ಬೆಂಗಳೂರು: ಬಸ್, ಮೆಟ್ರೋ ನಂತರ ಇದೀಗ ಆಟೋ ದರ (Auto Price) ಹೆಚ್ಚಳವಾಗಿದ್ದು, ಆಗಸ್ಟ್ 1ರಿಂದ ಜನರ ಜೇಬಿಗೆ ಆಟೋ ದರ ಏರಿಕೆಯ ಬಿಸಿ ತಟ್ಟಲಿದೆ. ಆದರೆ ಈ ದರ ಏರಿಕೆಗೆ ಆಟೋ ಚಾಲಕರಿಂದಲೇ ವಿರೋಧ ವ್ಯಕ್ತವಾಗಿದೆ. ಮಿನಿಮಮ್ ದರ (Minimum Fare) 40 ರೂ.ಗೆ ಏರಿಸಬೇಕೆಂದು ಆಟೋ ಚಾಲಕರು ಆಗ್ರಹಿಸಿದ್ದಾರೆ.
ಬೆಂಗಳೂರು (Bengaluru) ಆಟೋ ದರವನ್ನು ಸರ್ಕಾರ ಹೆಚ್ಚಿಸಿ ಆದೇಶ ಹೊರಡಿಸಿದೆ. ಎರಡು ಕಿಲೋ ಮೀಟರ್‌ಗೆ ಮಿನಿಮಮ್ ಪ್ರಯಾಣ ದರ 30 ರೂ.ನಿಂದ 36 ರೂ.ಗೆ ಏರಿಕೆ ಮಾಡಿದೆ. ಈ ದರ ಏರಿಕೆ ಆಗಸ್ಟ್ ಒಂದರಿಂದಲೇ ಅನ್ವಯವಾಗುವಂತೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷ & ಡಿಸಿ ಜಗದೀಶ್ ಆದೇಶ ಹೊರಡಿಸಿದ್ದಾರೆ. ಆದ್ರೇ ಈ ಆಟೋ ದರ ಏರಿಕೆಗೆ ಆಟೋ ಚಾಲಕರೇ ಬೇಸರ ವ್ಯಕ್ತಪಡಿಸಿದ್ದಾರೆ. ಮಿನಿಮಮ್ ಆಟೋ ದರ ಹೆಚ್ಚಿಸಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ಹಣ ಸಂಗ್ರಹಿಸಿ 3 ಕಿ.ಮೀ ರಾಜ್ಯ ಹೆದ್ದಾರಿಯ ಗುಂಡಿ ಮುಚ್ಚಿದ ಬೀದರ್ ಗ್ರಾಮಸ್ಥರು!
ಯಾವುದೇ ಸಂಘಟನೆಗಳ ಸಭೆ ಕರೆಯದೇ ಏಕಪಕ್ಷೀಯವಾಗಿ ಆಟೋ ದರ ಏರಿಕೆ ಆದೇಶ ಹೊರಡಿಸಲಾಗಿದೆ ಅಂತ ಆಟೋ ಚಾಲಕರ ಅಸೋಸಿಯೇಷನ್ ಆರೋಪಿಸಿದೆ. ಸರ್ಕಾರ 2021ರಲ್ಲಿ ದರ ಪರಿಷ್ಕರಣೆ ಮಾಡಿದ್ದು, ಐದು ವರ್ಷಗಳ ನಂತರ ಇದೀಗ ದರ ಪರಿಷ್ಕರಣೆ ಮಾಡಿದೆ. ಶಿವಮೊಗ್ಗ, ಉಡುಪಿ ಹಾಗೂ ಮಂಗಳೂರಿನಲ್ಲಿ 2023ರಿಂದಲೇ ಎರಡು ಕಿಲೋ ಮೀಟರ್‌ಗೆ ಮಿನಿಮಮ್ ದರ 40 ರೂ. ಇದೆ. ಬೆಂಗಳೂರಲ್ಲಿ ಆಟೋ ಮೀಟರ್ ದರ ಕಡಿಮೆ ಇರೋದ್ರಿಂದ, ಆಟೋ ಚಾಲಕರು ಆಪ್ ಆಧಾರಿತವಾಗಿ ಆಟೋ ಓಡಿಸುತ್ತಿದ್ದಾರೆ. ಮೀಟರ್ ಹಾಕಿ ಓಡಿಸಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ 36 ರೂ. ಅಲ್ಲ, ಮಿನಿಮಮ್ ದರ 40 ರೂ. ಆಗಬೇಕು. ಇಲ್ಲದಿದ್ದರೆ ಕೋರ್ಟ್ ಮೊರೆ ಹೋಗುವುದಾಗಿ ಅಸೋಸಿಯೇಶನ್ ಹೇಳಿದೆ. ಇದನ್ನೂ ಓದಿ: ಡಿಜಿಟಲ್ ಅರೆಸ್ಟ್ ಎಂದು ಬೆದರಿಸಿ ಲಕ್ಷ ಲಕ್ಷ ವಸೂಲಿ – ಡೆತ್‌ನೋಟ್ ಬರೆದಿಟ್ಟು ಬೆಸ್ಕಾಂ ಸಿಬ್ಬಂದಿ ಆತ್ಮಹತ್ಯೆ