– ಅವಧಿಪೂರ್ವ ಜನನ, ಅಪೌಷ್ಟಿಕತೆ ಹಾಗೂ ಕಡಿಮೆ ತೂಕದ ಮಕ್ಕಳಿಗೆ ಅನುಕೂಲ
– 75 ಲಕ್ಷ ರೂ. ಅನುದಾನದಲ್ಲಿ ನಿರ್ಮಾಣಗೊಳ್ಳುತ್ತಿದೆ ಅಮೃತಧಾರೆ
ಬಳ್ಳಾರಿ: ಅವಧಿ ಪೂರ್ವ ಹೆರಿಗೆ, ಕಡಿಮೆ ತೂಕ ಹಾಗೂ ಆನಾರೋಗ್ಯ ಪೀಡಿತ ಶಿಶುಗಳಿಗೆ ಎದುರಾಗುವ ತಾಯಿಯ ಎದೆಹಾಲಿನ (Breast Milk) ಕೊರತೆ ನೀಗಿಸಲು ಅಮೃತಧಾರೆ (Amruthadhare) ಹೆಸರಿನಡಿ ಕಲ್ಯಾಣ ಕರ್ನಾಟಕ (Kalyana Karnataka) ಭಾಗದಲ್ಲಿ ಮೊಟ್ಟ ಮೊದಲ ಬಾರಿ ಬಳ್ಳಾರಿ (Ballari) ವೈದ್ಯಕೀಯ ಮಹಾ ವಿದ್ಯಾಲಯ ಹಾಗೂ ಸಂಶೋಧನಾ ಕೇಂದ್ರದಲ್ಲಿ ಹಾಲಿನ ಬ್ಯಾಂಕ್ ಸ್ಥಾಪಿಸಲು ಭರದ ಸಿದ್ಧತೆ ನಡೆದಿದೆ.
ಬಳ್ಳಾರಿ ವಿಮ್ಸ್‌ನಲ್ಲಿ ನಿತ್ಯ 25-30 ಹೆರಿಗೆಗಳಾಗುತ್ತಿದ್ದು, ತಾಯಿ ಮತ್ತು ಮಕ್ಕಳಿಗೆ ಪ್ರತ್ಯೇಕ ಚಿಕಿತ್ಸಾ ಸೌಲಭ್ಯ ನೀಡಲಾಗುತ್ತಿದೆ. ಹಲವು ಸೌಲಭ್ಯಗಳ ಮಧ್ಯೆ ಕಡಿಮೆ ತೂಕ, ಅವಧಿ ಪೂರ್ವ ಹಾಗೂ ಅನಾರೋಗ್ಯ ಶಿಶುಗಳ ಜನನ ಸಾಮಾನ್ಯವಾಗಿದೆ. ಇಂಥ ಮಕ್ಕಳು ತಾಯಿಯ ಎದೆಹಾಲಿನ ಕೊರತೆ ಎದುರಿಸುವುದನ್ನು ತಡೆಯುವ ದೂರದೃಷ್ಟಿಯಿಂದ ಹಾಲಿನ ಬ್ಯಾಂಕ್ ಸ್ಥಾಪನೆಗೆ ಯೋಜಿಸಲಾಗಿದೆ. ಇದನ್ನೂ ಓದಿ: ಪರಿಶೀಲನೆ ವೇಳೆ 802 ಬಾಟಲಿ ಮದ್ಯ ನಾಪತ್ತೆ – ಅಧಿಕಾರಿಗಳ ಬಳಿ ಇಲಿಗಳು ಕುಡಿದಿವೆ ಎಂದ ವ್ಯಾಪಾರಿಗಳು!
ಬಳ್ಳಾರಿ ಮಹಾನಗರ ಪಾಲಿಕೆಯಿಂದ 25 ಲಕ್ಷ ರೂ. ಹಾಗೂ ಜಿಲ್ಲಾಡಳಿತದ 50 ಲಕ್ಷ ರೂ. ಸೇರಿ ಒಟ್ಟು 75 ಲಕ್ಷ ರೂ. ಅನುದಾನದಲ್ಲಿ ಹಾಲಿನ ಬ್ಯಾಂಕ್ (Breast Milk Bank) ನಿರ್ಮಾಣ ಕೈಗೊಂಡಿದ್ದು ಕಾಮಗಾರಿ ಅಂತಿಮ ಹಂತದಲ್ಲಿದೆ. ಈ ಬ್ಯಾಂಕ್ ಒಟ್ಟು 510 ಬಾಟಲ್‌ಗಳಲ್ಲಿ ಹಾಲು ಸಂಗ್ರಹ ಸಾಮರ್ಥ್ಯ ಹೊಂದಿದೆ.
ಕಲ್ಯಾಣ ಕರ್ನಾಟಕದಲ್ಲೇ ಹೆಚ್ಚು ಅಪೌಷ್ಟಿಕತೆ, ಅವಧಿ ಪೂರ್ವ ಹೆರಿಗೆ, ಕಡಿಮೆ ತೂಕ ಹಾಗೂ ಅನಾರೋಗ್ಯ ಪೀಡಿತ ಮಕ್ಕಳ ಜನನ ಸೇರಿ ಇತರ ಕಾರಣಗಳಿಂದ ಈ ಭಾಗದ ಜಿಲ್ಲೆಗಳ ಮಕ್ಕಳಲ್ಲಿ ಅಪೌಷ್ಟಿಕತೆ ತೀವ್ರವಾಗಿ ಕಾಡುತ್ತದೆ. ಹೆರಿಗೆ ಸಂದರ್ಭದಲ್ಲಿ ಮಕ್ಕಳಿಗೆ ಎದುರಾಗುವ ತಾಯಿ ಹಾಲಿನ ಕೊರತೆ ನೀಗಿಸಲು ರಾಜ್ಯದಲ್ಲಿರುವ ಬೆರಳೆಣಿಕೆಯಷ್ಟು ಹಾಲಿನ ಬ್ಯಾಂಕ್ ಗಳಿಗೆ ತೆರಳಲಾಗದ ಪಾಲಕರು ಹಸುವಿನ ಹಾಲು, ಗಂಜಿಯ ಮೊರೆ ಹೋಗುವುದು ಸಾಮಾನ್ಯವಾಗಿದೆ. ಇದನ್ನೂ ಓದಿ: ಒಂದು ಬೈಕ್ ಐದು ಕಾರುಗಳ ನಡುವೆ ಭೀಕರ ಸರಣಿ ಅಪಘಾತ – ಪಾರಾದ ಸವಾರ
ತಾಯಿ ಹಾಲಿನ ದಾನಕ್ಕೂ ಅವಕಾಶ
ಹಾಲುಣಿಸುವ ಮಹಿಳೆಯರು ತಮ್ಮ ಹೆಚ್ಚುವರಿ ಹಾಲನ್ನು ದಾನ ಮಾಡಲು ಸಿದ್ಧರಿದ್ದರೆ ಈ ಬ್ಯಾಂಕ್‌ನಲ್ಲಿ ಅವಕಾಶ ಕಲ್ಪಿಸಲಾಗಿದೆ. ಜನಿಸಿದ ಮಗು ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದರೆ ಅಥವಾ ಅಸುನೀಗಿದರೆ ಅಂತಹ ತಾಯಿ ಹಾಲನ್ನು ದಾನ ಮಾಡಬಹುದಾಗಿದೆ. ಹೀಗೆ ಸಂಗ್ರಹಿಸಿದ ಹಾಲನ್ನು ಸುರಕ್ಷಿತವಾಗಿ ಇರಿಸಲು ವಿಮ್ಸ್‌ನಲ್ಲಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.