– ಡಾಕ್ಯುಮೆಂಟರಿ ಮೂಲಕ ಅಪರೂಪದ ದೃಶ್ಯಗಳ ಪ್ರಸಾರ
– ಕೋಟ್ಯಂತರ ಬೆಲೆಯ ಚಿನ್ನದ ಗಟ್ಟಿ, ಸಂಗ್ರಹಗಾರದ ಆಳ-ಅಗಲ ಬಹಿರಂಗ
– ಆರ್‌ಬಿಐಗೆ 90 ವರ್ಷ ತುಂಬುತ್ತಲೇ ಈ ಸಾಕ್ಷ್ಯಚಿತ್ರ ರಿಲೀಸ್
ಮುಂಬೈ: ಮೊದಲ ಬಾರಿಗೆ ಭಾರತದ ಕೇಂದ್ರೀಯ ಬ್ಯಾಂಕ್ ಆರ್‌ಬಿಐ (RBI) ಸಾಕ್ಷ್ಯಚಿತ್ರವೊಂದನ್ನು ಹೊರತಂದಿದೆ. ಈ ಮೂಲಕ ತನ್ನ ಚಿನ್ನದ ಖಜಾನೆಯೊಂದನ್ನು ಅನಾವರಣಗೊಳಿಸಿದೆ.
ಇಲ್ಲಿಯವರೆಗೆ ಸಾರ್ವಜನಿಕರಿಗೆ ಆರ್‌ಬಿಐ ದೇಶದ ಸಂಪತ್ತನ್ನು ನಗದು ರೂಪದಲ್ಲಿ ಮಾತ್ರವಲ್ಲದೆ ಚಿನ್ನದ ರೂಪದಲ್ಲೂ ಇಟ್ಟುಕೊಂಡಿರುತ್ತದೆ ಎಂಬುದಷ್ಟೇ ತಿಳಿದಿತ್ತು. ಆದರೆ ಇದೇ ಮೊದಲ ಬಾರಿಗೆ ಸಾಕ್ಷ್ಯಚಿತ್ರವೊಂದರ (Documentry) ಮೂಲಕ ಆರ್‌ಬಿಐನ ಚಿನ್ನ ಸಂಗ್ರಹಗಾರದ ಆಳ-ಅಗಲ ಬಹಿರಂಗಗೊಳಿಸಿದೆ.ಇದನ್ನೂ ಓದಿ: ಕುಕ್ಕೆಯಲ್ಲಿ ಆಶ್ಲೇಷ ಬಲಿ ಪೂಜೆ ನೆರವೇರಿಸಿದ ಅಣ್ಣಾಮಲೈ
ಓಟಿಟಿ ವೇದಿಕೆಯಾದ ಜಿಯೋ ಹಾಟ್‌ಸ್ಟಾರ್‌ನಲ್ಲಿ (Jio Hotstar) 5 ಭಾಗಗಳಲ್ಲಿ ಪ್ರಸಾರವಾಗುತ್ತಿರುವ `ಆರ್‌ಬಿಐ ಅನ್‌ಲಾಕ್ಡ್: ಬಿಯಾಂಡ್ ದ ರುಪಿ’ (RBI Unlocked: Beyond the Rupee) ಎಂಬ ಡಾಕ್ಯುಮೆಂಟರಿಯ ಮೂಲಕ ಆರ್‌ಬಿಐ ಬಳಿ ಇರುವ ಅಗಾಧ ಸಂಪತ್ತಿನ ಅನಾವರಣ ಮಾಡಲಾಗಿದೆ. ಸದ್ಯ 4 ಭಾಗಗಳು ರಿಲೀಸ್ ಆಗಿದ್ದು, ಇನ್ನೂ ಒಂದು ಭಾಗ ರಿಲೀಸ್ ಆಗಬೇಕಷ್ಟೆ. ಆರ್‌ಬಿಐ ಸ್ಥಾಪನೆಯಾಗಿ 90 ವರ್ಷ ತುಂಬಿರುವ ಹೊತ್ತಿನಲ್ಲೇ ಈ ಡಾಕ್ಯುಮೆಂಟರಿ ಹೊರಬಂದಿದೆ.
