ಇದೆಂತ ವಿಚಿತ್ರ! ಎಲ್ಲ್ರೂ ಪ್ರೀತ್ಸೋ ಹುಡುಗಿಯ ನಗು ಇಷ್ಟ.. ಅವಳ ಮುಂಗುರುಳು ಸರಿಸುವಾಗ ಆ ಕುಡಿ ನೋಟ ಇಷ್ಟ ಅಂತ ಬರೆದ್ರೆ ಇವನೇನು ಅವಳ ಕೋಪ ಇಷ್ಟ ಅಂತಾನೇ ಅಂತ ಆಶ್ಚರ್ಯನಾ?! ನಿಜ ನನಗೆ ಅವಳ ಕೋಪ ತುಂಬಾ ಇಷ್ಟ..! ಅದಕ್ಕೆ ಅವಳಿಗೆ ಆಗಾಗ ಬೇಕು ಅಂತಾನೇ ರೇಗಿಸಿ ಬೇಜಾರು ಮಾಡಿ ಸಿಟ್ಟು ಬರೋ ಹಾಗೇ ಮಾಡ್ತೀನಿ! ಆದ್ರೆ ನನಗೆ ಈ ಥರ ಕೋಪ ಬರಿಸೋ ಚಾನ್ಸ್ ತುಂಬಾ ಕಡಿಮೆನೇ ಸಿಕ್ಕಿದ್ದು.. ಯಾಕಂದ್ರೆ ಅವಳಿಗೆ ಕೋಪ ಮೂಗಿನ ಮೇಲೆ ಇರ್ತಿತ್ತು..!
ಹೌದು ಕಣ್ರೀ..! ಎಲ್ಲಾ ಹುಡುಗಿಯರು ತಮ್ಮ ಮೂಗಿಗೆ ಮೂಗು ಬೊಟ್ಟಿಂದ ಅಲಂಕಾರ ಮಾಡ್ಕೊಂಡಿದ್ರೆ.. ಇವಳು ಕೋಪಾನೇ ಮೂಗಿನ ತುದಿಯಲ್ಲಿಟ್ಟುಕೊಂಡು ಅಲಂಕಾರ ಮಾಡ್ಕೊಂಡಿರ್ತಿದ್ಲು! ಅಷ್ಟು ಕೋಪಿಷ್ಟೇ.. ಕೋಪ ಮಾಡ್ಕೊಂಡಾಗೆಲ್ಲ ಅವಳು ಅಷ್ಟೇ ಮುದ್ದಾಗಿ ಸಹ ಕಾಣ್ತಿದ್ಲು… ಆಗೆಲ್ಲ ಅವಳು ರೇಡಿಯೋ ಆಗಿರೋಳು.. ನಾನು ಕೇಳುಗನಾಗಿ ಇರ್ತಿದ್ದೆ..! ಹೇಳಿದ್ದನ್ನೇ ನೂರು ಸಲ ಹೇಳಿ, ಕೊನೆಗೆ ಯಾಕೆ ಸಿಟ್ಟು ಮಾಡ್ಕೊಂಡಿದ್ದೆ ಅಂತ ಕೇಳಿದ್ರೆ ನನಗೆ ಗೊತ್ತಿಲ್ಲ.. ಮರೆತು ಹೋಯ್ತು ಅಂತ ನಗಾಡೋ ಅಷ್ಟು ಹೊತ್ತಿಗೆ ಈ ಕೋಪ ಕರಗಿದೆ ಅನ್ನೋದು ತಿಳಿತಾ ಇತ್ತು. ಇದನ್ನೂ ಓದಿ: ನೀ ʻಅಮೃತʼಧಾರೆ – ಬಾಡಿದ ಹೃದಯಕುಂಡದಲ್ಲಿ ಒಲವರಳಿಸಿದ ಮಳೆ!
ಆದ್ರೆ ಮತ್ತೆ ಒಂದು ಮಾತು ಹೇಳೋಳು.. ಏನಂಥ ಗೊತ್ತಾ? ನನಗೆ ಯಾಕೆ ಕೋಪ ಬಂತು ಹೇಳು? ನಿನಗೆ ಗೊತ್ತಿಲ್ವಾ? ಆಹಾ.. ನನಗೆ ಸಿಟ್ಟು ಬಂದಿದ್ದು ಯಾಕೆ ಅಂತಯ ನೆನಪಿರಲ್ಲ ಅಲ್ವಾ? ಅಷ್ಟೊಂದು ಮರೆವಾ ನಿನಗೆ? ನನ್ನನ್ನೂ ಮರೆತು ಬಿಡ್ತೀಯ ಬಿಟ್ರೆ ಅಲ್ವಾ? ಹೀಗೆ ಪುಂಡ ಬೆಕ್ಕಿನ ಥರ ಪುಟ್ಟ ಪುಟ್ಟ ಜಗಳ ಅವಳದ್ದು..!
