ನಿಸ್ಸಾನ್ ಮ್ಯಾಗ್ನೈಟ್ (Nisasn Magnite) ಕಾರು ಗ್ಲೋಬಲ್ NCAP (Global NCAP) ಕ್ರ್ಯಾಶ್ ಟೆಸ್ಟ್‌ನಲ್ಲಿ 5-ಸ್ಟಾರ್ ರೇಟಿಂಗ್ (5 Star Rating) ಪಡೆದುಕೊಂಡಿದೆ. ನಿಸ್ಸಾನ್ ಕಂಪನಿಯು ಮೂರು ಬಾರಿ ಮ್ಯಾಗ್ನೈಟ್ ಕಾರನ್ನು ಕ್ರ್ಯಾಶ್ ಟೆಸ್ಟಿಂಗ್‌ಗೆ ಕಳುಹಿಸಿತ್ತು. ಫೇಸ್‌ಲಿಫ್ಟ್‌ಗೂ ಮುಂಚಿನ ಕಾರು (ಅಕ್ಟೋಬರ್ 2024ಕ್ಕೂ ಮುಂಚೆ ತಯಾರಾದ ಕಾರ್) ಕೇವಲ 2-ಸ್ಟಾರ್ ರೇಟಿಂಗ್ ಪಡೆದಿತ್ತು. ಫೇಸ್‌ಲಿಫ್ಟ್ ನಂತರದ ಕಾರು 4-ಸ್ಟಾರ್ ರೇಟಿಂಗ್ ಪಡೆಯಲು ಯಶಸ್ವಿಯಾಗಿತ್ತು. ಆದರೆ ಇಷ್ಟಕೇ ಸುಮ್ಮನಾಗದ ಕಂಪನಿಯು ಕೆಲವೊಂದು ಬದಲಾವಣೆ ಮಾಡಿ ಮತ್ತೆ ಕ್ರ್ಯಾಶ್ ಟೆಸ್ಟ್‌ಗೆ ಕಳುಹಿಸಿತ್ತು. ಈ ಬಾರಿ ನಡೆಸಿದ ಕ್ರ್ಯಾಶ್ ಟೆಸ್ಟ್‌ನಲ್ಲಿ 5-ಸ್ಟಾರ್ ರೇಟಿಂಗ್ ಪಡೆದು ಮ್ಯಾಗ್ನೈಟ್ ಸುರಕ್ಷಿತ ಕಾರು ಎನಿಸಿಕೊಂಡಿದೆ.
ಗ್ಲೋಬಲ್ ಎನ್‌ಸಿಎಪಿ ನಡೆಸಿದ ಸುರಕ್ಷತಾ ಪರೀಕ್ಷೆಯ ವಯಸ್ಕರ ರಕ್ಷಣೆ ವಿಭಾಗದಲ್ಲಿ (Adult Occupant Protection) 34ಕ್ಕೆ 32.31 ಅಂಕಗಳನ್ನು ಗಳಿಸುವ ಮೂಲಕ ಮ್ಯಾಗ್ನೈಟ್ 5-ಸ್ಟಾರ್ ರೇಟಿಂಗ್ ಪಡೆದಿದೆ. ಅದೇ ರೀತಿ ಮಕ್ಕಳ ರಕ್ಷಣೆ ವಿಭಾಗದಲ್ಲಿ (Child Occupant Protection) 42ಕ್ಕೆ 33.64 ಅಂಕಗಳನ್ನು ಪಡೆದು 3-ಸ್ಟಾರ್ ರೇಟಿಂಗನ್ನು ತನ್ನದಾಗಿಸಿಕೊಂಡಿದೆ.
ನಿಸ್ಸಾನ್ ಮ್ಯಾಗ್ನೈಟ್ ಎರಡು ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ. 1.0-ಲೀಟರ್ B4D ಪೆಟ್ರೋಲ್ ಎಂಜಿನ್ 72 hp ಪವರ್ ಮತ್ತು 96 Nm ಟಾರ್ಕ್ ಅನ್ನು ಉತ್ಪಾದನೆ ಮಾಡುತ್ತದೆ. 1.0-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಹೆಚ್ಚು ಶಕ್ತಿಶಾಲಿಯಾಗಿದ್ದು 99 hp ಪವರ್ ಮತ್ತು 160 Nm ಟಾರ್ಕ್ ಉತ್ಪಾದಿಸುತ್ತದೆ. B4D ಎಂಜಿನ್ 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ AMT ಗೇರ್ ಬಾಕ್ಸ್‌ನೊಂದಿಗೆ ಲಭ್ಯವಿದೆ, ಟರ್ಬೋಚಾರ್ಜ್ಡ್ ಆವೃತ್ತಿಯು 5-ಸ್ಪೀಡ್ ಮ್ಯಾನುವಲ್ ಅಥವಾ CVT ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ಬರುತ್ತದೆ.
ಪ್ರಯಾಣಿಕರ ರಕ್ಷಣೆಗಾಗಿ ಗರಿಷ್ಠ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿರುವುದರಿಂದ ಗ್ಲೋಬಲ್ NCAP ಈ 5-ಸ್ಟಾರ್ ಸೇಫ್ಟಿ ರೇಟಿಂಗ್ ನೀಡಿದೆ. ಮ್ಯಾಗ್ನೈಟ್ ಕಾರಿನಲ್ಲಿ 6-ಏರ್‌ಬ್ಯಾಗ್‌ಗಳು, 3-ಪಾಯಿಂಟ್ ಸೀಟ್‌ಬೆಲ್ಟ್‌ಗಳು, ಎಲ್ಲಾ ಸೀಟ್‌ಗಳಿಗೆ ಸೀಟ್ ಬೆಲ್ಟ್ ರಿಮೈಂಡರ್, ISOFIX ಆಂಕರೇಜ್‌ಗಳು , 360 ಡಿಗ್ರೀ ಕ್ಯಾಮೆರಾ, ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಸ್ಟ್ಯಾಂಡರ್ಡ್ ಆಗಿ ದೊರೆಯುತ್ತದೆ.
ನಿಸ್ಸಾನ್ ಮ್ಯಾಗ್ನೈಟ್ ಕಾರಿನ ಬೆಲೆ 6,14,000 ದಿಂದ 11,76,000 ರೂಪಾಯಿವರೆಗೆ (ಎಕ್ಸ್ ಶೋರೂಮ್) ಇದೆ.