ಸಾಕ್ಷ್ಯಚಿತ್ರದಲ್ಲೇನಿದೆ?
ಚಾಕ್‌ಬೋರ್ಡ್ ಎಂಟರ್‌ಟೇನ್‌ಮೆಂಟ್ (Chalkboard Entertainment) ನಿರ್ಮಿಸಿರುವ ಈ ಡಾಕ್ಯುಮೆಂಟರಿಯಲ್ಲಿ, ಕಳೆದ 90 ವರ್ಷಗಳಲ್ಲಿ ಆರ್‌ಬಿಐನ ಕಾರ್ಯವೈಖರಿಯನ್ನು ವಿವರಿಸಲಾಗಿದೆ. ತಲಾ 12.5 ಕೆ.ಜಿ. ತೂಗುವ ಚಿನ್ನದ ಗಟ್ಟಿಗಳ ಅಟ್ಟಿಯನ್ನು ಬಿಗಿಭದ್ರತೆಯಲ್ಲಿ ಇರಿಸಿರುವುದನ್ನು ತೋರಿಸಲಾಗಿದೆ. ಇವುಗಳ ಮೌಲ್ಯ ಕೋಟಿಯಷ್ಟಿದ್ದು, ಭಾರತದಲ್ಲಿ ಒಟ್ಟು 870 ಟನ್ ಚಿನ್ನದ ಸಂಗ್ರಹವಿದೆ ಎಂಬುದು ಬಹಿರಂಗಪಡಿಸಿದೆ.
1991ರ ಬಳಿಕ ವಿದೇಶಿ ವ್ಯಾಪಾರ ಸಮತೋಲನವನ್ನು ಕಾಯ್ದುಕೊಳ್ಳಲು ದೇಶದ ಚಿನ್ನವನ್ನು ವಿದೇಶಗಳಿಗೆ ನೀಡಬೇಕಾಗಿತ್ತು. ಇದರ ಹೊರತಾಗಿಯೂ ಆರ್‌ಬಿಐ ತನ್ನ ಚಿನ್ನದ ಸಂಗ್ರಹ ಕುಗ್ಗಲು ಬಿಟ್ಟಿಲ್ಲ. ಇತ್ತೀಚಿನ ವರದಿ ಪ್ರಕಾರ, ಭಾರತದಲ್ಲಿ 7.2 ಲಕ್ಷ ಕೋಟಿ ರೂ. ಮೌಲ್ಯದ ಸ್ವರ್ಣ ಸಂಗ್ರಹವಿದೆ. ಈ ಬಗ್ಗೆ ಮಾತನಾಡಿದ ಅಧಿಕಾರಿಯೊಬ್ಬರು, `ದೇಶ ಹಾಗೂ ಆರ್ಥಿಕತೆ ಏರಿಳಿತಗಳನ್ನು ಕಾಣುತ್ತಿರುತ್ತವೆ. ಆದರೆ ಚಿನ್ನ ಯಾವಾಗಲೂ ತನ್ನ ಮೌಲ್ಯವನ್ನು ಕಾಯ್ದುಕೊಳ್ಳುತ್ತದೆ’ ಎಂದು ಹೇಳಿದ್ದಾರೆ.
ಈ ಡಾಕ್ಯುಮೆಂಟರಿ ಮೂಲಕ, ತನ್ನ ಕಾರ್ಯನಿರ್ವಹಣೆ ಹಾಗೂ ಭದ್ರತೆಯನ್ನು ಅನಾವರಣಗೊಳಿಸುವ ಮೂಲಕ ಜನರಲ್ಲಿ ಅರಿವು ನಂಬಿಕೆ ಮೂಡಿಸುವುದು ಆರ್‌ಬಿಐನ ಮುಖ್ಯ ಉದ್ದೇಶವಾಗಿದೆ.ಇದನ್ನೂ ಓದಿ: ಕಬಿನಿಯಿಂದ ನೀರು ಬಿಡುಗಡೆ – ಕಪಿಲಾ ನದಿ ಉಕ್ಕಿ ಭತ್ತದ ಬೆಳೆ ಮುಳುಗಡೆ