-ಪ್ರತಿನಿತ್ಯ 2 ಲಕ್ಷ ಪ್ರಯಾಣಿಕರ ಹೆಚ್ಚಳ, 35 ಲಕ್ಷ ರೂ. ಹೆಚ್ಚುವರಿ ಆದಾಯ
ಬೆಂಗಳೂರು: ಬಿಎಂಆರ್‌ಸಿಎಲ್ (BMRCL) ದರ ಏರಿಕೆ ಮಾಡಿದ್ದು, ನಮ್ಮ ಮೆಟ್ರೋಗೆ (Namma Matro) ಅನೂಕೂಲವಾಗುವುದಕ್ಕಿಂತ ಹೆಚ್ಚಾಗಿ ಬಿಎಂಟಿಸಿಗೆ (BMTC) ಭಾರಿ ಉಪಯೋಗ ಆಗಿದೆ. ಈ ಮೂಲಕ ಆದಾಯ 7.25 ಕೋಟಿ ರೂ.ಗೆ ಏರಿಕೆಯಾಗಿದೆ.
ಹೌದು, ಮೆಟ್ರೋ, ಬಿಎಂಟಿಸಿ ಎರಡು ಕೂಡ ಬೆಂಗಳೂರಿನ (Bengaluru) ಸಂಚಾರ ಜೀವನಾಡಿ. ನಿತ್ಯ ನಗರದ ಲಕ್ಷಾಂತರ ಜನ ಬಳಕೆ ಮಾಡುವ ಸಾರಿಗೆ ಸಂಪರ್ಕ. ದಿನನಿತ್ಯ ಸುಮಾರು 50 ಲಕ್ಷಕ್ಕೂ ಹೆಚ್ಚು ಜನರು ಈ ಎರಡು ಸಾರಿಗೆಗಳನ್ನು ಬಳಕೆ ಮಾಡುತ್ತಾರೆ. ಆದರೆ ಈ ಸಾರಿಗೆ ನಡುವೆ ನಗರದ ಹಲವು ಕಡೆ ಸಾಮಾನ್ಯವಾಗಿ ಪೈಪೋಟಿ ಇದೆ. ಆದರೆ ಕಳೆದ ನಾಲ್ಕೈದು ತಿಂಗಳ ಹಿಂದೆ ನಮ್ಮ ಮೆಟ್ರೋ ಟಿಕೆಟ್ ದರ (Metro Ticket Fare) ಏರಿಕೆ ಮಾಡಿತ್ತು. ಇದ್ರಿಂದ ಕೊಂಚ ಹಿನ್ನಡೆ ಉಂಟಾಗಿದ್ದು, ಬಿಎಂಟಿಸಿಗೆ ಭಾರಿ ಲಾಭ ಬಂದಿದೆ.ಇದನ್ನೂ ಓದಿ: ನಂದಿಬೆಟ್ಟದಲ್ಲಿಂದು ಸಚಿವ ಸಂಪುಟ ಸಭೆ – ಬಯಲು ಸೀಮೆ ಜಿಲ್ಲೆಗಳಿಗೆ ಸಿಗುತ್ತಾ ಭರಪೂರ ಕೊಡುಗೆ?
ಕಳೆದ ಫೆಬ್ರವರಿಯಲ್ಲಿ ದರ ಪರಿಷ್ಕರಣೆಯಾಗಿ ಮೆಟ್ರೋ ದರ ಹೆಚ್ಚಳವಾಗಿತ್ತು. ಇದರಿಂದ ಬಿಎಂಆರ್‌ಸಿಎಲ್‌ಗೆ ಆದಾಯ ಹೆಚ್ಚಳವಾಗಿದ್ದರೂ ಕೂಡ ರೈಡರ್ ಶಿಪ್‌ನಲ್ಲಿ ಇಳಿಮುಖ ಉಂಟಾಗಿದೆ. ಹೀಗಾಗಿ ಮೆಟ್ರೋ ಬಿಟ್ಟ ಪ್ರಯಾಣಿಕರು ಬಿಎಂಟಿಸಿಯನ್ನು ಆಯ್ಕೆ ಮಾಡಿಕೊಂಡಿದ್ದರು. ಜೊತೆಗೆ ಕನೆಕ್ಟಿವಿಟಿ ವಿಚಾರದಲ್ಲಿ ಕೂಡ ಬಿಎಂಟಿಸಿ ಮುಂದೆ ಇದ್ದ ಕಾರಣ ಅನೇಕರು ಮತ್ತೆ ಬಿಎಂಟಿಸಿಯತ್ತ ಮುಖ ಮಾಡಿದ್ದರು. ಪರಿಣಾಮ ನಿತ್ಯ ಸಂಚಾರ ಮಾಡುತ್ತಿದ್ದ ಪ್ರಯಾಣಿಕರಿಗಿಂತ ಕಳೆದ ಮೂರ್ನಾಲ್ಕು ತಿಂಗಳಿನಿಂದ ಬಿಎಂಟಿಸಿಗೆ ನಿತ್ಯ 2 ಲಕ್ಷ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ.
