ನವದೆಹಲಿ: ಜಗದೀಪ್ ಧನಕರ್ (Jagdeep Dhankhar) ಅವರ ರಾಜೀನಾಮೆಯಿಂದ ತೆರವಾಗಿರುವ ಉಪರಾಷ್ಟ್ರಪತಿ ಸ್ಥಾನಕ್ಕೆ ಸೆಪ್ಟೆಂಬರ್ 9ರಂದು ಚುನಾವಣೆ (Vice Presidential Election )ನಡೆಯಲಿದೆ.
ಕೇಂದ್ರ ಚುನಾವಣಾ ಆಯೋಗ (Election Commission)ಉಪರಾಷ್ಟ್ರಪತಿ ಚುನಾವಣೆ ಸಂಬಂಧ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದೆ. ಇದೇ ಆಗಸ್ಟ್ 7ರಂದು ಅಧಿಸೂಚನೆ ಪ್ರಕಟವಾಗಲಿದೆ. ಆಗಸ್ಟ್ 21ರಂದು ಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಆಗಸ್ಟ್ 22ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ.
ಆಗಸ್ಟ್ 25ರ ಒಳಗೆ ನಾಮಪತ್ರ ಹಿಂಪಡೆಯಲು ಅವಕಾಶ ಇರಲಿದೆ. ಸೆಪ್ಟೆಂಬರ್ 9ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆ ವರೆಗೆ ಮತದಾನ ನಡೆಯಲಿದ್ದು, ಅಂದೇ ಫಲಿತಾಂಶ ಪ್ರಕಟವಾಗಲಿದೆ ಎಂದು ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಎಫ್-35 ಖರೀದಿಸಲ್ಲ ಎಂದ ಭಾರತ – ತೆರಿಗೆ ಸಮರ ಆರಂಭಿಸಿದ ಟ್ರಂಪ್‌ಗೆ ಶಾಕ್
ಜಗದೀಪ್ ಧನಕರ್ ರಾಜೀನಾಮೆ ನೀಡಿದ್ದು ಯಾಕೆ?
74 ವರ್ಷದ ಧನಕರ್ ಅವರು ಅನಾರೋಗ್ಯ ಕಾರಣ ನೀಡಿ ಜುಲೈ 21ರಂದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ರಾಜೀನಾಮೆ ಪತ್ರವನ್ನ ರಾಷ್ಟ್ರಪತಿ ದೌಪದಿ ಮುರ್ಮು ಅವರಿಗೆ ಕಳುಹಿಸಿದ್ದು, ‘ತಕ್ಷಣದಿಂದಲೇ ಜಾರಿಗೆ ಬರುವಂತೆ ರಾಜೀನಾಮೆ ನೀಡುತ್ತಿದ್ದೇನೆ’ ಎಂದು ತಿಳಿಸಿದ್ದರು. ಈ ವೇಳೆ ಅವಕಾಶಕ್ಕಾಗಿ ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಹೇಳಿದ್ದರು.
ಧನಕರ್ ಅವರು 2022ರ ಆಗಸ್ಟ್‌ನಲ್ಲಿ ಅಧಿಕಾರ ವಹಿಸಿಕೊಂಡಿದ್ದರು. ಅವರ ಅಧಿಕಾರಾವಧಿ 2027ರ ಆಗಸ್ಟ್ 10ರ ವರೆಗೂ ಇತ್ತು. ರಾಜ್ಯಸಭೆಯ ಸಭಾಪತಿಯೂ ಆಗಿರುವ ಅವರು ಸೋಮವಾರ ಆರಂಭವಾದ ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನ ಕಲಾಪದಲ್ಲಿ ಪಾಲ್ಗೊಂಡಿದ್ದರು. ಇದನ್ನೂ ಓದಿ: ಬಿಹಾರ ಸರ್ಕಾರದಿಂದ ಬಂಪರ್ ಗಿಫ್ಟ್ – ಬಿಸಿಯೂಟ ತಯಾರಕರು, ದೈಹಿಕ, ಆರೋಗ್ಯ ಶಿಕ್ಷಕರ ಗೌರವಧನ ಡಬಲ್
ಜನತಾ ದಳದ ಅಭ್ಯರ್ಥಿಯಾಗಿ 1991ರಲ್ಲಿ ರಾಜಕೀಯ ಜೀವನ ಆರಂಭಸಿದ ಧನಕರ್ ಆ ಬಳಿಕ ಕಾಂಗ್ರೆಸ್ ಸೇರಿದ್ದರು. ನಂತರ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದರು. ಸುಪ್ರೀಂ ಕೋರ್ಟ್‌ನಲ್ಲಿ ಹಿರಿಯ ವಕೀಲರಾಗಿ ಕೆಲಸ ನಿರ್ವಹಿಸುತ್ತಿದ್ದಾಗಲೇ ಬಿಜೆಪಿ ನಾಯಕತ್ವದ ಗಮನ ಸೆಳೆದ ಅವರು 2019ರಲ್ಲಿ ಪಶ್ಚಿಮ ಬಂಗಾಳ ರಾಜ್ಯಪಾಲರಾಗಿ ನೇಮಕಗೊಂಡರು. 2022ರಲ್ಲಿ ಉಪರಾಷ್ಟ್ರಪತಿಯಾಗಿ ಆಯ್ಕೆಯಾದರು. ಇನ್ನು ಸರಿಸುಮಾರು 2 ವರ್ಷಗಳ ಕಾಲ ಉಪರಾಷ್ಟ್ರಪತಿ ಅವಧಿ ಬಾಕಿ ಇದ್ದರೂ ಧನಕರ್ ಆರೋಗ್ಯದ ಕಾರಣದಿಂದ ರಾಜೀನಾಮೆ ನೀಡಿದ್ದಾರೆ.
