ಅತಿರೇಖದ ಅಭಿಮಾನ ಎಂತಹ ಅನಾಹುತಕ್ಕೀಡುಮಾಡುತ್ತದೆ ಅನ್ನೋದಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಐಪಿಎಲ್ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತ ಪ್ರಕರಣವೇ (Chinnaswamy Stampede Case) ಸ್ಪಷ್ಟ ನಿದರ್ಶನವಾಗಿದೆ.
18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (IPL) ರಾಯಲ್ ಚಾಜೆಂಜರ್ಸ್ ಬೆಂಗಳೂರು (RCB) ತಂಡ ಅಭಿಮಾನಿಗಳ ನಿರೀಕ್ಷೆಯಂತೆ 18 ವರ್ಷಗಳ ಕಠಿಣ ತಪಸ್ಸಿನ ಬಳಿಕ ಗೆದ್ದುಕೊಂಡಿತು. ಆ ದಿನ ಇಡೀ ರಾತ್ರಿ ಅಭಿಮಾನಿಗಳು ಸಂಭ್ರಮದಲ್ಲಿ ಮಿಂದೇಳುತ್ತಿದ್ದರು. ಕೆಲವರಂತೂ ಹುಚ್ಚೆದ್ದು ಕುಣಿಯುತ್ತಿದ್ದರು, ಆದ್ರೆ ಅಭಿಮಾನಿಗಳ ಈ ಖುಷಿ ಒಂದು ದಿನವೂ ಉಳಿಯಲಿಲ್ಲ. ಆರ್‌ಸಿಬಿ ತಂಡವನ್ನು ಸನ್ಮಾನಿಸುವ ಸಂಭ್ರಮಾಚರಣೆ ಕಾರ್ಯಕ್ರಮವು ಸೂತಕವಾಗಿ ಪರಿವರ್ತನೆಯಾಗಿತ್ತು. ಏಕೆಂದ್ರೆ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಕಾಲ್ತುಳಿತದಲ್ಲಿ 11 ಅಭಿಮಾನಿಗಳು ಸಾವನ್ನಪ್ಪಿದ್ದರು. ಇದು ರಾಷ್ಟ್ರಮಟ್ಟದಲ್ಲೂ ಸದ್ದು ಮಾಡಿತ್ತು. ಪ್ರಧಾನಿ ಮೋದಿ, ರಾಷ್ಟ್ರಪತಿಗಳೂ ಸಂತಾಪ ಸೂಚಿಸಿದ್ದರು. ಇನ್ಮುಂದೆ ಇಂತಹ ದುರಂತಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಎಲ್ಲೆಡೆ ಕೇಳಿಬಂದಿತ್ತು. ಇದೀಗ ಎಚ್ಚೆತ್ತುಕೊಂಡಿರುವ ಪೊಲೀಸ್ ಇಲಾಖೆ ಸಾರ್ವಜನಿಕ ಸಮಾರಂಭಗಳಲ್ಲಿ ಜನಸಂದಣಿ ನಿಯಂತ್ರಣಕ್ಕಾಗಿ ಹೊಸ ಪ್ರಮಾಣಿಕೃತ ಕಾರ್ಯಾಚರಣೆ ವಿಧಾನ (SOP)ವನ್ನು ರೂಪಿಸಿ ಅನುಷ್ಠಾನಗೊಳಿಸಿದೆ. ಈ ಬಗ್ಗೆ ಸುತ್ತೋಲೆ ಹೊರಡಿಸಿದ್ದು, ಜನಸಂದಣಿ ನಿರ್ವಹಣೆಗಾಗಿ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಎಸ್‌ಒಪಿಯಲ್ಲಿ ತಿಳಿಸಲಾಗಿದೆ.
ಮಾರ್ಗಸೂಚಿಯ ಮುಖ್ಯ ಉದ್ದೇಶವೇನು?
