ಹಣ ಸಂಗ್ರಹಿಸಿ 3 ಕಿ.ಮೀ. ರಾಜ್ಯ ಹೆದ್ದಾರಿಯ ಗುಂಡಿ ಮುಚ್ಚಿದ ಬೀದರ್‌ ಗ್ರಾಮಸ್ಥರು!

Public TV
2 Min Read
Bidar villagers collected money and repaired a 3 km long pothole 3

– ಕಂದಗೋಳ ಗ್ರಾಮಸ್ಥರಿಂದ ಕೆಲಸ
– ಗ್ಯಾರಂಟಿಯಿಂದ ಸರ್ಕಾರದ ಬಳಿ ದುಡ್ಡಿ ಇಲ್ಲ ಎಂದು ಆಕ್ರೋಶ

ಬೀದರ್‌: ಪಂಚ ಗ್ಯಾರಂಟಿ (Congress Guarantee) ಯೋಜನೆಯನ್ನು ಜಾರಿ ಮಾಡಿದ ಬಳಿಕ ರಾಜ್ಯ ಸರ್ಕಾರದ ಬಳಿ ಡೆಡ್ಲಿ ಗುಂಡಿಗಳನ್ನು ಮುಚ್ಚಲು (Road Repair) ಹಣವಿಲ್ವಾ ಎಂಬ ಪ್ರಶ್ನೆ ಎದ್ದಿದೆ. ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿ ಸುಸ್ತಾದ ಜಿಲ್ಲೆಯ ಕಂದಗೋಳ ಗ್ರಾಮಸ್ಥರು ತಮ್ಮ ಸ್ವಂತ ಖರ್ಚಿನಲ್ಲೇ ಗುಂಡಿಗಳನ್ನು ಮುಚ್ಚಲು ಆರಂಭಿಸಿದ್ದಾರೆ.

ಬೀದರ್‌ನಿಂದ (Bidar) ತೆಲಂಗಾಣದ ಹಾಗೂ ಮಹಾರಾಷ್ಟಕ್ಕೆ ಹೋಗುವ ರಾಜ್ಯ ಹೆದ್ದಾರಿಯಲ್ಲಿ ದೊಡ್ಡ ದೊಡ್ಡ ಗುಂಡಿಗಳು (Potholes) ಸೃಷ್ಟಿಯಾಗಿವೆ. ಬೀದರ್‌ನಿಂದ ವಡಗಾಂವ್ ಮಾರ್ಗವಾಗಿ ತೆಲಂಗಾಣದ ಮತ್ತು ನಾಗಮಾರಪಳ್ಳಿ ಮಾರ್ಗವಾಗಿ ಮಹಾರಾಷ್ಟ್ರಕ್ಕೆ ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುತ್ತಿವೆ. ಇದನ್ನೂ ಓದಿ: ಬೇಕರಿ, ದಿನಸಿ ಅಂಗಡಿಗಳಿಗೆ ಲಕ್ಷ ಲಕ್ಷ ಟ್ಯಾಕ್ಸ್ ಬಂದ್‌ ಎಚ್ಚರಿಕೆ ಕೊಟ್ಟ ಮಾಲೀಕರು

Bidar villagers collected money and repaired a 3 km long pothole 1

ಭಾರೀ ಗಾತ್ರದ ವಾಹನಗಳ ಓಡಾಟದಿಂದ ರಸ್ತೆಗಳು ಮತ್ತಷ್ಟು ಹಾಳಾಗಿವೆ. ಪ್ರತಿದಿನ ಬೀದರ್‌ಗೆ ಹಾಗೂ ಔರಾದ್‌ಗೆ ಹೋಗಬೇಕಾದರೆ ಭಯದಲ್ಲೇ ಜನ ಸಂಚಾರ ಮಾಡುತ್ತಿದ್ದರು. ಈ ಬಗ್ಗೆ ಅಧಿಕಾರಿಗಳಿಗೆ ಸಾಕಷ್ಟು ಮನವಿ ಮಾಡಿದರೂ ಪ್ರಯೋಜನ ಆಗಿರಲಿಲ್ಲ. ಶಾಸಕರು ಮತ್ತು ಮಾಜಿ ಸಚಿವರಾದ ಪ್ರಭು ಚೌಹಾಣ್‌ಗೆ ಹತ್ತಾರು ಬಾರಿ ಮನವಿ ಮಾಡಿದರೂ ಕೆಲಸ ಆಗಲಿಲ್ಲ.

