ಆಸ್ಟ್ರೇಲಿಯಾದ ನೈಸರ್ಗಿಕ ವಿಪತ್ತಾದ ‘ಆಲ್ಗಲ್ ಬ್ಲೂಮ್’ – ಈ ಬಿಕ್ಕಟ್ಟಿನ ಹಿಂದಿನ ಕಾರಣವೇನು?

Public TV
3 Min Read
algal Bloom 3

ಭೂಮಿಯ ಮೇಲಿರುವ ಪ್ರತಿಯೊಂದು ತನ್ನದೇ ಆದ ವಿಭಿನ್ನ ಲಕ್ಷಣಗಳೊಂದಿಗೆ ಹುಟ್ಟಿಕೊಂಡಿರುತ್ತದೆ. ವಿಭಿನ್ನವಾದ ಗುಣಗಳೊಂದಿಗೆ ತನ್ನಲ್ಲಿ ಹೊಸತನವನ್ನು ಕಂಡುಕೊಳ್ಳುತ್ತದೆ. ಅದೇ ರೀತಿ ಇತ್ತೀಚಿನ ದಿನಗಳಲ್ಲಿ ಹವಾಮಾನ, ಮಳೆ, ಬಿಸಿಲು, ಅದರ ಜೊತೆ ಜೊತೆಗೆ ತಂತ್ರಜ್ಞಾನಗಳ ಬೆಳವಣಿಗೆಯಿಂದಾಗಿ ನಿಸರ್ಗದ ಮೇಲಾಗುತ್ತಿರುವ ಪರಿಣಾಮ ಇವೆಲ್ಲವೂ ಹೊಂದಿಲ್ಲೊಂದು ರೀತಿಯಲ್ಲಿ ಪ್ರತಿಯೊಂದು ಜೀವಿಯ ಮೇಲೆಯೂ ಪ್ರಭಾವ ಬೀರುತ್ತದೆ.

ಹೌದು, ದಕ್ಷಿಣ ಆಸ್ಟ್ರೇಲಿಯಾದ ಕರಾವಳಿ ತೀರಗಳಲ್ಲಿ ಆಲ್ಗಲ್ ಬ್ಲೂಮ್ ನೈಸರ್ಗಿಕ ವಿಪತ್ತಾಗಿ ಪರಿವರ್ತನೆಗೊಂಡಿದೆ. ಇದರಿಂದಾಗಿ ಪರಿಸರದ ಮೇಲೆ ಗಂಭೀರವಾದ ಪರಿಣಾಮ ಬೀರುತ್ತಿದ್ದು, ಜಲಚರ ಜೀವಿಗಳಿಗೆ ಅಪಾಯ ಉಂಟು ಮಾಡುತ್ತಿದೆ. ಅದಲ್ಲದೆ ಮಾನವನ ಉದ್ಯಮದ ಮೇಲೆಯೂ ಪರಿಣಾಮ ಬೀರುತ್ತದೆ. ಏನಿದು ಆಲ್ಗಲ್ ಬ್ಲೂಮ್? ಇದರ ಹಿಂದಿನ ಕಾರಣವೇನು? ಇದೆಲ್ಲದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

Algal Bloom 1

ಏನಿದು ಆಲ್ಗಲ್ ಬ್ಲೂಮ್?
ಸಾಮಾನ್ಯವಾಗಿ ಹೇಳುವುದಾದರೆ ಆಲ್ಗಲ್ ಬ್ಲೂಮ್ ಎಂದರೆ ಪಾಚಿ ಎಂದರ್ಥ. ನಿಂತ ನೀರು ಅಥವಾ ಸದಾ ಹರಿಯುತ್ತಿರುವ ನೀರಿನ ತಳಭಾಗದಲ್ಲಿ ಬೆಳೆಯುವ ಒಂದು ರೀತಿಯ ಸಸ್ಯ ಜಾತಿಯನ್ನು ಪಾಚಿ ಎಂದು ಕರೆಯಲಾಗುತ್ತದೆ. ಸಮುದ್ರ, ನದಿ ಹಾಗೂ ಕೆರೆಗಳಲ್ಲಿ ಇದು ಬೆಳೆಯುತ್ತದೆ. ಇದನ್ನು ಮೈಕ್ರೋ ಆಲ್ಗಿಗಳು ಎಂತಲೂ ಕರೆಯಲಾಗುತ್ತದೆ. ಇದು ನೀರಿನಲ್ಲಿ ತ್ವರಿತವಾಗಿ ವೃದ್ಧಿಯಾಗುವ ಒಂದು ಪ್ರಕ್ರಿಯೆಯಾಗಿದೆ. ಈ ಪ್ರಕ್ರಿಯೆ ಹೆಚ್ಚಾದಾಗ ಇದು ನೀರಿನ ಮೇಲೆಯೂ ತೇಲುತ್ತದೆ. ಇದರಿಂದ ನೀರಿಗೆ ಹಸಿರು, ಕೆಂಪು ಅಥವಾ ನೀಲಿ ಬಣ್ಣ ಬರುತ್ತದೆ. ಇದರಿಂದ ಪರಿಸರಕ್ಕೆ ಹಾಗೂ ಜಲಚರ ಜೀವಿಗಳಿಗೆ ಸಮಸ್ಯೆ ಉಂಟಾಗುತ್ತದೆ.