ಹಬ್ಬಗಳು, ರ‍್ಯಾಲಿಗಳಿಂದ ಹಿಡಿದು ಕ್ರೀಡೆಗಳು, ಸಾರ್ವಜನಿಕ ಸಮಾರಂಭಗಳಲ್ಲಿ ಜನಸಂದಣಿ ನಿರ್ವಹಣೆಗೆ ಸೂಕ್ತ ಕಾರ್ಯತಂತ್ರದ ಅಗತ್ಯವಿದೆ. ಸಾರ್ವಜನಿಕರ ಸುರಕ್ಷತೆಗಾಗಿ ಕಾನೂನು ಮತ್ತು ಸುವ್ಯವಸ್ಥೆ (Law And Order) ಕಾಪಾಡಲು, ಜನಸಂದಣಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದು, ಅಪಾಯಗಳನ್ನು ಕಡಿಮೆ ಮಾಡುವುದು, ಸಮನ್ವಯತೆ ಹೆಚ್ಚಿಸುವುದು, ತುರ್ತು ಪರಿಸ್ಥಿತಿಗಳಿಗೆ ತ್ವರಿತ ಪ್ರತಿಕ್ರಿಯೆಗಳನ್ನು ಖಚಿತಪಡಿಸಿಕೊಳ್ಳುವುದು. ಅಲ್ಲದೇ ದೊಡ್ಡ ದೊಡ್ಡ ಸಭೆಗಳನ್ನು ಒಳಗೊಂಡ ಕಾರ್ಯಕ್ರಮಗಳಿಗೆ ಜನಸಂದಣಿ ನಿಯಂತ್ರಣ ಕ್ರಮಗಳನ್ನು ಯೋಜಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
ಮೊದಲು ಮಾಡಬೇಕಾದ್ದು ಏನು?
* ಯಾವುದೇ ಸಭೆ, ಸಮಾರಂಭ, ರ‍್ಯಾಲಿ, ಮೆರವಣಿಗೆಗೆ ಮುನ್ನ ಜೀವ ಸುರಕ್ಷತೆ, ಮಾನವ ಹಕ್ಕುಗಳ ರಕ್ಷಣೆ, ಸಾರ್ವಜನಿಕ ಆಸ್ತಿ ಹಾನಿ ತಡೆಗಟ್ಟುವಿಕೆ ಹಾಗೂ ಸಂಭಾವ್ಯ ಸಂಘರ್ಷಗಳ ಉಲ್ಬಣ ಕಡಿಮೆ ಮಾಡುವ ಕೆಲಸಗಳಿಗೆ ಆದ್ಯತೆ ನೀಡಬೇಕು.
* ಆಧುನಿಕ ಸಮಾರಂಭಗಳು ಸ್ವಯಂ ಪ್ರೇರಿತ ಮತ್ತು ಸೋಷಿಯಲ್ ಮೀಡಿಯಾ ಪ್ರೇರಿತವಾಗಿರುತ್ತವೆ. ಹಾಗಾಗಿ ಹೊಂದಾಣಿಕೆ ತಂತ್ರಗಳು ಅಗತ್ಯವಿರುತ್ತವೆ.
* ಕಾರ್ಯಕ್ರಮದ ಮುಂದಿನ ಯೋಜನೆಗಳೇನು? ಎಂಬುದನ್ನು ಪಾಲುದಾರರೊಂದಿಗೆ ಚರ್ಚಿಸಿ ಎಷ್ಟು ಭದ್ರತೆ ನಿಯೋಜಿಸಬೇಕು ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.
ಪೂರ್ವ ತಯಾರಿ ಹೇಗಿರಬೇಕು?
* ಯಾವುದೇ ಬೃಹತ್ ಸಮಾರಂಭಗಳು ಆಯೋಜನೆಗೊಳ್ಳುತ್ತಿದ್ದಂತೆ ಪೂರ್ವತಯಾರಿ ಮಾಡಿಕೊಳ್ಳುವುದು ಅತ್ಯವಶ್ಯಕ. ಹಾಗಾಗಿ ಅಪಾಯ ಸಾಧ್ಯತೆಗಳನ್ನು ಮೌಲ್ಯಮಾಪನ ಮಾಡಬೇಕಾಗುತ್ತದೆ.
