ಬೆಂಗಳೂರು: ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ (Shalini Rajneesh) ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕೆ ಬಿಜೆಪಿ ಪರಿಷತ್ ಸದಸ್ಯ ರವಿಕುಮಾರ್ (BJP MLC Ravikumar) ವಿರುದ್ಧ ವಿಧಾನಸೌದ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಜೆಪಿನಗರದ ನಿವಾಸಿಯಾಗಿರುವ ನಂದಾದೀಪಾ ಮಹಿಳಾ ಸಂಘದ ಅಧ್ಯಕ್ಷೆ ನಾಗರತ್ನ ಅವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಬಿಎನ್‌ಎಸ್ ಸೆಕ್ಷನ್ 351(3)(ಅನೈತಿಕತೆಯ ಆರೋಪ), 75(3) (ಅಶ್ಲೀಲ ಹೇಳಿಕೆ), 79(ಮಹಿಳೆಯ ಮಾನಕ್ಕೆ ಕುಂದು ತರುವ ಉದ್ದೇಶದಿಂದ ಪ್ರಯೋಗಿಸಲಾದ ಪದ) ಅಡಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಹಾಸನ| ಪತ್ನಿಯನ್ನು ಕೊಂದು ಹೃದಯಾಘಾತವಾಗಿದೆ ಎಂದು ಬಿಂಬಿಸಿದ್ನಾ ಪತಿ?
ದೂರಿನಲ್ಲಿ ಏನಿದೆ?
ನಾನು ನಂದಾದೀಪಾ ಮಹಿಳಾ ಸಂಘದ ಅಧ್ಯಕ್ಷಿಯಾಗಿರುತ್ತೇನೆ. ಜುಲೈ 1 ರಂದು ಬಿಜೆಪಿ ನಾಯಕರು ಮಹಾತ್ಮ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿ ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ ರವಿಕುಮಾರ್ ಅವರು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಶ್ರೀಮತಿ, ಶಾಲಿನಿ ರಜಿನೀಶ್ ಅವರನ್ನು ಅಸಭ್ಯ ರೀತಿಯಲ್ಲಿ “ಅವರು ರಾತ್ರಿ ಸರ್ಕಾರಕ್ಕೆ ಹಗಲು ಸಿಎಂಗೆ ಕೆಲಸ ಮಾಡುತ್ತಾರೆಂದು” ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದು ಟಿವಿಯಲ್ಲಿ ಪ್ರಸಾರವಾಗಿತ್ತು. ಇದನ್ನೂ ಓದಿ: ಎಂಎಲ್‌ಸಿ ರವಿಕುಮಾರ್ ಮೇಲೆ ನಿಯಮಾವಳಿಗಳ ಪ್ರಕಾರ ಕ್ರಮ – ಹೊರಟ್ಟಿ
ಟಿವಿಯಲ್ಲಿ ಬಂದ ಸುದ್ದಿ ನೋಡಿ ನನಗೆ ನೋವುಂಟಾಗಿದ್ದು, ಅವರ ಹೇಳಿಕೆಯು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಆಗೌರವ ತೋರಿದಂತಾಗಿದೆ. ಶಾಲಿನಿ ರಜನೀಶ್ ಅವರ ಗೌರವಕ್ಕೆ ಕುಂದುಂಟು ಮಾಡಿ ಇಡಿ ಮಹಿಳಾ ಕುಲಕ್ಕೆ ಆಗೌರವ ತೋರಿರುತ್ತಾರೆ. ಇವರ ಮಾತು ಲೈಂಗಿಕ ಅರ್ಥ ಬರುವಂತಹ ಹೇಳಿಕೆಯಾಗಿದ್ದು ಮುಖ್ಯ ಕಾರ್ಯದರ್ಶಿರವರ ಖ್ಯಾತಿಗೆ ಹಾನಿ ಉಂಟು ಮಾಡಿದೆ. ರವಿಕುಮಾರ್ ಹೇಳಿಕೆಯಿಂದ ಮಹಿಳೆ ಹಾಗೂ ಮಹಿಳಾ ಸಮಾಜಕ್ಕೂ ಆಗೌರವ ಉಂಟಾಗಿದ್ದು, ಅವರ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ಮನವಿ ಮಾಡುತ್ತಿದ್ದೇನೆ.