ಮೈಸೂರು: ಹಿರಿಯ ಪತ್ರಕರ್ತರಾದ ಕೆ.ಬಿ ಗಣಪತಿ (KB Ganapathy) ಅವರಿಂದು ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
88 ವರ್ಷದ ಕೆ.ಬಿ. ಗಣಪತಿ ಅವರು ತಮ್ಮ ಬದುಕಿನ ಕಡೆಯ ದಿನದವರೆಗೂ ಪತ್ರಿಕಾಲಯದಲ್ಲಿ ಸಕ್ರಿಯರಾಗಿದ್ದರು. ಕೆಬಿ ಗಣಪತಿ ಅವರು ತಮ್ಮ ಒಡೆತನದ ಕನ್ನಡದ ʻಮೈಸೂರು ಮಿತ್ರʼ ಹಾಗೂ ಇಂಗ್ಲೀಷ್‌ನ ಸ್ಟಾರ್ ಆಫ್ ಮೈಸೂರು (Star of Mysore) ಪತ್ರಿಕೆಗಳ ಮೂಲಕ ಹಳೇ ಮೈಸೂರು ಪ್ರಾಂತ್ಯದಲ್ಲಿ ದೊಡ್ಡ ಓದುಗ ವರ್ಗವನ್ನು ಸೃಷ್ಟಿಸುವಲ್ಲಿ ಯಶಸ್ವಿಯಾದವರು. ಇದರ ಜೊತೆಗೆ ನೂರಾರು ಪತ್ರಕರ್ತರನ್ನ ಈ ನಾಡಿಗೆ ಕೊಡುಗೆ ನೀಡಿದ ಹಿರಿಮೆ ಗಣಪತಿ ಅವರಿಗೆ ಸಲ್ಲುತ್ತದೆ.
ತಮ್ಮ ಅಂಕಣ ಬರಹಗಳ ಮೂಲಕ ಪತ್ರಕರ್ತರ (Journalists) ಸಾಮಾಜಿಕ ಬದ್ಧತೆಯನ್ನ ಸಮಾಜಕ್ಕೆ ತೋರಿಸಿದವರು ಗಣಪತಿ. ಯಶಸ್ವಿ ಪತ್ರಿಕೋದ್ಯಮದ ಮೂಲಕ ಇಡೀ ರಾಜ್ಯದ ಪತ್ರಿಕ ಸಮೂಹ ಮೈಸೂರಿನ ಕಡೆ ನೋಡುವ ಹಾಗೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಸುಮಾರು 50 ವರ್ಷಗಳ ನಿರಂತರ ಪತ್ರಿಕೋದ್ಯಮದಲ್ಲಿ ಮೈಲಿಗಲ್ಲಿನಂತಹ ನೂರಾರು ಸಾಧನೆಗಳನ್ನು ಗಣಪತಿ ಅವರು ಮಾಡಿದ್ದಾರೆ. ಅವರನ್ನು ಕಳೆದುಕೊಳ್ಳುವ ಮೂಲಕ ಪತ್ರಿಕೋದ್ಯಮ ಶೂನ್ಯ ಸೃಷ್ಟಿಸಿಕೊಂಡಿದೆ.
ಕೆಬಿಜೆ ಎಂದು ಖ್ಯಾತಿ ಪಡೆದಿದ್ದ ಕೆಬಿ ಗಣಪತಿ ಅವರು ಮೈಸೂರಿನಲ್ಲಿ ಸಂಜೆಯ ದಿನಪತ್ರಿಕೆ ‘ಸ್ಟಾರ್ ಆಫ್ ಮೈಸೂರು’ ಪತ್ರಿಕೆಯನ್ನು 1978ರಲ್ಲಿ ಆರಂಭಿಸಿದರು. ಇದು ಇಂಗ್ಲಿಷ್ ಪತ್ರಕರ್ತರಾಗುವ ಯುವಕರ ಪಾಲಿಗೆ ಅಕ್ಷರಶಃ ಕಾಲೇಜ್ ಆಗಿತ್ತು. ಇದರ ಜೊತೆಗೆ 1980ರಲ್ಲಿ ‘ಮೈಸೂರು ಮಿತ್ರ’ ದಿನಪತ್ರಿಕೆ ಆರಂಭಿಸಿದರು.