* ಸಾರ್ವಜನಿಕ ಕಾರ್ಯಕ್ರಮಕ್ಕೂ ಮುನ್ನ ಸ್ಥಳವನ್ನ ಸಂಪೂರ್ಣ ಪರಿಶೀಲನೆ ನಡೆಸಬೇಕು. ಆಯೋಜಕರ ಸಹಯೋಗದಿಂದಿಗೆ ವಿವರವಾದ ಯೋಜನೆಗಳನ್ನು ರೂಪಿಸಬೇಕು. ಜನ ಸಮೂಹದ ವರ್ತನೆಯನ್ನು ಪರಿಶೀಲಿಸಬೇಕು. ನಿರ್ಗಮನ ಮಾರ್ಗಗಳನ್ನು ಗುರುತಿಸುವ ಮೂಲಕ ಲಭ್ಯವಿರುವ ಪರಿಕರಗಳನ್ನ ಬಳಸಿಕೊಂಡು ಸಂಭಾವ್ಯ ಅವಘಡ ತಡೆಯಬೇಕು.
* ಸ್ಥಳ ಸಾಮರ್ಥ್ಯದ ಮಿತಿಗಳು, ಪ್ರವೇಶ ನಿರ್ಗಮನ ಮಾರ್ಗಗಳು, ತುರ್ತು ಸ್ಥಳಾಂತರಿಸುವ ಯೋಜನೆಗಳು ಮತ್ತು ಸಂವಹನ ಮೂಲ ಸೌಕರ್ಯ ಸೇರಿ ಸುರಕ್ಷತಾ ಮಾನದಂಡಗಳನ್ನು ಖಚಿತಪಡಿಸಿಕೊಳ್ಳಬೇಕು.
* ಸುರಕ್ಷತಾ ಪರಿಶೀಲನೆಯಲ್ಲಿ ಸೂಕ್ತವಲ್ಲದ ಸ್ಥಳಗಳಲ್ಲಿ ಬೃಹತ್ ಕಾರ್ಯಕ್ರಮಗಳಿಗೆ ಅನುಮತಿ ನೀಡಲು ನಿರಾಕರಿಸಬೇಕು.
ಆಯೋಜಕರೊಂದಿಗೆ ಸಮನ್ವಯ
* ಪೊಲೀಸರು ಕಾರ್ಯಕ್ರಮದ ನಿರ್ಣಾಯಕ ವಿವರ ಸಂಗ್ರಹಿಸಲು ಆಯೋಜಕರೊಂದಿಗೆ ಸಂಪರ್ಕ ಸಾಧಿಸಬೇಕು.
* ಕಾರ್ಯಕ್ರಮದ ಸ್ವರೂಪ, ದಿನಾಂಕ, ಸಮಯ, ನಿರೀಕ್ಷಿತ ಜನ, ಆಗಮನ ಮತ್ತು ನಿರ್ಗಮನಗಳ ವ್ಯವಸ್ಥೆ ಎಲ್ಲರದ ಬಗ್ಗೆ ಮಾಹಿತಿ ಪಡೆಯಬೇಕು.
* ಜೊತೆಗೆ ಅಗ್ನಿಶಾಮಕ, ಆರೋಗ್ಯ ಸೇರಿ ಇತರೇ ಸಂಬಂಧಿತ ಇಲಾಖೆಗಳೊಂದಿಗೆ ಸಮನ್ವಯತೆ ಸಾಧಿಸಭೇಕು. ತುರ್ತು ಸೇವೆಗಳು ಮತ್ತು ಪರಸ್ಪರ ಸಹಾಯ ಲಭ್ಯತೆ ಬಗ್ಗೆ ಪರಿಶೀಲಿಸಬೇಕು.
ಜನಸಂದಣಿ ಮತ್ತು ನಿರ್ವಹಣಾ ಯೋಜನೆ ಅಭಿವೃದ್ಧಿ ಹೇಗೆ?