ಉಪರಾಷ್ಟ್ರಪತಿ ಆಯ್ಕೆ ಹೇಗೆ ನಡೆಯುತ್ತದೆ?
ಉಪರಾಷ್ಟ್ರಪತಿ ಚುನಾವಣೆಯಲ್ಲಿ, ರಾಜ್ಯಸಭೆಯ 233 ಚುನಾಯಿತ ಸಂಸದರು, ರಾಜ್ಯಸಭೆಯ 12 ನಾಮನಿರ್ದೇಶಿತ ಸಂಸದರು ಮತ್ತು ಲೋಕಸಭೆಯ 543 ಸಂಸದರು ತಮ್ಮ ಮತಗಳನ್ನು ಚಲಾಯಿಸಬಹುದು. ಈ ರೀತಿಯಾಗಿ, ಒಟ್ಟು 788 ಜನರು ಮತ ಚಲಾಯಿಸಬಹುದು. ಇದನ್ನೂ ಓದಿ: ಆ.1 ರಿಂದ ಹೊಸ UPI ನಿಯಮಗಳು ಜಾರಿಗೆ – ಏನದು ರೂಲ್ಸ್?
ಪಕ್ಷಗಳ ವಿಪ್ ಅಗತ್ಯವಿಲ್ಲದೆ ಗೌಪ್ಯ ಮತಪತ್ರದ ಮೂಲಕ ಮತದಾನ ನಡೆಯುತ್ತದೆ. ರಾಷ್ಟ್ರಪತಿ ಚುನಾವಣೆಯಂತೆ ರಾಜ್ಯಗಳ ವಿಧಾನಸಭೆ ಶಾಸಕ ರಿಗೆ ಮತದಾನದ ಅವಕಾಶವಿಲ್ಲ. ಏಕಮತದಾನ ವರ್ಗಾವಣೆ ವಿಧಾನದಲ್ಲಿ ಪ್ರತಿಯೊಬ್ಬ ಮತದಾರ ಅಭ್ಯರ್ಥಿಗಳನ್ನು ಪ್ರಾಶಸ್ಯದ ಕ್ರಮದಲ್ಲಿ ಶ್ರೇಣೀಕರಿಸುತ್ತಾರೆ. ಅವರ ಪ್ರಾಶಸ್ಯವನ್ನು ಸಂಖ್ಯೆಗಳ ರೂಪದಲ್ಲಿ ಗುರುತಿಸುತ್ತಾರೆ. (ಮೊದಲ ಪ್ರಾಶಸ್ಯಕ್ಕೆ 1, 2ನೇ ಪ್ರಾಶಸ್ಯಕ್ಕೆ 2, ಇತ್ಯಾದಿ.) ಮತಪತ್ರವು ಮಾನ್ಯವಾಗಿರಲು ಮೊದಲ ಪ್ರಾಶಸ್ಯವನ್ನು ಗುರುತಿಸುವುದು ಕಡ್ಡಾಯವಾಗಿದೆ. ನಂತರದ ಆದ್ಯತೆಗಳು ಐಚ್ಛಿಕವಾಗಿರುತ್ತವೆ. ಎಣಿಕೆ ವೇಳೆ ಎಲ್ಲ ಅಭ್ಯರ್ಥಿಗಳಿಗೆ ಸಿಗುವ ಮೊದಲ ಪ್ರಾಶಸ್ಯದ ಮತಗಳನ್ನು ಆರಂಭಿಕವಾಗಿ ಎಣಿಕೆ ಮಾಡಲಾಗುತ್ತದೆ. ಮೊದಲ ಪ್ರಾಶಸ್ಯದ ಮತಗಳ ಎಣಿಕೆಯಲ್ಲಿ ಬಹುಮತ ದೊರೆಯದಿದ್ದಲ್ಲಿ 2ನೇ ಪ್ರಾಶಸ್ಯದ ಮತದಾನವನ್ನು ಪರಿಗಣಿಸಲಾಗುತ್ತದೆ. ಹೀಗೆಯೇ ಬಹುಮತ ಬರುವವರೆಗೂ ಮುಂದುವರಿಯುತ್ತದೆ.