– ದಕ್ಷಿಣ ಭಾರತದ ಸ್ಫೋಟಗಳ ಪ್ರಮುಖ ಆರೋಪಿ ಸೇರಿ ಇಬ್ಬರ ಅರೆಸ್ಟ್
ಚೆನ್ನೈ: ಬೆಂಗಳೂರು ನಗರ ಸೇರಿ ದಕ್ಷಿಣ ಭಾರತದ ಹಲವು ಬಾಂಬ್ ಸ್ಫೋಟಗಳ (Bengaluru Blast) ಪ್ರಮುಖ ಸೂತ್ರಧಾರಿಯನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ (Tamil Nadu) ನಾಗೂರು ನಿವಾಸಿ ಅಬೂಬಕರ್ ಸಿದ್ದಿಕ್ (60) ಬಂಧಿತ ಉಗ್ರ.
1995ರಿಂದ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ತಮಿಳುನಾಡು ಪೊಲೀಸರು ಆಂಧ್ರಪ್ರದೇಶದ ಅನ್ನಮಯ ಜಿಲ್ಲೆಯಲ್ಲಿ ಬಂಧಿಸಿದ್ದಾರೆ. ನಿಷೇಧಿತ ಸಂಘಟನೆಗಳಾದ ತಮಿಳುನಾಡಿದ ಅಲ್ ಉಮ್ಮ ಸೇರಿ ಹಲವು ಸಂಘಟನೆಗಳಿಗೆ ನೇಮಕಾತಿ ಮಾಡುತ್ತಿದ್ದ ಆರೋಪಿಯಾಗಿದ್ದ ಸಿದ್ದಿಕ್. ಈತನ ಜೊತೆಗಿದ್ದ ಮೊಹಮ್ಮದ್ ಅಲಿಯನ್ನು ಕೂಡಾ ಪೊಲೀಸರು ಬಂಧಿಸಿದ್ದಾರೆ. ಈತ 1999ರಿಂದ ತಲೆ ಮರೆಸಿಕೊಂಡಿದ್ದ. ಇದನ್ನೂ ಓದಿ: ಮಲ್ಲೇಶ್ವರಂ ಸ್ಫೋಟದಲ್ಲಿ ಭಾಗಿಯಾಗಿದ್ದ ಉಗ್ರನಿಂದ ಕಲಬುರಗಿ ಸೆಂಟ್ರಲ್ ಜೈಲಿನಿಂದಲೇ ಹನಿಟ್ರ್ಯಾಪ್?
ಪ್ರಕರಣಗಳು ಯಾವುವು..?
ತಮಿಳುನಾಡು, ಕರ್ನಾಟಕ ರಾಜ್ಯಗಳಲ್ಲಿ ನಡೆದ ಹಲವು ಪ್ರಕರಣಗಳಲ್ಲಿ ಸಿದ್ದಿಕ್ ಆರೋಪಿಯಾಗಿದ್ದಾನೆ. 1999ರ ಬೆಂಗಳೂರು ಸ್ಫೋಟ, 2013ರ ಬೆಂಗಳೂರಿನ ಮಲ್ಲೇಶ್ವರಂ ಬಿಜೆಪಿ ಕಚೇರಿ ಸ್ಫೋಟ, 2011ರಲ್ಲಿ ಮಾಜಿ ಉಪಪ್ರಧಾನಿ ಎಲ್.ಕೆ.ಅಡ್ವಾಣಿ ನೇತೃತ್ವದ ರಥಯಾತ್ರೆಯ ಮೇಲೆ ಮಧುರೈಯಲ್ಲಿ ನಡೆದ ಪೈಪ್ ಬಾಂಬ್ ದಾಳಿ, 1991ರ ಚೆನ್ನೈ ಹಿಂದೂ ಮುನ್ನಣಿ ಕಾರ್ಯಾಲಯದ ಮೇಲೆ ನಡೆದ ದಾಳಿಯಲ್ಲೂ ಈತ ಆರೋಪಿಯಾಗಿದ್ದ.
ಅಲ್ಲದೆ, ನಾಗೂರಿನಲ್ಲಿ ಪಾರ್ಸೆಲ್ ಬಾಂಬ್ ಸ್ಫೋಟ, 1997ರಲ್ಲಿ ಚೆನ್ನೈ, ತಿರುಚಿರಾಪಳ್ಳಿ, ಕೊಯಮತ್ತೂರು ಸೇರಿ 7 ಕಡೆ ನಡೆದ ಸ್ಫೋಟ, ಚೆನ್ನೈ ಎಗ್ಮೋರ್ ಪೊಲೀಸ್ ಕಮೀಷನರ್ ಕಚೇರಿ ಸ್ಫೋಟ, 2012ರ ವೆಲ್ಲೂರು ಅರವಿಂದ ರೆಡ್ಡಿ ಕೊಲೆ ಪ್ರಕರಣದಲ್ಲೂ ಈತನೇ ಸೂತ್ರಧಾರನಾಗಿದ್ದ ಎಂದು ತಿಳಿದು ಬಂದಿದೆ.
ರಹಸ್ಯ ಮಾಹಿತಿಯಿಂದ ಸಿಕ್ಕಿ ಬಿದ್ರು!
ಅಬೂಬಕರ್ ಸಿದ್ದಿಕ್ ಬಗ್ಗೆ ಮಾಹಿತಿ ನೀಡಿದವರಿಗೆ 5 ಲಕ್ಷ ರೂ. ಬಹುಮಾನ ನೀಡುವುದಾಗಿ ಪೊಲೀಸರು ಘೋಷಿಸಿದ್ದರು. ರಹಸ್ಯ ಮಾಹಿತಿ ಆಧರಿಸಿ ನಡೆಸಿದ ಕಾರ್ಯಾಚರಣೆಯಲ್ಲಿ ಆಂಧ್ರಪ್ರದೇಶದ ಅನ್ನಮಯ ಜಿಲ್ಲೆಯಲ್ಲಿ ಅಬೂಬಕರ್ ಸಿದ್ದಿಕ್‍ನನ್ನು ಬಂಧಿಸಿದ್ದಾರೆ. ಇವರಿಬ್ಬರನ್ನು ಶೀಘ್ರದಲ್ಲೇ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಿದ್ದಾರೆ. ಅಬೂಬಕರ್ ಬಂಧನ ಮಹತ್ವದ ಸಾಧನೆ ಎಂದು ತಮಿಳುನಾಡು ಪೊಲೀಸರು ಹಾಗೂ ಎನ್‍ಐಎ ಅಧಿಕಾರಿಗಳು ಹೇಳಿದ್ದಾರೆ. ಇದನ್ನೂ ಓದಿ: Exclusive | ರಾಮೇಶ್ವರಂ ಕೆಫೆ ಬ್ಲಾಸ್ಟ್ ಕೇಸ್: ಬಾಂಬ್ ಇಟ್ಟ ಬಳಿಕ ಮಸೀದಿಯಲ್ಲಿ ಪ್ರಾರ್ಥನೆ ಮಾಡಿದ್ದ ಮಾಸ್ಟರ್ ಮೈಂಡ್