* ಬೃಹತ್ ಕಾರ್ಯಕ್ರಮಗಳಿಗೆ ಭದ್ರತೆ ಒದಗಿಸುವ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿ ಮತ್ತು ಪೊಲೀಸರಿಗೆ ಅವರ ಜವಾಬ್ದಾರಿ ಸ್ಪಷ್ಟಪಡಿಸಬೇಕು.
* ಹೆಚ್ಚಿನ ಜನಸಂದಣಿ ಇರುವ ಸ್ಥಳಗಳಲ್ಲಿ ತರಬೇತಿ ಪಡೆದ ಪೊಲೀಸರನ್ನು ನಿಯೋಜಿಸಬೇಕು. ಅಲ್ಲದೇ ತುರ್ತು ಪ್ರತಿಕ್ರಿಯೆ ಯೋಜನೆಗಳು, ಸ್ಥಳಾಂತರಿಸುವ ಮಾರ್ಗಗಳು ಹಾಗೂ ವೈದ್ಯಕೀಯ ನೆರವಿಗೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕು.
* ಎಲ್ಲಾ ನಿಯೋಜಿತ ಏಜೆನ್ಸಿಗಳೊಂದಿಗೆ ಸಮನ್ವಯತೆ ಕಾಯ್ದುಕೊಳ್ಳಬೇಕು. ಪ್ರವೇಶವನ್ನು ಸುಗಮಗೊಳಿಸಲು ಡಿಜಿಟಲ್ ಟಿಕೆಟಿಂಗ್ ಮತ್ತು ಕಾಯ್ದಿರಿಸಿದ ಆಸನಗಳನ್ನು ಬಳಕೆ ಮಾಡಿಕೊಳ್ಳಬೇಕು.
ಜನಸಂದಣಿ ನಿಯತ್ರಿಸುವುದು ಹೇಗೆ?
* ಪ್ರಮುಖವಾಗಿ ಜನಸಂದಣಿ ನಿಯಂತ್ರಿಸಲು ಪ್ರವೇಶದ್ವಾರಗಳು, ನಿರ್ಗಮನ ದ್ವಾರಗಳಲ್ಲಿ ತರಬೇತಿ ಪಡೆದ ಪೊಲೀಸ್ ಸಿಬ್ಬಂದಿಯನ್ನ ನಿಯೋಜಿಸಬೇಕು. ಅದಕ್ಕೂ ಮುನ್ನ ಜನಸಂದಣಿ, ತುರ್ತು ಸಂವಹನ ಮತ್ತು ಶಿಷ್ಟಾಚಾರಗಳ ಬಗ್ಗೆ ಎಲ್ಲಾ ಸಿಬ್ಬಂದಿಗೆ ತರಬೇತಿ ನೀಡಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕು.
* ಪ್ರವೇಶ ದ್ವಾರಗಳ ಬಳಿ ಲೋಹ ಶೋಧಕಗಳು, ಕ್ಯೂಆರ್ ಕೋಡ್, ಸ್ಕ್ಯಾನಿಂಗ್, ಬಯೋಮೆಟ್ರಿಕ್ ವ್ಯವಸ್ಥೆ ಮಾಡಬೇಕು. ಸಾರ್ವಜನಿಕರು, ಸಿಬ್ಬಂದಿ, ವಿಐಪಿಗಳಿಗೆ ಪ್ರತ್ಯೇಕ ಪ್ರವೇಶ ಕಲ್ಪಿಸಬೇಕು.
* ನೂಕುನುಗ್ಗಲು ಉಂಟಾಗದಂತೆ ಸರತಿ ಸಾಲು ನಿರ್ವಹಿಸಬೇಕು. ಬ್ಯಾರಿಕೇಡ್‌ಗಳ ಬಳಕೆ, ಸೂಚನಾ ಫಲಕಗಳನ್ನು ಬಳಸಿಕೊಳ್ಳಬೇಕು. ಅಂಬುಲೆನ್ಸ್‌ಗಳ ಪಾರ್ಕಿಂಗ್ ವ್ಯವಸ್ಥೆ, ನಿಯಂತ್ರಣ ಕೊಠಡಿಯೊಂದಿಗೆ ಸಂಪರ್ಕ ಇರಿಸಿಕೊಳ್ಳಬೇಕು.