ಕೆಬಿಜೆ ಅವರು ಬರೆಯುತ್ತಿದ್ದ ʻಛೂಮಂತ್ರ, ಅಬ್ರಕಡಬ್ರʼ ಅಂಕಣಗಳು ಪ್ರಸಿದ್ಧವಾಗಿದ್ದವು. ಕೆಬಿಜೆ ಪತ್ರಿಕೋದ್ಯಮಕ್ಕೆ ಬರುವ ಮುನ್ನ ಬೆಂಗಳೂರಿನಲ್ಲಿ ಕಾನೂನು ಪದವಿ ಪಡೆದ ನಂತರ ಮುಂಬೈಗೆ ತೆರಳಿ ಅಲ್ಲಿಯ ಭಾರತೀಯ ವಿದ್ಯಾಭವನದಲ್ಲಿ ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಪದವಿ ಗಳಿಸಿದರು. ಮುಂಬೈನಲ್ಲಿ ಪ್ರಿ-ಪ್ರೆಸ್ ಜರ್ನಲ್, ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ ಹಾಗೂ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದರು. ಬಳಿಕ ಮೈಸೂರಿಗೆ ಬಂದು ಪತ್ರಿಕೆಗಳನ್ನು ಆರಂಭಿಸಿದ್ದು ಈಗ ಇತಿಹಾಸ.
ಆದರ್ಶವಾದಿ ಕಾದಂಬರಿ, ಅಮೆರಿಕ- ಆ್ಯನ್ ಏರಿಯಾ ಆಫ್ ಲೈಟ್ ಪ್ರವಾಸ ಕಥನ, ದಿ ಕ್ರಾಸ್ ಆ್ಯಂಡ್ ದಿ ಕೂರ್ಗ್ ಇಂಗ್ಲಿಷ್ ಕಾದಂಬರಿ, ಸ್ಟಾರ್ ಆಫ್ ಮೈಸೂರು- ಸ್ಟಾರ್ ಆಫ್ ಎ ಯೂನಿಕ್ ಇವನಿಂಗ್ ಇಂಗ್ಲಿಷ್ ನ್ಯೂಸ್ ಪೇಪರ್, ಸ್ವಾಡ್೯ ಆಫ್ ಶಿವಾಜಿ ಜೀವನಚರಿತ್ರೆ ಇವರು ಬರೆದ ಕೃತಿಗಳಾಗಿವೆ.
ನನ್ನೂರಿನ ಹಿರಿಯ ಪತ್ರಕರ್ತ ಮಿತ್ರರಾದ ಕೆ.ಬಿ.ಗಣಪತಿ ಅವರ ನಿಧನದಿಂದ ದುಃಖಿತನಾಗಿದ್ದೇನೆ. ಗಣಪತಿಯವರ ಅಗಲಿಕೆಯಿಂದ ನಾಡಿನ ಪತ್ರಿಕಾರಂಗ ಬಡವಾಗಿದೆ.
ಸುಮಾರು ಐದು ದಶಕಗಳ ಕಾಲ ಪತ್ರಿಕೋದ್ಯಮದಲ್ಲಿ ಅವಿರತ ದುಡಿದ ಗಣಪತಿ ಅವರು ವಸ್ತುನಿಷ್ಠ ಹಾಗೂ ವೃತ್ತಿಪರ ಬರಹಗಳಿಗೆ ಹೆಸರುವಾಸಿ. “ಸ್ಟಾರ್ ಆಫ್ ಮೈಸೂರು” ಪತ್ರಿಕೆಯ ಮೂಲಕ ಸಾಂಸ್ಕೃತಿಕ… pic.twitter.com/BKA6U3MorY
— Siddaramaiah (@siddaramaiah) July 13, 2025
ಗಣ್ಯರಿಂದ ಸಂತಾಪ
ಹಿರಿಯ ಪತ್ರಕರ್ತ ಗಣಪತಿ ಅವರ ನಿಧನಕ್ಕೆ ಮುಖ್ಯಮಂತ್ರಿಗಳು ಸೇರಿದಂತೆ ಸಂತಾಪ ಸೂಚಿಸಿದ್ದಾರೆ. ಎಕ್ಸ್ ಖಾತೆಯಲ್ಲಿ ಫೋಟೋ ಜೊತೆಗೆ ಚುಟುಕು ಸಂದೇಶ ಹಂಚಿಕೊಳ್ಳುವ ಮೂಲಕ ಸಂತಾಪ ಸೂಚಿಸಿದ್ದಾರೆ.
