ಪ್ರತಿದಿನವೂ ನಮಗೆಲ್ಲರಿಗೂ ಹೊಸ ದಿನ ಎಂಬಂತೆ. ತಿನ್ನುವ ವಿಷಯದಲ್ಲಿಯೂ ಪ್ರತಿದಿನವೂ ಹೊಸ ಅಡುಗೆ, ಖಾದ್ಯಗಳನ್ನು ಸವಿಯಬೇಕು. ಸೌತ್ ಇಂಡಿಯನ್, ನಾರ್ತ್ ಇಂಡಿಯನ್, ಇಟಾಲಿಯನ್, ಮೆಕ್ಸಿಕನ್ ಹೀಗೆ ವಿಧ ವಿಧವಾದ ಖಾದ್ಯಗಳಿವೆ. ಹಾಗೆಯೇ ಚೀನಿಯರ ಹಳೆಯದಾದ ಹಾಗೂ ಪ್ರಸಿದ್ಧವಾದ ಈ ಪದಾರ್ಥವನ್ನು ಮಾಡಿ ಒಮ್ಮೆ ಸವಿಯಿರಿ. ಜಾಸ್ತಿ ಸಮಯ ಬೇಡ. ಕೇವಲ 25 ನಿಮಿಷ ಸಾಕು. ಥಟ್ ಅಂತ ತಯಾರಾಗುತ್ತದೆ. ಕಡಿಮೆ ಕೊಬ್ಬಿನಂಶ ಹಾಗೂ ಹೆಚ್ಚು ಪ್ರೋಟೀನ್ ಅಂಶ ಹೊಂದಿರುವ ಇದನ್ನು ತಿಂದರೆ ಆರೋಗ್ಯಕ್ಕೂ ಒಳ್ಳೆಯದು.
ಬೇಕಾಗುವ ಸಾಮಗ್ರಿಗಳು:
ಈರುಳ್ಳಿ
ಬೆಳ್ಳುಳ್ಳಿ
ಜೀರಿಗೆ ಪುಡಿ
ಒಣಗಿಸಿದ ಪುದಿನಾ ಪುಡಿ
ಮೆಣಸಿನ ಪುಡಿ
ಶುಂಠಿ ಪುಡಿ
ಮೀನು
ನೂಡಲ್ಸ್
ಕೆಂಪು ಮತ್ತು ಹಳದಿ ದೊಡ್ಡ ಮೆಣಸಿನಕಾಯಿ
ಕ್ಯಾರೆಟ್
ನಿಂಬೆ ರಸ
ಕೊತ್ತಂಬರಿ
ಸೋಯಾ ಸಾಸ್
ಎಣ್ಣೆ
ಸೊಯಾಬೀನ್ ಎಣ್ಣೆ
ಮಾಡುವ ವಿಧಾನ:
ಮೊದಲಿಗೆ ಮಸಾಲಾ ಪುಡಿಗಳನ್ನು ಸೊಯಾಬೀನ್ ಎಣ್ಣೆಯೊಂದಿಗೆ ಕಲಸಿಕೊಳ್ಳಬೇಕು. ಬಳಿಕ ಕಲಸಿದ ಮಿಶ್ರಣವನ್ನು ಕತ್ತರಿಸಿಟ್ಟ ಮೀನಿಗೆ ಹಚ್ಚಿಕೊಳ್ಳಬೇಕು. 10 ನಿಮಿಷ ಬಿಟ್ಟು ಮೀನನ್ನು ಮೈಕ್ರೋ ಓವೆನ್‌ನಲ್ಲಿ ಫ್ರೈ ಮಾಡಿಕೊಳ್ಳಬೇಕು.
ಒಂದು ಬಟ್ಟಲಿಗೆ ನಿಂಬೆ ರಸ ಹಾಕಿ, ಅದಕ್ಕೆ ಸೋಯಾ ಸಾಸ್ ಸೇರಿಸಿ ಮಿಕ್ಸ್ ಮಾಡಿಕೊಳ್ಳಬೇಕು. ಒಂದು ಕಡೆ ನೂಡಲ್ಸ್‌ನ್ನು ಸ್ವಲ್ಪ ಅರಿಶಿಣ ಹಾಕಿ, ಚೆನ್ನಾಗಿ ಬೇಯಿಸಿಟ್ಟುಕೊಳ್ಳಬೇಕು.
ನಂತರ ಒಂದು ಬಾಣಲಿಗೆ ಎಣ್ಣೆ ಹಾಕಿ, ಉದ್ದಾಗಿ ಕತ್ತರಿಸಿಕೊಂಡ ಈರುಳ್ಳಿ, ದೊಡ್ಡ ಮೆಣಸಿನಕಾಯಿ ಹಾಗೂ ಗಜ್ಜರಿಯನ್ನು ಹಾಕಿ ಚೆನ್ನಾಗಿ ಹುರಿದುಕೊಳ್ಳಬೇಕು. ಬಳಿಕ ಅದಕ್ಕೆ ಬೇಯಿಸಿಟ್ಟ ನೂಡಲ್ಸ್ ಹಾಕಿಕೊಳ್ಳಬೇಕು. ನಂತರ ಮಿಕ್ಸ್ ಮಾಡಿಟ್ಟ ನಿಂಬೆ ರಸ ಹಾಕಿ ಚೆನ್ನಾಗಿ ಕಲಸಿ. ಕೊನೆಗೆ ಒಂದು ತಟ್ಟೆಗೆ ಹಾಕಿ, ಅದರ ಮೇಲೆ ಕೊತ್ತಂಬರಿ ಸೊಪ್ಪು ಹಾಕಿ. ಬಳಿಕ ಅದರ ಮೇಲೆ ಫ್ರೈ ಮಾಡಿದ ಮೀನು ಇಟ್ಟರೇ ಥಾಯ್ ಫಿಶ್ ನೂಡಲ್ಸ್ ತಯಾರಾಗುತ್ತದೆ.