* ವಿಶೇಷ ಚೇತನರು ಪ್ರವೇಶಿಸಬಹುದಾದ ಮಾರ್ಗಗಳನ್ನು ಮೊದಲೇ ಗೊತ್ತುಪಡಿಸಬೇಕು. ಎಲ್ಲಾ ತುರ್ತು ನಿರ್ಗಮನಗಳನ್ನು ಸ್ಪಷ್ಟವಾಗಿ ಗುರುತಿಸಿ ಮತ್ತು ಅಲ್ಲಿ ಯಾವುದೇ ಅಡೆತಡೆಗಳಿಲ್ಲದಂತೆ ನೋಡಿಕೊಳ್ಳಬೇಕು.
* ಸಾರ್ವಜನಿಕ ವಿಳಾಸ ವ್ಯವಸ್ಥೆಗಳು ಎಲ್ಲಾ ಪ್ರಮುಖ ಅಂಶಗಳನ್ನು ಒಳಗೊಂಡಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.
ಜವಾಬ್ದಾರಿ ಹಂಚಿಕೆ ಹೇಗಿರಬೇಕು?
* ಕಾಲ್ತುಳಿತದಂತಹ ಪ್ರಕರಣಗಳನ್ನು ತಪ್ಪಿಸಲು ಜವಾಬ್ದಾರಿ ಹಂಚಿಕೆ ಮತ್ತು ಆಜ್ಞೆಯ ರಚನೆ (ಕಮಾಂಡ್ ಸ್ಟ್ರಕ್ಚರ್) ಮುಖ್ಯವಾಗುತ್ತದೆ. ಹಾಗಾಗಿ ಪ್ರವೇಶ, ನಿರ್ಗಮನ ಮತ್ತು ಜನಸಂದಣಿ ಹರಿವು ಹೆಚ್ಚಿರುವ ನಿರ್ದಿಷ್ಟ ವಲಯಗಳಿಗೆ ಅಧಿಕಾರಿಗಳನ್ನು ನಿಯೋಜಿಸಬೇಕು.
* ಸಮಸ್ಯೆಗಳು ಉಲ್ಪಣವಾಗದಂತೆ ಸ್ಪಷ್ಟ ನಿರ್ದೇಶನಗಳನ್ನ ನೀಡಬೇಕು.
* ಪೊಲೀಸ್ ಆಯುಕ್ತರು/ಎಸ್ಪಿ ಅನುಮೋದಿಸಿದ ಲಿಖಿತ ಕಾರ್ಯಾಚರಣೆಯ ಯೋಜನೆಯನ್ನು ಅಭಿವೃದ್ಧಿಪಡಿಸಿ ಪ್ರಸಾರ ಮಾಡಬೇಕು.
* ಸಿಬ್ಬಂದಿ ನಿಯೋಜನೆ, ಬಾಹ್ಯ ಸಂಪರ್ಕ, ಹವಾಮಾನ ಮೌಲ್ಯಮಾಪನ, ಸಾರಿಗೆ ಲಾಜಿಸ್ಟಿಕ್ಸ್, ಮಾಧ್ಯಮ ಪ್ರೋಟೋಕಾಲ್‌ಗಳು ಇತ್ಯಾದಿಗಳನ್ನು ಒಳಗೊಂಡಿರಬೇಕು.
ತುರ್ತು ಸಿದ್ಧತೆ ಹೇಗಿರಬೇಕು?