ಇದರ ಲಕ್ಷಣಗಳೇನು:
ನೀರಿನಲ್ಲಿ ಹಸಿರು ಪಾಚಿ ಬೆಳೆದಿದೆ ಎಂದು ಗೊತ್ತಾಗಬೇಕಾದರೆ ನೀರು ಅಥವಾ ನೀರಿನಲ್ಲಿ ಹಸಿರು ಬಣ್ಣ ಕಾಣಿಸುತ್ತದೆ. ಜೊತೆಗೆ ನೀರಿನಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆಯಾಗಿ, ಜಲಚರ ಜೀವಿಗಳ ನಾಶಕ್ಕೆ ಕಾರಣವಾಗುತ್ತದೆ. ಅದಲ್ಲದೆ ನೀರಿನಲ್ಲಿ ವಿಷದ ಪ್ರಮಾಣ ಬಿಡುಗಡೆ ಮಾಡುತ್ತದೆ. ಬಳಿಕ ನೀರಿನಿಂದ ದುರ್ವಾಸನೆ ಉಂಟಾಗುತ್ತದೆ.

Algal Bloom

ಇದಕ್ಕೆ ಕಾರಣಗಳೇನು:
ನೀರಿಗೆ ನೈಟ್ರೋಜನ್, ಪಾಸ್ಪರಸ್ ಹಾಗೂ ಕೃಷಿ ರಾಸಾಯನಿಕಗಳು ಸೇರಿದಾಗ ಈ ಪಾಚಿ ಉಂಟಾಗುತ್ತದೆ. ಜೊತೆಗೆ ತಾಪಮಾನದ ಏರಿಕೆಯಿಂದಾಗಿ ಪಾಚಿ ಬೆಳವಣಿಗೆ ವೃದ್ಧಿಯಾಗುತ್ತದೆ. ನೀರಿನ ಚಲನೆ ಇಲ್ಲದಿದ್ದರೆ ಪಾಚಿ ವೇಗವಾಗಿ ಬೆಳೆಯುತ್ತದೆ. ಇನ್ನು ನೀರಿಗೆ ಬೆಳಕು ಹೆಚ್ಚು ಹರಿದು ಬಂದರೆ ಪಾಚಿ ಫೋಟೋಸಿಂಥೆಸಿಸ್ (ದ್ಯುತಿ ಸಂಶ್ಲೇಷಣೆ) ಮೂಲಕ ವೇಗವಾಗಿ ಹರಡುತ್ತದೆ.

ಇದೀಗ ದಕ್ಷಿಣ ಆಸ್ಟ್ರೇಲಿಯಾದ ಕರಾವಳಿಯಲ್ಲಿ ಪಾಚಿ ಬೆಳೆದುಕೊಂಡಿದ್ದು ವಿಶಾಲವಾದ ಸಮುದ್ರ ಪ್ರದೇಶವನ್ನು ವಿಷಕಾರಿಯನ್ನಾಗಿ ಮಾಡಿದೆ. ಅಲ್ಲದೆ ಸಾವಿರಾರು ಜಲಚರ ಜೀವಿಗಳನ್ನು ನಾಶಗೊಳಿಸಿದ್ದು, ಸ್ಥಳೀಯ ಕೈಗಾರಿಕಾ ಪ್ರದೇಶಗಳಿಗೂ ಹಾನಿಯಾಗಿದೆ. ಇದೀಗ ಆಸ್ಟ್ರೇಲಿಯಾದ ಕೂರೊಂಗ್ ನಿಂದ ಯಾರ್ಕ್ ದ್ವಿಪದವರೆಗೂ ವಿಸ್ತರಿಸಿದೆ. 400 ಕ್ಕೂ ಹೆಚ್ಚು ಜಲಚರ ಜೀವಿಗಳನ್ನು ನಾಶಪಡಿಸಿದ್ದು, ಮೀನುಗಳು, ಚಿಪ್ಪು ಮೀನು ಹಾಗೂ ಇತರೆ ಜೀವಿಗಳ ಮಾರಣಹೋಮವಾಗಿದೆ.