ಸಿಎಂ ಸಂತಾಪ: ನನ್ನೂರಿನ ಹಿರಿಯ ಪತ್ರಕರ್ತ ಮಿತ್ರರಾದ ಕೆ.ಬಿ.ಗಣಪತಿ ಅವರ ನಿಧನದಿಂದ ದುಃಖಿತನಾಗಿದ್ದೇನೆ. ಗಣಪತಿಯವರ ಅಗಲಿಕೆಯಿಂದ ನಾಡಿನ ಪತ್ರಿಕಾರಂಗ ಬಡವಾಗಿದೆ. ಸುಮಾರು ಐದು ದಶಕಗಳ ಕಾಲ ಪತ್ರಿಕೋದ್ಯಮದಲ್ಲಿ ಅವಿರತ ದುಡಿದ ಗಣಪತಿ ಅವರು ವಸ್ತುನಿಷ್ಠ ಹಾಗೂ ವೃತ್ತಿಪರ ಬರಹಗಳಿಗೆ ಹೆಸರುವಾಸಿ. “ಸ್ಟಾರ್ ಆಫ್ ಮೈಸೂರು” ಪತ್ರಿಕೆಯ ಮೂಲಕ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅಪಾರ ಓದುಗ ಬಳಗ ಸೃಷ್ಟಿಸಿದ ಗಣಪತಿಯವರು “ಮೈಸೂರು ಮಿತ್ರ” ದಿನಪತ್ರಿಕೆಯ ಸ್ಥಾಪಕ ಸಂಪಾದಕರಾಗಿ ಕೂಡ ಸೇವೆ ಸಲ್ಲಿಸಿದ್ದರು. ಪತ್ರಿಕೋದ್ಯಮದಲ್ಲಿ ಅವರು ಮೂಡಿಸಿರುವ ಹೆಜ್ಜೆಗುರುತುಗಳು ಯುವ ಪತ್ರಕರ್ತರಿಗೆ ಸ್ಪೂರ್ತಿ ಮತ್ತು ಮಾದರಿಯಾಗಲಿ. ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಅವರ ಕುಟುಂಬವರ್ಗಕ್ಕೆ ನೋವು ಭರಿಸುವ ಶಕ್ತಿ ಸಿಗಲೆಂದು ಪ್ರಾರ್ಥಿಸುತ್ತೇನೆ.
ಮೈಸೂರು ಮಿತ್ರ, ಸ್ಟಾರ್ ಆಫ್ ಮೈಸೂರು ಪತ್ರಿಕೆಗಳ ಸಂಸ್ಥಾಪಕ ಸಂಪಾದಕರು ಹಾಗೂ ಹಿರಿಯರೂ ಆಗಿದ್ದ ಶ್ರೀ ಕೆ.ಬಿ ಗಣಪತಿ ಅವರು ನಿಧನರಾದ ಸುದ್ದಿ ತಿಳಿದು ಅತ್ಯಂತ ದುಃಖವಾಗಿದೆ.
ಮಧ್ಯಮ ಲೋಕದಲ್ಲಿ ಅಪಾರ ಸೇವೆ ಸಲ್ಲಿಸಿದ್ದ ಅವರು, ತಮ್ಮ ಗರಡಿಯಲ್ಲಿ ಅನೇಕ ಶ್ರೇಷ್ಠ ಪತ್ರಕರ್ತರನ್ನು ರೂಪಿಸಿದ್ದಾರೆ.
ಅವರ ಆತ್ಮಕ್ಕೆ ಭಗವಂತ ಸದ್ಗತಿ ನೀಡಲಿ.… pic.twitter.com/nIUonjWUV2
— Nikhil Kumar (@Nikhil_Kumar_k) July 13, 2025
ನಿಖಿಲ್ ಕುಮಾರಸ್ವಾಮಿ ಸಂತಾಪ: ಮೈಸೂರು ಮಿತ್ರ, ಸ್ಟಾರ್ ಆಫ್ ಮೈಸೂರು ಪತ್ರಿಕೆಗಳ ಸಂಸ್ಥಾಪಕ ಸಂಪಾದಕರು ಹಾಗೂ ಹಿರಿಯರೂ ಆಗಿದ್ದ ಶ್ರೀ ಕೆ.ಬಿ ಗಣಪತಿ ಅವರು ನಿಧನರಾದ ಸುದ್ದಿ ತಿಳಿದು ಅತ್ಯಂತ ದುಃಖವಾಗಿದೆ. ಮಧ್ಯಮ ಲೋಕದಲ್ಲಿ ಅಪಾರ ಸೇವೆ ಸಲ್ಲಿಸಿದ್ದ ಅವರು, ತಮ್ಮ ಗರಡಿಯಲ್ಲಿ ಅನೇಕ ಶ್ರೇಷ್ಠ ಪತ್ರಕರ್ತರನ್ನು ರೂಪಿಸಿದ್ದಾರೆ. ಅವರ ಆತ್ಮಕ್ಕೆ ಭಗವಂತ ಸದ್ಗತಿ ನೀಡಲಿ. ಕುಟುಂಬ ಸದಸ್ಯರಿಗೆ ದುಃಖ ಭರಿಸುವ ಶಕ್ತಿ ಕರುಣಿಸಲೆಂದು ಪ್ರಾರ್ಥಿಸುವೆ ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.