-ರಾಜ್ಯ ಸಾರಿಗೆ ಇಲಾಖೆಯ ಇತಿಹಾಸದಲ್ಲೇ ಹೊಸ ರೆಕಾರ್ಡ್
– 500ನೇ ಟಿಕೆಟ್ ಪಡೆದ ಮಹಿಳೆಗೆ ಲಕ್ಕಿ ಬಹುಮಾನ
ಬೆಂಗಳೂರು: ಕಾಂಗ್ರೆಸ್‌ನ (Congress) ಶಕ್ತಿ ಯೋಜನೆಯ ಪರಿಣಾಮದಿಂದಾಗಿ ಎರಡೇ ವರ್ಷದಲ್ಲಿ ಉಚಿತ ಬಸ್‌ಗಳಲ್ಲಿ ಪ್ರಯಾಣಿಸಿದ ಮಹಿಳೆಯರ ಸಂಖ್ಯೆ ಒಟ್ಟು 500 ಕೋಟಿಗೆ ತಲುಪಲಿದ್ದು, ಆ 500ನೇ ಟಿಕೆಟ್ ಪಡೆಯಲಿರುವ ಮಹಿಳೆಗೆ ಲಕ್ಕಿ ಬಹುಮಾನ ಸಿಗಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ತಿಳಿಸಿದ್ದಾರೆ.
2023ರ ಕರ್ನಾಟಕ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ಸರ್ಕಾರ ನೀಡಿದ ಭರವಸೆಯಂತೆ ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆಗಳು ಜಾರಿಯಾಗಿವೆ. ಈ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಗೆ ಮಹಿಳೆಯರಿಂದ ಭರ್ಜರಿ ರೆಸ್ಪಾನ್ಸ್ ದೊರೆತಿದ್ದು, ಇದೀಗ ಶಕ್ತಿ ಯೋಜನೆ ಹೊಸ ಮೈಲುಗಲ್ಲು ಬರೆಯಲು ಮುಂದಾಗಿದೆ.ಇದನ್ನೂ ಓದಿ: KRS ಡ್ಯಾಂ ಮೇಲೆ ‘ಕೈ’ ಶಾಸಕ ಬೆಂಬಲಿಗನ ಹುಚ್ಚಾಟ- ನಿರ್ಬಂಧವಿದ್ದರೂ ಲೆಕ್ಕಿಸದೇ ಜಲಾಶಯದ ಮೇಲೆ ರೀಲ್ಸ್
ಶಕ್ತಿ ಯೋಜನೆ ಜಾರಿಯಾದ ಎರಡೇ ವರ್ಷದಲ್ಲಿ 500 ಕೋಟಿ ಮಹಿಳೆಯರು ಸರ್ಕಾರಿ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಿ ದಾಖಲೆ ಬರೆಯಲಿದ್ದಾರೆ. 2023ರ ಜೂನ್ 11ರಂದು ಆರಂಭವಾಗಿದ್ದ ಈ ಯೋಜನೆಗೆ ಮಹಿಳೆಯರು ಬಹುಪರಾಕ್ ಎಂದಿದ್ದು, ಕೆಎಸ್‌ಆರ್‌ಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳ ಬಸ್‌ಗಳಲ್ಲಿ ಸೋಮವಾರಕ್ಕೆ ಬರೋಬ್ಬರಿ 493 ಕೋಟಿ ಮಹಿಳಾ ಪ್ರಯಾಣಿಕರು ಒಂದು ರೂಪಾಯಿ ಹಣ ನೀಡದೆ ಉಚಿತವಾಗಿ ಪ್ರಯಾಣಿಸಿದ್ದಾರೆ.
ಪ್ರತಿದಿನ ನಾಲ್ಕು ಸಾರಿಗೆ ನಿಗಮದ ಬಸ್‌ಗಳಲ್ಲಿ 70 ರಿಂದ 75 ಲಕ್ಷ ಮಹಿಳೆಯರು ಫ್ರೀಯಾಗಿ ಸಂಚರಿಸುತ್ತಿದ್ದಾರೆ. ಭಾನುವಾರದವರೆಗಿನ ಅಂಕಿ ಅಂಶಗಳನ್ನು ನೋಡುವುದಾದರೆ ಸುಮಾರು 494 ಕೋಟಿಯಷ್ಟು ಮಹಿಳೆಯರು ಸಂಚರಿಸಿದ್ದು, 12,511 ಕೋಟಿ ರೂ. ಟಿಕೆಟ್ ಮೌಲ್ಯವಾಗಿದೆ. ಬರುವ ಸೋಮವಾರಕ್ಕೆ ಶಕ್ತಿ ಯೋಜನೆ 500 ಕೋಟಿ ಮಹಿಳೆಯರ ಉಚಿತ ಪ್ರಯಾಣದ ಗುರಿ ತಲುಪಿ, ರಾಜ್ಯ ಸಾರಿಗೆ ಇಲಾಖೆಯ ಇತಿಹಾಸದಲ್ಲೇ ಹೊಸ ರೆರ್ಕಾಡ್ ನಿರ್ಮಿಸಲಿದೆ.
ಇನ್ನೂ ಈ 500 ಕೋಟಿಯ ಸಂಭ್ರಮಾಚರಣೆಯನ್ನು ಅದ್ದೂರಿಯಾಗಿ ಆಚರಿಸಲು ಸಾರಿಗೆ ಇಲಾಖೆ ಸಿದ್ಧತೆ ನಡೆಸಿದೆ. ಪ್ರಮುಖವಾಗಿ 500ನೇ ಟಿಕೆಟ್ ಪಡೆದ ಮಹಿಳೆಗೆ ಲಕ್ಕಿ ಪ್ರೈಸ್ ಸಿಗಲಿದೆ. ಈ ಶಕ್ತಿಯೋತ್ಸವವನ್ನು ಎಲ್ಲಾ ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲಿ ಗ್ಯಾರಂಟಿ ಸಮಿತಿ ಹಾಗೂ ಸಾರಿಗೆ ಇಲಾಖೆಯು ಆಚರಿಸಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಇನ್ನೂ ಈ ಶಕ್ತಿ ಯೋಜನೆಯಿಂದ ಧಾರ್ಮಿಕ ಕ್ಷೇತ್ರಗಳತ್ತ ಭಕ್ತಾದಿಗಳು ಹರಿದು ಬರುತ್ತಿದ್ದು, ಮುಜರಾಯಿ ಇಲಾಖೆಯ ಖಜಾನೆ ತುಂಬಿಸುತ್ತಿದೆ. ಕಾಂಗ್ರೆಸ್ ಸರ್ಕಾರ ಇರುವವರೆಗೂ ಶಕ್ತಿ ಯೋಜನೆ ಇರಲಿದೆ ಎಂದು ಸಾರಿಗೆ ಸಚಿವರು ಭರವಸೆ ನೀಡಿದ್ದಾರೆ.ಇದನ್ನೂ ಓದಿ: ಬಿಸಿನೀರು ಕುಡಿಯುವಾಗಲೇ ಹೃದಯಾಘಾತ – ಕುಸಿದು ಬಿದ್ದು ವ್ಯಕ್ತಿ ಸಾವು