Algal Bloom 1

ದಕ್ಷಿಣ ಆಸ್ಟ್ರೇಲಿಯಾ ಕರಾವಳಿಯಲ್ಲಿ ಪಾಚಿ ಬೆಳವಣಿಗೆಗೆ ಕಾರಣವೇನು?
ತಜ್ಞರ ಮಾಹಿತಿ ಪ್ರಕಾರ, ಹವಾಮಾನ ಬದಲಾವಣೆಯಿಂದಾಗಿ ಈ ಬಿಕ್ಕಟ್ಟು ಉಂಟಾಗಿದೆ. ಜೊತೆಗೆ ಸಮುದ್ರದಲ್ಲಿ ಉಷ್ಣತೆಯ ಏರಿಕೆ, ಕೃಷಿ ಮತ್ತು ನಗರದಿಂದ ಹರಿದು ಬರುವ ರಾಸಾಯನಿಕ ಅಂಶಗಳು, ದೀರ್ಘಕಾಲದ ಬರಪರಿಸ್ಥಿತಿ ಹಾಗೂ ನಿಂತಲ್ಲೇ ನೀರು ನಿಲ್ಲುವುದರಿಂದ ಪಾಚಿ ಬೆಳವಣಿಗೆಗೆ ಕಾರಣವಾಗಿದೆ ಎಂದಿದ್ದಾರೆ. ಈಗಾಗಲೇ ಪಾಚಿಯು 4,500 ಚದರ ಕಿಲೋಮಿಟರ್ ಗಳಿಗೂ ಹೆಚ್ಚು ಹಬ್ಬಿಕೊಂಡು, ನೀರನ್ನು ವಿಷಪೂರಿತಗೊಳಿಸಿದ. ಇದರಿಂದಾಗಿ ದಕ್ಷಿಣ ಆಸ್ಟ್ರೇಲಿಯಾದಲ್ಲಿ ಮೀನುಗಾರಿಕಾ ಉದ್ಯಮ ನಶಿಸಿಹೋಗಿದೆ. ಅಲ್ಲದೆ ಕಡಲ ತೀರಗಳಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯೂ ಕೂಡ ಕಡಿಮೆಯಾಗಿದೆ.

ಮೇ ತಿಂಗಳಲ್ಲಿ ಜನಪ್ರಿಯ ಪ್ರವಾಸೋದ್ಯಮ ತಾಣವಾದ ಕಾಂಗರು ದ್ವೀಪದಲ್ಲಿ ಪಾಚಿ ಬೆಳೆಯಲು ಆರಂಭಿಸಿದೆ ಎಂದು ಸರ್ಕಾರ ತಿಳಿಸಿತ್ತು. ಅದಾದ ಬಳಿಕ ಮೇ ತಿಂಗಳ ಅಂತ್ಯದಲ್ಲಿ ಉಂಟಾದ ಹವಾಮಾನ ಬದಲಾವಣೆಯಿಂದಾಗಿ ಕಾಂಗರು ದ್ವೀಪದಿಂದ ಕೂರಾಂಗ್ ದ್ವೀಪಕ್ಕೆ ಪಸರಿಸಿತು.

algal Bloom 4

ಸದ್ಯ ಈ ಸಂಬಂಧ ದಕ್ಷಿಣ ಆಸ್ಟ್ರೇಲಿಯಾದ ಪ್ರಧಾನಿ ಪೀಟರ್ ಮಲಿನೌಸ್ಕಾಸ್ ಅವರು ಪಾಚಿಯನ್ನು ನೈಸರ್ಗಿಕ ವಿಕೋಪವೆಂದು ಘೋಷಿಸಿದ್ದಾರೆ. ಆಸ್ಟ್ರೇಲಿಯಾ ಸರ್ಕಾರವು ಇದರ ಪರಿಹಾರಕ್ಕಾಗಿ 79.5 ಕೋಟಿ ರೂ. ಬಿಡುಗಡೆ ಮಾಡಿದೆ. ಈ ಮೂಲಕ ಶುಚಿಗೊಳಿಸುವಿಕೆ, ಸಂಶೋಧನೆ ನಡೆಸಲಿದ್ದಾರೆ.

ಈ ಪಾಚಿಯಿಂದಾಗಿ ದಕ್ಷಿಣ ಆಸ್ಟ್ರೇಲಿಯಾದ ನೈಸರ್ಗಿಕ ಸೌಂದರ್ಯ ಹಾಳಾಗಿದ್ದು, ಜನರ ಮನಸ್ಸಿಗೆ ನೋವನ್ನುಂಟು ಮಾಡಿದೆ. ಅಲ್ಲದೆ ಕೆಲವು ಕರಾವಳಿ ತೀರಗಳಲ್ಲಿ ಮೀನುಗಳು, ಡಾಲ್ಫಿನ್ಗಳ ಮಾರಣಹೋಮವೇ ನಡೆದಿದೆ. ತಜ್ಞರ ಮಾಹಿತಿ ಪ್ರಕಾರ, ಇದೊಂದು ಆರಿಸಲಾಗದ ಬೆಂಕಿಯಾಗಿದ್ದು, ಇದಕ್ಕೆ ಯಾವುದೇ ರೀತಿಯ ಪರಿಹಾರವಿಲ್ಲ. ಯಾವುದೇ ಮಾರ್ಗದಿಂದಲೂ ಪಾಚಿಯ ಬೆಳವಣಿಗೆಯನ್ನು ತಡೆಯಲು ಮನುಷ್ಯರಿಗೆ ಸಾಧ್ಯವಿಲ್ಲ. ಇದು ಹವಾಮಾನವನ್ನು ಅವಲಂಬಿಸಿರುತ್ತದೆ ಎಂದಿದ್ದಾರೆ.

Share This Article