* ಬೆಂಕಿ, ಕಾಲ್ತುಳಿತ ಇನ್ನಿತರ ಅವಘಡಗಳ ನಿಯಂತ್ರಣಕ್ಕೆ ತುರ್ತು ಸಿದ್ಧತೆ ಮಾಡಿಕೊಳ್ಳಬೇಕು, ಇದಕ್ಕಾಗಿ ತರಬೇತಿ ಮತ್ತು ಅಣುಕು ಪ್ರದರ್ಶನ (ಸಿಮ್ಯುಲೇಷನ್ ಡ್ರಿಲ್) ಕೈಗೊಳ್ಳುವ ಮೂಲಕ ರಕ್ಷಣಾ ತಂಡಗಳ ಜವಾಬ್ದಾರಿಗಳನ್ನು ಮೊದಲೇ ಗುರುತಿಸಬೇಕು.
* ಯಾವುದೇ ಘಟನೆಯ ಸಮಯದಲ್ಲಿ ಪೊಲೀಸರು ಅನಗತ್ಯ ತಕರಾರುಗಳನ್ನು ತಪ್ಪಿಸಿ ಸ್ಥಳೀಯರ ಸುರಕ್ಷತೆಗೆ ಆದ್ಯತೆ ನೀಡಬೇಕು.
ಜನಸಂದಣಿ ಪ್ರೋಟೋಕಾಲ್
* ಹಿಂಸಾತ್ಮಕ ಅಥವಾ ಕಾರ್ಯಕ್ರಮಕ್ಕೆ ಅಡ್ಡಿಪಡಿಸುವ ವ್ಯಕ್ತಿಗಳನ್ನು ಮಾತ್ರ ಪ್ರತ್ಯೇಕಿಸಿ ಬಂಧಿಸಬೇಕು.
* ತುರ್ತು ನಿರ್ಗಮನ ಮಾರ್ಗಗಳನ್ನು ಸ್ಪಷ್ಟವಾಗಿ ಗುರುತಿಸಬೇಕು ಮತ್ತು ಯಾವುದೇ ಸಂದರ್ಭದಲ್ಲೂ ಲೌಡ್ ಸ್ಪೀಕರ್‌ಗಳ ಮೂಲಕ ಸಾರ್ವಜನಿಕರಿಗೆ ಸೂಚನೆಗಳನ್ನು ನೀಡುವ ವ್ಯವಸ್ಥೆ ಹೊಂದಿರಬೇಕು.
* ಪೂರ್ಣ ಪ್ರಮಾಣದಲ್ಲಿ ಅಗತ್ಯವಿದ್ದಾಗ ಮಾತ್ರವೇ ಕನಿಷ್ಠ ಮತ್ತು ಅಗತ್ಯ ಪ್ರಮಾಣದಲ್ಲಿ ಬಲಪ್ರಯೋಗ ಮಾಡಬೇಕು.
* ಜನಸಂದಣಿ ನಿಯಂತ್ರಿಸಲು ಅಥವಾ ಚದುರಿಸಲು 3 ಬಾರಿ ಎಚ್ಚರಿಕೆ ನೀಡಿದ ನಂತರವೇ ಪೊಲೀಸ್ ಸಿಬ್ಬಂದಿ ಬಳಸಬೇಕು. ನಂತರ ಕಾನೂನು ರೀತಿಯ ಬಂಧನಕ್ಕೆ ಮುಂದಾಗಬೇಕು.
* ಸಮಯೋಚಿತವಾಗಿ ಕ್ಷೇತ್ರ ಅಧಿಕಾರಿಗಳ ಜೊತೆಗೆ ನಿರಂತರವಾಗಿ ಮೇಲ್ವಿಚಾರಣೆ ಮಾಡಬೇಕು.
ಅರೆಸ್ಟ್ ಮಾಡಲು ಯಾರಿಗೆ ಅವಕಾಶ?
* ಇಂತಹ ಸಂದರ್ಭದಲ್ಲಿ ಮುಂಚಿತವಾಗಿಯೇ ನಿಯೋಜಿಸಲಾದ ತಂಡದ ಅಧಿಕಾರಿಗಳಿಗೆ ಮಾತ್ರ ಬಂಧನ ಮಾಡುವ ಅವಕಾಶವಿರುತ್ತದೆ.
