ಆಧಾರ್, ಮತದಾರರ ಗುರುತಿನ ಚೀಟಿ, ಪಡಿತರ ಚೀಟಿಗಳು ವಿಶ್ವಾಸಾರ್ಹ ದಾಖಲೆಗಳಲ್ಲ: ಸುಪ್ರೀಂಗೆ ಚುನಾವಣಾ ಆಯೋಗ ಅಫಿಡವಿಟ್‌

Public TV
2 Min Read
Supreme Court

ನವದೆಹಲಿ: ಆಧಾರ್, ಮತದಾರರ ಗುರುತಿನ ಚೀಟಿ ಮತ್ತು ಪಡಿತರ ಚೀಟಿಗಳು (Aadhaar, Voter ID & Ration Cards) ವಿಶ್ವಾಸಾರ್ಹ ದಾಖಲೆಗಳಲ್ಲ ಎಂದು ಕೇಂದ್ರ ಚುನಾವಣಾ ಆಯೋಗ (Election Commission of India) ಸುಪ್ರೀಂ ಕೋರ್ಟ್‌ಗೆ 789 ಪುಟಗಳ ಅಫಿಡವಿಟ್‌ ಸಲ್ಲಿಸಿದೆ.

ಬಿಹಾರ (Bihar) ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ (SIR) ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆಯ ವೇಳೆ ಸುಪ್ರೀಂ ಕೋರ್ಟ್‌ (Supreme Court) ಆಧಾರ್, ಮತದಾರರ ಗುರುತಿನ ಚೀಟಿ ಮತ್ತು ಪಡಿತರ ಚೀಟಿಗಳನ್ನು ವಿಶ್ವಾಸಾರ್ಹ ದಾಖಲೆಗಳನ್ನಾಗಿ ಯಾಕೆ ಪರಿಗಣಿಸಬಾರದು ಎಂದು ಚುನಾವಣಾ ಆಯೋಗವನ್ನು ಕೇಳಿತ್ತು.

ಈ ಪ್ರಶ್ನೆಗೆ ಹಲವು ಕೋರ್ಟ್‌ ತೀರ್ಪು ಉಲ್ಲೇಖಿಸಿ ಮತದಾರರ ನೋಂದಣಿಗೆ ಅರ್ಹತೆಯನ್ನು ಸಾಬೀತುಪಡಿಸಲು ಇವುಗಳು ಸ್ವತಂತ್ರ ದಾಖಲೆಗಳಾಗಿ ಯಾಕೆ ಸ್ವೀಕರಿಸಲಾಗುವುದಿಲ್ಲ ಎಂಬದುನ್ನು ಚುನಾವಣಾ ಆಯೋಗ ವಿವರಿಸಿದೆ.  ಇದನ್ನೂ ಓದಿ: ಕನ್ವರ್ ಯಾತ್ರೆಯ ಮಾರ್ಗದಲ್ಲಿ ಹೋಟೆಲ್‌ಗಳಿಗೆ ಕ್ಯೂಆರ್ ಕೋಡ್ ಕಡ್ಡಾಯ ಆದೇಶ ಎತ್ತಿ ಹಿಡಿದ ಸುಪ್ರೀಂ

ಆಧಾರ್ ಕೇವಲ ಗುರುತಿನ ಪುರಾವೆಯಾಗಿದೆ ಹೊರತು ಪೌರತ್ವವನ್ನು ಸ್ಥಾಪಿಸುವುದಿಲ್ಲ. ಆದರೆ ಸಂವಿಧಾನದ 326 ನೇ ವಿಧಿಯ ಅಡಿಯಲ್ಲಿ ಮತದಾರರ ಅರ್ಹತೆಗೆ ಅಗತ್ಯವಾದ ಅವಶ್ಯಕತೆಗಳಲ್ಲಿ ಆಧಾರ್‌ ಒಂದು ಎಂದು ಹೇಳಿದೆ. ಜನವರಿ 2024 ರ ನಂತರ ನೀಡಲಾದ ಹೊಸ ಆಧಾರ್ ಕಾರ್ಡ್‌ಗಳು ಪೌರತ್ವದ ಪುರಾವೆಯಲ್ಲ ಎಂದು ತಿಳಿಸಿದೆ.

AADHAAR CARD AND VOTER ID

ರಾಣಿ ಮಿಸ್ತ್ರಿ vs ಪಶ್ಚಿಮ ಬಂಗಾಳ ರಾಜ್ಯ (2016) ಮತ್ತು ಖಾದಿಜಾ ಸ್ವಪ್ನಾ vs ಕರ್ನಾಟಕ ರಾಜ್ಯ (2017) ಸೇರಿದಂತೆ ಹಲವಾರು ಹೈಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸಿ, ಆಧಾರ್ ಒಂದರಿಂದಲೇ ಪೌರತ್ವವನ್ನು ದೃಢೀಕರಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯಗಳು ನಿರಂತರವಾಗಿ ತೀರ್ಪು ನೀಡಿವೆ ಎಂದು ಚುನಾವಣಾ ಆಯೋಗ ಹೇಳಿದೆ.

ವಿಶೇಷ ತೀವ್ರ ಪರಿಷ್ಕರಣೆ (SIR) 2025 ಪ್ರಕ್ರಿಯೆಯಲ್ಲಿ ಮತದಾರರ ಗುರುತಿನ ಚೀಟಿಗಳನ್ನು (EPIC) ಮಾನ್ಯ ಪುರಾವೆಯಾಗಿ ಬಳಸುವುದನ್ನು ಚುನಾವಣಾ ಆಯೋಗ ತಿರಸ್ಕರಿಸಿದೆ. ಅವುಗಳು ಹೆಚ್ಚಾಗಿ ಹಳೆಯ ಅಥವಾ ಹಳೆಯ ದಾಖಲೆಗಳನ್ನು ಅವಲಂಬಿಸಿರುತ್ತವೆ ಎಂದು ವಾದಿಸಿದೆ. ಎಪಿಕ್‌ ಕಾರ್ಡ್‌ ಬಳಸಿದರೆ SIR ನ ಉದ್ದೇಶ ಮತ್ತು ಕಾರ್ಯವಿಧಾನದ ಸಮಗ್ರತೆಯನ್ನು ದುರ್ಬಲಗೊಳಿಸುತ್ತದೆ ಎಂದು ಹೇಳಿದೆ.

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ 2013 ಅನ್ನು ಉಲ್ಲೇಖಿಸಿ ಪಡಿತರ ಚೀಟಿಯನ್ನು ಅರ್ಹತೆಗಾಗಿ ಪರಿಗಣಿಸಬಹುದು. ಆದರೆ ನಕಲಿ ಪಡಿತರ ಚೀಟಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಚುನಾವಣಾ ಆಯೋಗ ಇತ್ತೀಚೆಗೆ 5 ಕೋಟಿಗೂ ಹೆಚ್ಚು ಅಂತಹ ಕಾರ್ಡ್‌ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಮತ್ತು ದೃಢೀಕರಣವನ್ನು ಸುಧಾರಿಸಲು ಪಡಿತರ ವಿತರಣಾ ವ್ಯವಸ್ಥೆಗಳನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ತಿಳಿಸಿದೆ.

ಬಿಹಾರ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ ಸಂಬಂಧಿಸಿದಂತೆ ಮುಂದಿನ ವಿಚಾರಣೆ ಜುಲೈ 28 ರಂದು ನಡೆಯಲಿದೆ.

Share This Article