– ಪುನೀತ್ ಜೊತೆಗೂ ಅಭಿನಯಿಸಿದ್ದ ಕಲಾವಿದ
ಕನ್ನಡ ಸೇರಿದಂತೆ 750ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಬಹುಭಾಷಾ ನಟ ಕೋಟ ಶ್ರೀನಿವಾಸ ರಾವ್ (83) (Kota Srinivas Rao) ನಿಧನರಾಗಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ನಟ ಕೋಟ ಶ್ರೀನಿವಾಸ ರಾವ್ ಹೈದರಾಬಾದ್‌ನಲ್ಲಿರುವ (Hyderabad) ತಮ್ಮ ಮನೆಯಲ್ಲಿ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಹಿರಿಯ ನಟನ ನಿಧನಕ್ಕೆ ಇಡೀ ಚಿತ್ರರಂಗವೇ ಸಂತಾಪ ಸೂಚಿಸಿದೆ.
ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕೋಟ ಶ್ರೀನಿವಾಸ ರಾವ್ ಮಗ ತೀರಿಕೊಂಡ ನಂತರ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.
750ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ
ಖಳನಾಯಕ, ಪೋಷಕರ ಪಾತ್ರ ಹಾಗೂ ಹಾಸ್ಯನಟನಾಗಿ ತಮಿಳು, ತೆಲುಗು, ಕನ್ನಡ ಸಿನಿಮಾಗಳಲ್ಲಿ (Kannada Cinema) ಪ್ರೇಕ್ಷಕರ ಮನಗೆದ್ದಿದ್ದ ಶ್ರೀನಿವಾಸ ರಾವ್ 750ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ರಂಗಭೂಮಿಯಿಂದ ಬಂದ ನಟ ತಮ್ಮದೇ ಆದ ನಟನಾ ಶೈಲಿಯಿಂದ ಜನರ ಮನ ಗೆದ್ದಿದ್ರು. ವಿಶೇಷವಾಗಿ ನಟ ಮೋಹನ್ ಬಾಬು ಅವರೊಂದಿಗೇ ಅವರು ಸುಮಾರು 60 ಚಿತ್ರಗಳಲ್ಲಿ ನಟಿಸಿದ್ದಾರೆ.
1942ರ ಜುಲೈ 10 ರಂದು ಕೃಷ್ಣ ಜಿಲ್ಲೆಯ ಕಂಕಿಪಾಡುವಿನಲ್ಲಿ ಜನಿಸಿದ ಕೋಟ ಶ್ರೀನಿವಾಸ ರಾವ್, ಸಿನಿಮಾ ರಂಗ ಪ್ರವೇಶಿಸುವುದಕ್ಕೆ ಮುನ್ನ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದರು. ಇದರ ಜೊತೆ ಜೊತೆಗೆ 20 ವರ್ಷಗಳ ಕಾಲ ವೇದಿಕೆಯಲ್ಲಿ ನಟನೆಯಲ್ಲಿ ಅನುಭವ ಪಡೆದಿದ್ದರು. ಚಲನಚಿತ್ರಗಳಿಗೆ ಪದಾರ್ಪಣೆ ಮಾಡಿದ ಕೋಟ ಶ್ರೀನಿವಾಸ ರಾವ್, ತಮ್ಮ ವಿಶಿಷ್ಟ ಶೈಲಿಯ ಹಾಸ್ಯದ ಮೂಲಕ ಪ್ರೇಕ್ಷಕರನ್ನು ಮೆಚ್ಚಿಸಿದರು.