ಇನ್ನೂ ಈ ಹಿಂದೆ ನಿತ್ಯ ಬಿಎಂಟಿಸಿಯಲ್ಲಿ ಸರಾಸರಿ 40 ಲಕ್ಷ ಪ್ರಯಾಣಿಕರ ಓಡಾಟ ಇತ್ತು. ನಿತ್ಯದ ಆದಾಯ 6.90 ಕೋಟಿ ರೂ. ಇತ್ತು. ಆದರೆ ಮೆಟ್ರೋ ದರ ಏರಿಕೆ ಬಳಿಕ ನಿತ್ಯ ಸರಾಸರಿ 42 ಲಕ್ಷ ಪ್ರಯಾಣಿಕರು ಹಾಗೂ ಆದಾಯದಲ್ಲಿ 7.25 ಕೋಟಿ ರೂ.ಗೆ ಏರಿಕೆ ಆಗಿದೆ. ಅಷ್ಟೇ ಅಲ್ಲ ಈ ಹಿಂದೆ ನಿತ್ಯ ನಗರದಲ್ಲಿ 6,900 ಬಸ್‌ಗಳಿಂದ 54 ಸಾವಿರ ಟ್ರಿಪ್ ಮಾಡಲಾಗುತ್ತಿತ್ತು. ಸದ್ಯ ಹೆಚ್ಚುವರಿ 2 ಸಾವಿರ ಡಿಪೋದಲ್ಲಿದ್ದ ಬಸ್‌ಗಳನ್ನ ಕೂಡ ರಸ್ತೆಗಿಳಿಸುವ ಮೂಲಕ 54 ಸಾವಿರ ಇದ್ದ ಟ್ರಿಪ್‌ಗಳನ್ನ 8 ಸಾವಿರ ಹೆಚ್ಚಳ ಮಾಡಿ, 62 ಸಾವಿರಕ್ಕೆ ಏರಿಕೆ ಮಾಡಲಾಗಿದೆ. ಪ್ರಯಾಣಿಕರ ಸಂಖ್ಯೆ ಏರಿಕೆಯಾದ ಕಾರಣ ಸದ್ಯ ಬಿಎಂಟಿಸಿ ಈ ನಿರ್ಧಾರಕ್ಕೆ ಬಂದಿದ್ದು, ಇದು ಮತ್ತಷ್ಟು ಲಾಭ ಹೆಚ್ಚಳಕ್ಕೂ ಕಾರಣವಾಗಿದೆ.
ಒಟ್ಟಾರೆ ಬಿಎಂಟಿಸಿ ಮೆಟ್ರೋ ದರ ಏರಿಕೆಯ ಲಾಭ ಪಡೆದು ಆದಾಯವನ್ನು ಹೆಚ್ಚಳ ಮಾಡಿಕೊಂಡಿದೆ. ಮೆಟ್ರೋದ ಉಳಿದ ಮಾರ್ಗಗಳು ಓಪನ್ ಆದ ಬಳಿಕವೂ ಹೀಗೆ ಪರಿಸ್ಥಿತಿ ಮುಂದುವರೆಯುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.ಇದನ್ನೂ ಓದಿ: ಮಂಗಳೂರಿನ ಸಹಕಾರಿ ಬ್ಯಾಂಕ್‌ನಲ್ಲಿ `ಗೋಲ್ಡ್’ ಗೋಲ್‌ಮಾಲ್ – ಗ್ರಾಹಕರು ಅಡವಿಟ್ಟ ಚಿನ್ನವನ್ನೇ ಎಗರಿಸಿದ ಕ್ಯಾಷಿಯರ್