ಮುಂಬೈ: ಮುಂಬೈನ ಇಬ್ಬರು ಹದಿಹರೆಯದವರ ನಡುವಿನ ಸಲಿಂಗ ಸಂಬಂಧವು ಭೀಕರ ಹತ್ಯೆಯಲ್ಲಿ ಕೊನೆಗೊಂಡಿದೆ.
ಆರೋಪಿಯು ತನ್ನ 16 ವರ್ಷದ ಸಲಿಂಗಿಗೆ ತಂಪು ಪಾನೀಯ ನೀಡಿದ್ದಾನೆ. ಅಪ್ರಾಪ್ತ ವಿಷದಿಂದ ಸಾವನ್ನಪ್ಪಿದ್ದಾನೆ. ಹತ್ಯೆಗೈದ 19 ವರ್ಷದ ಆರೋಪಿಯನ್ನು ಬಂಧಿಸಲಾಗಿದೆ.
ಜೂ.29 ರಂದು ಇಬ್ಬರೂ ತಮ್ಮ ಮನೆಯಿಂದ ಹೊರ ಹೋಗಿದ್ದರು ಎಂದು ಸಂತ್ರಸ್ತನ ತಂದೆ ತಮ್ಮ ದೂರಿನಲ್ಲಿ ಹೇಳಿದ್ದಾರೆ. ನನ್ನ ಮಗ ಆ ರಾತ್ರಿ ವಾಪಸ್ ಬರಲಿಲ್ಲ. ಹುಡುಕಾಟ ನಡೆಸಿದೆವು. ಇಬ್ಬರೂ ಎಲ್ಲಿದ್ದಾರೆಂಬುದನ್ನು ತಿಳಿದುಕೊಂಡು ಸ್ಥಳಕ್ಕೆ ಹೋಗಿ ನೋಡಿದೆವು. ಅಲ್ಲಿ ನನ್ನ ಮಗ ಹಾಸಿಗೆಯಲ್ಲಿ ಬಿದ್ದಿದ್ದ. ಆತನ ಪಕ್ಕದಲ್ಲಿ ಸ್ನೇಹಿತ ಕುಳಿತಿದ್ದ ಎಂದು ತಿಳಿಸಿದ್ದಾರೆ.
ಆರೋಪಿಯು ತನ್ನ ಸಲಿಂಗಿ ಸಂಬಂಧಿಗೆ ತಂಪು ಪಾನೀಯ ನೀಡಿದ್ದ. ಅದನ್ನು ಕುಡಿದು ವಾಂತಿ ಮಾಡಿಕೊಳ್ಳಲು ಪ್ರಾರಂಭಿಸಿದ. ಕೊನೆಗೆ ಮೃತಪಟ್ಟಿದ್ದಾನೆ ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ. ವಿಧಿವಿಜ್ಞಾನ ವರದಿ ಇನ್ನಷ್ಟೇ ಬರಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತನ ತಂದೆಯ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಸುಮಾರು ನಾಲ್ಕು ತಿಂಗಳ ಹಿಂದೆ ನನ್ನ ಮಗನನ್ನು ನಾಗ್ಪುರಕ್ಕೆ ಕರೆದೊಯ್ದಿದ್ದ. ಅವರು ನಮಗೆ ಮಾಹಿತಿ ನೀಡಿರಲಿಲ್ಲ. ಸ್ನೇಹಿತನಿಂದ ದೂರ ಇರುವಂತೆ ನನ್ನ ಮಗನಿಗೆ ತಿಳಿಸಿದ್ದೆ. ಆಗ ನನ್ನ ಮಗ ಆತನನ್ನು ಭೇಟಿಯಾಗುವುದನ್ನು ನಿಲ್ಲಿಸಿದ. ಈ ಬಗ್ಗೆ ಅಸಮಾಧಾನಗೊಂಡ ಆರೋಪಿ ಕೊಲೆಗೆ ಸಂಚು ರೂಪಿಸಿದ್ದ. ನನ್ನ ಮಗನಿಗೆ ವಿಷಪೂರಿತ ತಂಪು ಪಾನೀಯ ನೀಡಿದ್ದಾನೆಂದು ದೂರಿನಲ್ಲಿ ಆರೋಪಿಸಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.