ಹಾಗಂತ ಅದೆಲ್ಲ ತುಂಬಾ ಸೀರಿಯಸ್ ಆದ ವಿಚಾರಗಳೇನೂ ಅಲ್ಲ.. ಆ ಕೋಪಕ್ಕೆ ಕಾರಣಗಳು ಬೇಕಿರಲಿಲ್ಲ,,! ಯಾಕೆ ಸಿಟ್ಟು ಅಂತ ಕೇಳಿದ್ರೆ… ನನಗೆ ನಿನ್ನ ಹತ್ರ ಮಾತ್ರ ಕೋಪ ಮಾಡ್ಬೇಕು, ಸಣ್ಣ ಸಣ್ಣ ವಿಚಾರಕ್ಕೂ ಗಲಾಟೆ ಮಾಡ್ಬೇಕು ಅನ್ಸುತ್ತೆ ಕಣೋ..! ನನ್ನ ಸಿಟ್ಟು.. ನನ್ನ ಇಷ್ಟ..! ಸಿಟ್ಟು ಮಾಡ್ಕಳ್ಳೋಕು ನಾನು ನಿನ್ನ ಕೇಳ್ಬೇಕಾ..? ನಿನ್ ಹತ್ರ ಮಾತ್ರ ನಾನು ಚಿಕ್ಕವಳ ಥರ ಆಡ್ಬೇಕು.. ಹಠ ಮಾಡ್ಬೇಕು.. ಸಿಟ್ಟು ಮಾಡ್ಬೇಕು ಅನ್ಸುತ್ತೆ ಗೋಪಾಲ… ಯಾಕೆ ಅಂತ ನೀನೇ ಹೇಳು? ಅವಳ ಪ್ರಶ್ನೆಗೆ ನನಗೂ ಉತ್ತರ ಇರಲಿಲ್ಲ.. ಅದಕ್ಕೆ.. ಅಷ್ಟೇ ತಾನೇ, ನಿನಗೆ ಏನು ಅನ್ಸತ್ತೋ ಹಾಗೆ ಇರು ಪುಟ್ಟ ಅಂತ ಹೇಳ್ಬಿಡ್ತಿದ್ದೆ..! ಇದನ್ನೂ ಓದಿ: ಎದೆಯ ರೇಡಿಯೋದಲ್ಲಿ ಅವಳ ಹಾಡು ಇನ್ನೂ ಮುಗಿದಿಲ್ಲ!
ಒಮ್ಮೊಮ್ಮೆ ಅನ್ಸೋದು.. ಹೌದಲ್ವಾ ಅವಳು ಪ್ರೀತಿ ಆದ್ರೂ, ಕೋಪ ಆದ್ರೂ ಯಾರನ್ನ ಮಾಡ್ತಾಳೆ.. ನನ್ನ ಬಿಟ್ರೆ ಯಾರಿದಾರೆ ಅವಳಿಗೆ ಅಂತ ತುಂಬಾ ಸಲುಗೆ ಕೊಟ್ಟೆ.. ಅವಳು ಅಷ್ಟೇ ಮಗು ಅಮ್ಮನ ಹತ್ರ ಹಠ ಮಾಡಿದ ಹಾಗೆ ಹಠ ಮಾಡ್ಕೊಂಡು.. ನನ್ನನ್ನೇ ಪ್ರಪಂಚ ಅಂದ್ಕೊಂಡಿದ್ಲು… ಇದೆಲ್ಲ ಸುಮಾರು ಆರೇಳು ವರ್ಷಗಳ ಹಿಂದಿನ ಕತೆ.. ಮೊನ್ನೆ ಮೊನ್ನೆ ಮತ್ತೆ ಸಿಕ್ಕಿದ್ಲು. ದೂರಾಗಿ ಇಷ್ಟು ವರ್ಷ ಆದ್ಮೇಲೂ, ಅದೇ ಕೋಪ.. ಅದೇ ಕಣ್ಣು ಹಾಗೇ..! ಮತ್ತೆ ನಿನ್ನ ಹತ್ರ ಸಿಟ್ಟು ಮಾಡ್ಬೇಕು ಅನ್ನಿಸ್ತಿದೆ ಮಾಡ್ಲಾ? ಹ್ಞೂಂ ಅಂದೆ.. ಅವಳಿಗೆ ಅಳುನೇ ಬಂದು ಹೋಯ್ತು..!
