಗಳಲ್ಲಿ ಒಟ್ಟು 68,275 ಕೋಟಿ ರೂ.ಗಳು ಕಡಿಮೆಯಾಗಿದೆ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಉಪರಾಷ್ಟ್ರಪತಿ ಸ್ಥಾನಕ್ಕೆ ಸೆ.9ರಂದು ಚುನಾವಣೆ – ಚುನಾವಣಾ ಆಯೋಗ ಘೋಷಣೆ

ಈಗ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯ ಮುಂಬರುವ 16ನೇ ಹಣಕಾಸು ಆಯೋಗದಲ್ಲಿ ಆಗಬಾರದು ಎಂದು ಒತ್ತಾಯಿಸುತ್ತಿದ್ದೇವೆ. ಬಾಕಿ ಇರುವ ಅನುದಾನ ಬಿಡುಗಡೆ ಮತ್ತು ರಾಜ್ಯದ ನೀರಾವರಿ ಯೋಜನೆಗಳನ್ನು ರಾಷ್ಟ್ರೀಯ ಯೋಜನೆಗಳನ್ನಾಗಿ ಘೋಷಿಸುವಂತೆ ಅಲ್ಲದೇ ಬೆಂಗಳೂರು ಅಭಿವೃದ್ಧಿಗೆ ವಿಶೇಷ ಅನುದಾನ ನೀಡುವಂತೆ ಆಗ್ರಹಿಸಿ ನಾವು ಪ್ರತಿಭಟನೆ ನಡೆಸಿದ್ದೇವೆ ಎಂದಿದ್ದಾರೆ.

ಪ್ರತಿಭಟನೆಯಲ್ಲಿ ಎಐಸಿಸಿ ಯುವ ಘಟಕದ ಮಾಜಿ ಅಧ್ಯಕ್ಷ ಶ್ರೀನಿವಾಸ್, ಘಟಕದ ಉಪಾಧ್ಯಕ್ಷ ಮುನಿಯಪ್ಪ, ಶ್ರೀನಿವಾಸ್ ಮೂರ್ತಿ, ಪ್ರವೀಣ್ ಗೌಡ, ಗಿರೀಶ್ ಪಟೇಲ್, ಕಿರಣ್ ಮತ್ತಿತರರು ಭಾಗಿಯಾಗಿದ್ದರು.

Share This Article