ಮನವಿಗೆ ಯಾವುದೇ ಸ್ಪಂದನೆ ಸಿಗದ ಕಾರಣ ಕಂದಗೋಳ ಗ್ರಾಮಸ್ಥರೇ ತಮ್ಮ ತಮ್ಮ ಕೈಯಿಂದ ಹಣ ಹಾಕಿಕೊಂಡು ರಸ್ತೆ ರಿಪೇರಿ ಮಾಡಿದ್ದಾರೆ. ತಮ್ಮ ಸ್ವಂತ ಖರ್ಚಿನಲ್ಲೇ ಜಲ್ಲಿ, ಮರಳು ತಂದು ರಸ್ತೆಯಲ್ಲಿ ಬಿದ್ದ ಗುಂಡಿಗಳನ್ನು ಮುಚ್ಚಿದ್ದಾರೆ. ಮೂರು ಕಿಲೋಮೀಟರ್ ದೂರದವರೆಗೆ ಇರುವ ಗುಂಡಿಗಳನ್ನು ಮಣ್ಣಿನಿಂದ ಮುಚ್ಚಿ ಮಾದರಿ ಆಗಿದ್ದಾರೆ. ಇದರಿಂದ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮುಜುಗರವಾಗಿದೆ.

Bidar villagers collected money and repaired a 3 km long pothole 2

ಗ್ರಾಮಸ್ಥ ಕಾಶಿನಾಥ್‌ ಪ್ರತಿಕ್ರಿಯಿಸಿ, ಪ್ರತಿದಿನ ಇಲ್ಲಿ ಸಾವಿರಾರು ವಾಹನಗಳು ಓಡಾಡುತ್ತಿವೆ. ಪ್ರತಿದಿನ ಬೈಕಿನಿಂದ ಸವಾರರು ರಸ್ತೆಗೆ ಬಿದ್ದು ಆಸ್ಪತ್ರೆಯಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾವು ಈ ರಸ್ತೆಯಲ್ಲಿ ಓಡಾಡುತ್ತಿದ್ದು ಹಲವು ಬಾರಿ ಬಿದ್ದಿದ್ದೇವೆ. ಸಾಕಷ್ಟು ಬಾರಿ ಅಧಿಕಾರಿಗಳನ್ನು, ಜನಪ್ರತಿನಿಧಿಗಳ ಬಳಿ ಮನವಿ ಮಾಡಿ ರಿಪೇರಿ ಮಾಡುವಂತೆ ಕೇಳಿಕೊಂಡಿದ್ದೆವು. ಆದರೆ ಯಾವುದೇ ಪ್ರಯೋಜನ ಆಗಿಲ್ಲ. ಕೊನೆಗೆ ನಾವೇ ಗ್ರಾಮಸ್ಥರಿಂದ ಹಣವನ್ನು ಸಂಗ್ರಹ ಮಾಡಿ ಗುಂಡಿ ಮುಚ್ಚಲು ಮುಂದಾಗುತ್ತಿದ್ದೇವೆ. ಪಂಚ ಗ್ಯಾರಂಟಿ ಯೋಜನೆಯಿಂದ ಸರ್ಕಾರದ ಬಳಿ ಗುಂಡಿ ಮುಚ್ಚಲು ಹಣವಿಲ್ಲ ಎಂದು ದೂರಿದರು. ಇದನ್ನೂ ಓದಿ: ಬೆಂಗಳೂರು ಕಾಲ್ತುಳಿತ ಕೇಸ್ ವರದಿ ಬಹಿರಂಗಪಡಿಸುವಂತೆ ಸರ್ಕಾರಕ್ಕೆ ಹೈಕೋರ್ಟ್‌ ಆದೇಶ

Share This Article