ಭೋಪಾಲ್: ಏಷ್ಯಾದಲ್ಲೇ ಅತ್ಯಂತ ಹಿರಿಯ ಆನೆ ಎನ್ನುವ ಖ್ಯಾತಿ ಪಡೆದಿದ್ದ ಮಧ್ಯಪ್ರದೇಶ ಪನ್ನಾ ಹುಲಿ ಮೀಸಲು ಪ್ರದೇಶದಲ್ಲಿದ್ದ ವತ್ಸಲಾ ತನ್ನ 100ನೇ ವಯಸ್ಸಿನಲ್ಲಿ ನಿಧನವಾಗಿದೆ.
ಮಂಗಳವಾರ ಹಿನೌಟಾ ಪ್ರದೇಶದ ಖೈರಾಯನ್ ಚರಂಡಿ ಬಳಿ ಮುಂಬದಿ ಕಾಲುಗಳಿಗೆ ಗಾಯವಾಗಿ ಆನೆ ಕುಳಿತುಕೊಂಡಿತ್ತು. ಇದನ್ನು ಗಮನಿಸಿದ ಅಧಿಕಾರಿಗಳು ಚಿಕಿತ್ಸೆ ನೀಡಿದ್ದರು. ಆದರೂ ಮಧ್ಯಾಹ್ನದ ವೇಳೆಗೆ ಆನೆ ಮೃತಪಟ್ಟಿದೆ. ವತ್ಸಲಾ ಆನೆಯ ಅಂತ್ಯಕ್ರಿಯೆಯನ್ನು ಮಧ್ಯಪ್ರದೇಶದ ಪನ್ನಾ ಹುಲಿ ಮೀಸಲು ಪ್ರದೇಶದ ಅಧಿಕಾರಿಗಳು ಮತ್ತು ನೌಕರರು ಮಂಗಳವಾರ ನೆರವೇರಿಸಿದ್ದಾರೆ.
ಈ ಆನೆಯನ್ನು ಕೇರಳದಿಂದ ಪನ್ನಾ ಹುಲಿ ಮೀಸಲು ಪ್ರದೇಶಕ್ಕೆ ಕರೆತರಲಾಗಿತ್ತು. ಅನೇಕ ವರ್ಷಗಳಿಂದ ಇಲ್ಲಿನ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದ ವತ್ಸಲಾ, ಮೀಸಲು ಪ್ರದೇಶದಲ್ಲಿರುವ ಆನೆಗಳ ಸಂಪೂರ್ಣ ಗುಂಪನ್ನು ಮುನ್ನಡೆಸುತ್ತಿತ್ತು.