ಲಂಡನ್: ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್‌ನ ಫೈನಲ್ (WTC Finals) ಪಂದ್ಯಗಳನ್ನು 2031ರ ವರೆಗೆ ಇಂಗ್ಲೆಂಡ್‌ನಲ್ಲೇ ನಡೆಸಲು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ನಿರ್ಧರಿಸಿದೆ. ಈ ಕುರಿತು ಐಸಿಸಿ ಭಾನುವಾರ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ.
ಹೌದು. ಸಿಂಗಾಪುರದಲ್ಲಿ ನಡೆದ ಮಹತ್ವದ ಸಭೆಯ ನಂತರ ಐಸಿಸಿ ಪತ್ರಿಕಾ ಪ್ರಕಟಣೆಯ ಮೂಲಕ ಮಾಹಿತಿ ಹಂಚಿಕೊಂಡಿದೆ. ಈ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಮುಂದಿನ ಮೂರು ಆವೃತ್ತಿಗಳ ಫೈನಲ್‌ಗಳನ್ನು ಇಂಗ್ಲೆಂಡ್‌ನಲ್ಲೇ (England) ನಡೆಸಲು ತೀರ್ಮಾನಿಸಿದ್ದು, ಅನುಮೋದನೆಯನ್ನೂ ನೀಡಲಾಗಿದೆ. ಕಳೆದ ಮೂರು ಆವೃತ್ತಿಯ WTC ಫೈನಲ್ ಪಂದ್ಯಗಳು ಇಂಗ್ಲೆಂಡ್‌ನಲ್ಲೇ ನಡೆದಿದೆ ಅನ್ನೋದು ವಿಶೇಷ.
ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (England Cricket Board)ಯೇ ಮೊದಲ ಆವೃತ್ತಿಯಿಂದಲೂ WTC ಫೈನಲ್ ಪಂದ್ಯಗಳಿಗೆ ಆತಿಥ್ಯ ವಹಿಸುತ್ತಿದೆ. ಈಗ ಮುಂದೆ 2027, 2029, 2031ರ ಆವೃತ್ತಿಗಳೂ ಇಂಗ್ಲೆಂಡ್‌ನಲ್ಲೇ ನಡೆಸಲು ಅನುಮತಿ ಪಡೆದಿದೆ. ಇಂಗ್ಲೆಂಡ್‌ನಲ್ಲಿ ವ್ಯವಸ್ಥೆಗಳ ಅನುಕೂಲ ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಐಸಿಸಿ ಹೇಳಿದೆ. ಆದ್ರೆ ಇನ್ನೂ ಸ್ಥಳಗಳನ್ನ ನಿಗದಿಪಡಿಸಿಲ್ಲ.
2021ರಲ್ಲಿ ಚೊಚ್ಚಲ ಆವೃತ್ತಿಯ ಫೈನಲ್ ಪಂದ್ಯವನ್ನು ಇಂಗ್ಲೆಂಡ್‌ನ ಸೌತಾಂಪ್ಟನ್, 2023ರಲ್ಲಿ ದಿ ಓವಲ್ ಹಾಗೂ ಪ್ರಸಕ್ತ ವರ್ಷ ಲಾರ್ಡ್ಸ್ ನಲ್ಲಿ WTC ಫೈನಲ್ ಪಂದ್ಯ ನಡೆದಿತ್ತು. ಮೊದಲೆರಡು ಆವೃತ್ತಿಗಳಲ್ಲಿ ಕ್ರಮವಾಗಿ ನ್ಯೂಜಿಲೆಂಡ್, ಆಸ್ಟ್ರೇಲಿಯಾ ಚಾಂಪಿಯನ್ ಆಗಿದ್ದರೆ, ಭಾರತ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತ್ತು. 3ನೇ ಆವೃತ್ತಿಯಲ್ಲಿ ಭಾರತ ನಾಕೌಟ್‌ನಿಂದ ಹೊರಗುಳಿದ ಕಾರಣ ದಕ್ಷಿಣ ಆಫ್ರಿಕಾ ಹಾಗೂ ಆಸೀಸ್ ನಡುವೆ ಫೈನಲ್ ಪಂದ್ಯ ನಡೆದಿತ್ತು. ಲಾರ್ಡ್ ಅಂಗಳದಲ್ಲಿ ಚಾಂಪಿಯನ್ ಆದ ದಕ್ಷಿಣ ಆಫ್ರಿಕಾ ಚಾಂಪಿಯನ್ ಆಗಿ ಚೋಕರ್ಸ್ ಹಣೆಪಟ್ಟಿಯನ್ನೂ ಕಳಚಿತು.