ಅವಳಿಗೆ ಅವತ್ತು ಯಾಕೆ ಅಳು ಬಂತೋ ಗೊತ್ತಿಲ್ಲ.. ಆದ್ರೆ.. ಇವತ್ತಿಗೂ ಅದೇ ಪ್ರೀತಿ ಅವಳ ಮನಸ್ಸಲ್ಲಿ ಇದೆ.. ಈ ‘ಸುರಗಿ’ ಮರದಿಂದ ಉದುರಿದ ಮೇಲೂ ವರ್ಷಾನೂಗಟ್ಟಲೇ ಅದರ ಘಮ ಉಳಿಯುವ ಹಾಗೆ..! ಹೌದು.. ಅದ್ಯಾವ ಕಾರಣಕ್ಕೆ ನಾವು ದೂರ ಆದ್ವಿ ಅಂತ ಗೊತ್ತಿಲ್ಲ. ಇಬ್ಬರ ಹೃದಯದಲ್ಲೂ ಇವತ್ತಿಗೂ ಅದೇ ಪ್ರೇಮದ ಘಮ ಇದೆ. ನನಗೆ ಅವಳ ಕೋಪದಲ್ಲಿ ಕಂಡಿದ್ದು ಪ್ರೇಮದ ಘಮ.. ಆ ಕೋಪ ಮತ್ತೆ ನನ್ನ ಮೇಲೆ ಪ್ರಯೋಗ ಮಾಡ್ಬೇಕು ಅವಳು. ಪುಟ್ಟ ಮಗು ತನ್ನ ಸಿಟ್ಟನ್ನ ತನ್ನ ಅಮ್ಮನ ಮೇಲೆ ತೋರಿಸೋ ಹಾಗೆ, ಅದನ್ನ ನಾನು ತಾಯಿಯಾಗಿ ಸಂಭ್ರಮಿಸಬೇಕು..!
ಪ್ರೀತಿ ಅಂದ್ರೆ ಹೀಗೆ ಅಲ್ವಾ..? ನನಗೆ ಏನು ಬೇಕೋ ಅದನ್ನ ಹುಡುಕಿ ಸಂಭ್ರಮಿಸೋದಲ್ಲ. ನಮಗೆ ಸಿಕ್ಕ ಪ್ರೀತಿಯಲ್ಲಿ ಏನಿದಿಯೋ ಅದನ್ನೇ ಹೃದಯಕ್ಕೆ ಇಳಿಸಿಕೊಳ್ಳೋದು.. ಅದ್ಕೆ ಇರಬೇಕು ನನಗೆ ಅವಳ ಮುದ್ದು ಕೋಪ ಇಷ್ಟ ಆಗಿದ್ದು. ಇದನ್ನೂ ಓದಿ: ನಾನು ಹೋಗು ಅಂದ ತಕ್ಷಣ ನನ್ನ ಬಿಟ್ಟು ಹೋಗ್ಬಿಟ್ಟೆ ಅಲ್ವಾ.. ನಿನಗೆ ಅದೇ ಬೇಕಿತ್ತೇನೋ..?
ಅವಳ ಕೋಪಕ್ಕೊಂದು ಮಾಧುರ್ಯ ಇತ್ತು. ಆ ಕೋಪದಲ್ಲಿ ಅವಳ ನಾಚಿಕೆ ಇತ್ತು. ಮಲ್ಲಿಗೆ ಕನಕಾಂಬರದ ಮಿಶ್ರಣದ ಬಣ್ಣ.. ಸುಗಂಧ ರಾಜನ ಘಮ ಎಲ್ಲವೂ ಇತ್ತು. ಅದೆಲ್ಲ ಮೀರಿದ ವಾತ್ಸಲ್ಯ ಇತ್ತು. ಒಮ್ಮೊಮ್ಮೆ ಅವಳು ಹೇಳ್ತಿದ್ಲು, ನಾನು ಕೋಪ ಮಾಡ್ಕೋತಿನಿ.. ನೀನು ನನ್ನ ಮುದ್ದು ಮುದ್ದು ಮಾತಾಡಿ ಸಮಾಧಾನ ಮಾಡ್ಬೇಕು ಅಂತ. ನಾನು ಸಮಾಧಾನ ಮಾಡ್ಬೇಕು ಅಂತಾನೇ ಕೋಪ ಮಾಡ್ಕೊಳ್ಳೋಳು..! ಅದೊಂಥರ ಕೋಪದ ಚೆಂದದ ಆಟ ಅವಳಿಗೆ..! ಆ ಕೋಪದ ಕೆಂಪು ಮೂಗಿಗೆ ಇಂದು ಹುಟ್ಟುಹಬ್ಬದ ಸಂಭ್ರಮ.. ಇದನ್ನ ಓದಿ, ಆ ಸಂಭ್ರಮದಲ್ಲಿ ಚೂರಾದ್ರೂ ಅಳ್ಬೇಕು ಅಂತ ಇಷ್ಟೆಲ್ಲ ನೆನಪನ್ನ ಬರೆದೆ..!!
– ಗೋಪಾಲಕೃಷ್ಣ