* ಬಂಧಿಸಿದ ಬಳಿಕ ಆರೋಪಗಳ ಬಗ್ಗೆ ಬಂಧಿತರಿಗೆ ಮನವರಿಕೆ ಮಾಡಬೇಕು, ಶಸ್ತ್ರಾಸ್ತ್ರಗಳು ಮತ್ತು ಸಾಕ್ಷ್ಯಗಳನ್ನು ಪರಿಶೀಲಿಸಬೇಕು.
* ಜೊತೆಗೆ ಬಂಧಿತರನ್ನು ಸುರಕ್ಷಿತವಾಗಿಡಲು ಪ್ರತ್ಯೇಕ ಪ್ರದೇಶ ಗುರುತಿಸಬೇಕು.
* ಬಂಧಿತರಿಂದ ವಶಪಡಿಸಿಕೊಂಡ ಆಸ್ತಿ ಮತ್ತು ಗಾಯಗೊಂಡ ವಿವರಗಳನ್ನು ದಾಖಲಿಸಬೇಕು.
ದಾಖಲೆ ಮತ್ತು ಮೇಲ್ವಿಚಾರಣೆ ಪ್ರಕ್ರಿಯೆ ಅಗತ್ಯವೇ?
* ಭವಿಷ್ಯದ ಸುಧಾರಣೆಗಾಗಿ ಜನಸಂದಣಿಯ ಸಂಚಾರ, ತೆಗೆದುಕೊಂಡ ನಿರ್ಧಾರಗಳು ಮತ್ತು ನೀಡಿದ ಎಚ್ಚರಿಕೆಗಳನ್ನು ಆಡಿಯೋ/ವಿಡಿಯೋ ದಾಖಲೆಗಳ ಮೂಲಕ ದಾಖಲಿಸಬೇಕು.
* ಜೊತೆಗೆ ಭವಿಷ್ಯದ ಕಾರ್ಯಾಚರಣೆಗಳನ್ನು ಸುಧಾರಿಸಲು ನಿಯೋಜಿತ ಕಾರ್ಯಕ್ರಮ ನಂತರ ವಿಮರ್ಷೆ ಮಾಡಬೇಕು.
ಭಾರೀ ಜನಸಂದಣಿ ಸೇರುವ ಸಂದರ್ಭದಲ್ಲಿ ಅಹಿತಕರ ಘಟನೆಗಳು ಹಾಗೂ ಸಾವುನೋವಿಗೆ ಕಾರಣವಾಗಬಹುದಾದ ಕಾಲ್ತುಳಿತ ಸಂಭವಿಸುವುದು ಇತ್ತೀಚೆಗೆ ಹೆಚ್ಚಾಗಿದೆ. ವಿವಿಧ ಉದ್ದೇಶಗಳಿಂದ ನಡೆಯುವ ಸಮಾವೇಶಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನ ಸೇರುವುದಿದೆ. ಲಕ್ಷಾಂತರ ಮಂದಿ ಸೇರುವ ಜಾತ್ರೆಗಳು ನಾಡಿನ ವಿವಿಧ ಭಾಗಗಳಲ್ಲಿ ನಡೆಯುತ್ತವೆ. ಹೀಗಾಗಿ ಜನಸಂದಣಿ ನಿರ್ವಹಿಸುವುದರ ಜೊತೆಗೆ ದುರ್ಘಟನೆಗಳು ಸಂಭವಿಸದಂತೆ ನೋಡಿಕೊಳ್ಳಲು ಪೊಲೀಸ್ ಇಲಾಖೆ ಹೊಸ ʻಎಸ್‌ಒಪಿʼ ಜಾರಿಗೆ ತಂದಿರುವುದು ಮಹತ್ವದ ಕ್ರಮ. ಆದರೆ, ಈ ಮಾರ್ಗಸೂಚಿ ಕಡತದಲ್ಲಷ್ಟೇ ಉಳಿಯದೆ ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರುವ ಇಚ್ಛಾಶಕ್ತಿಯನ್ನು ಇಲಾಖೆ ಪ್ರದರ್ಶಿಸಬೇಕು ಅನ್ನೋದು ಜನರ ಆಶಯ.