36 ವರ್ಷಗಳ ಬಳಿಕ ಒಂದಾದ ತಾಯಿ-ಮಗ; ದೈವ ನುಡಿದಂತೆ ವರ್ಷದೊಳಗೆ ಮಗ ವಾಪಸ್

Public TV
2 Min Read
mangaluru daiva son mother

ಮಂಗಳೂರು: ಆತ ಮನೆ ಬಿಟ್ಟು ಮುಂಬೈ ಸೇರಿ 36 ವರ್ಷ ಕಳೆದಿತ್ತು. ಕೆಲಸ ಅರಸಿ ಮುಂಬೈ ಸೇರಿದ್ದ ಮಂಗಳೂರಿನ (Mangaluru) ಯುವಕ ಬಳಿಕ ಮಾನಸಿಕ ಆಘಾತದಿಂದ ಮನೆಯವರ ಸಂಪರ್ಕ ಕಡಿದುಕೊಂಡಿದ್ದ. ಆರೋಗ್ಯ ಸುಧಾರಿಸಿದರೂ ಮನೆಯ ಸಂಪರ್ಕ ಸಾಧ್ಯವಾಗಲೇ ಇಲ್ಲ. ಇದೀಗ, ಮನೆ ದೈವ ಮಂತ್ರದೇವತೆ ಅಭಯದಂತೆ ಮನೆಮಗ ಮನೆ ಸೇರಿದ್ದಾನೆ. 36 ವರ್ಷಗಳ ಬಳಿಕ ತಾಯಿ ಮಗ ಒಂದಾಗಿದ್ದಾರೆ. ಇದು ದೈವ ಪವಾಡ ಅಂತ ಮನೆಯವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಮೂಡುಬಿದ್ರೆಯ (Mudbidri) ಇರುವೈಲು ಗ್ರಾಮದ ಸಂಕಪ್ಪ ಹಾಗೂ ಗೋಪಿ ದಂಪತಿಯ ಹಿರಿಯ ಪುತ್ರ ಚಂದ್ರಶೇಖರ್, ತಮ್ಮ 25ನೇ ವಯಸ್ಸಿನಲ್ಲಿ ಉದ್ಯೋಗ ಅರಸಿ ಮುಂಬೈಯತ್ತ ತೆರಳಿದ್ದರು. ಆ ಬಳಿಕ ಕೆಲ ತಿಂಗಳು ಪತ್ರದ ಮುಖೇನ ಮನೆಯವರೊಂದಿಗೆ ಸಂಪರ್ಕದಲ್ಲಿದ್ದರು. ನಂತರ ಸಂಪರ್ಕ ಕಡಿದುಕೊಂಡು ಎಲ್ಲಿದ್ದಾರೆಂದು ಪತ್ತೆಯೇ ಇರಲಿಲ್ಲ. ಮಾನಸಿಕ ಆಘಾತಗೊಂಡಿದ್ದ ಬಳಿಕ ದೇವಸ್ಥಾನ, ಮಠ, ಮಂದಿರಗಳಲ್ಲಿ ದಿನ ಕಳೆಯುತ್ತಿದ್ದರಂತೆ. ಇದನ್ನೂ ಓದಿ: ಕಬಿನಿಯಿಂದ 25 ಸಾವಿರ ಕ್ಯುಸೆಕ್‌ ನೀರು ಹೊರಕ್ಕೆ – ಯಾವುದೇ ಕ್ಷಣದಲ್ಲಿ ಮತ್ತಷ್ಟು ನೀರು ಬಿಡುಗಡೆ

mangaluru daiva son mother 1

36 ವರ್ಷದ ಹಿಂದೆ ಮುಂಬೈನಲ್ಲಿ ಅಲೆದಾಡುತ್ತಿದ್ದ ಚಂದ್ರಶೇಖರ್ ಸ್ಥಿತಿ ಕಂಡು ಮುಂಬೈನ ಬಾಲು ಕಾಂಬ್ಳಿ ಎಂಬವರು ತಮ್ಮ ಮನೆಗೆ ಕರೆದೊಯ್ದು ಆರೈಕೆ ಮಾಡಿ, ಚಿಕಿತ್ಸೆ ಕೊಡಿಸಿದ್ದರು. ಆರೋಗ್ಯದಲ್ಲಿ ಸುಧಾರಣೆಯಾದ ಬಳಿಕ ಚಂದ್ರಶೇಖರ್ ಮರಳಿ ಕೆಲಸಕ್ಕೆ ಸೇರಿದ್ದರು. ಜತೆಗೆ ರಾತ್ರಿ ಶಾಲೆಗೆ ಸೇರಿ ಓದು ಮುಂದುವರಿಸಿದ್ದರು. ಆದರೂ ಮನೆಯವರ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಊರಿಗೂ ಬಂದಿರಲಿಲ್ಲ. ಪುತ್ರನಿಗಾಗಿ ಮೂರೂವರೆ ದಶಕಗಳ ಕಾಲ ಹೆತ್ತತಾಯಿ ದೇವರನ್ನು ಬೇಡಿಕೊಳ್ಳದ ದಿನಗಳಿಲ್ಲ. ಮನೆ ದೈವ ಮಂತ್ರದೇವತೆಗೆ ಮಗನಿಂದಲೇ ಕೋಲ ಸೇವೆ ಕೊಡಿಸುತ್ತೇನೆ ಎಂದು ಹರಕೆಯನ್ನೂ ಹೊತ್ತಿದ್ದರು. ಬಳಿಕ ಮನೆಯಲ್ಲಿ ನಡೆದ ಮಂತ್ರದೇವತೆ ದೈವದ ದರ್ಶನ ವೇಳೆ ಆತ ಜೀವಂತವಾಗಿ ಇದ್ದಾನೆ ಅಂತ ಅಭಯ ನೀಡಿತ್ತು. ಒಂದು ವರ್ಷದೊಳಗೆ ಮನೆಗೆ ಬರುವಂತೆ ಮಾಡುತ್ತೇನೆ ಎಂದು ಅಭಯ ನೀಡಿತ್ತು. ಹೀಗಾಗಿ ಮತ್ತೊಮ್ಮೆ ದರ್ಶನ ಸೇವೆ ನೀಡಲು ಮನೆಯವರು ತಯಾರಿ ನಡೆಸಿದ್ದರು.

ದೈವ ಮಂತ್ರದೇವತೆ ನುಡಿಯಂತೆ ದರ್ಶನ ಸೇವೆಗೆ ಮೂರು ದಿನಗಳ ಮೊದಲು ಚಂದ್ರಶೇಖರ್ ಮನೆ ಸೇರಿದ್ದಾರೆ. ಮುಂಬೈನವರೊಬ್ಬರು ಚಂದ್ರಶೇಖರ್ ಇರುವ ಸುಳಿವು ನೀಡಿದ್ದರು. ಅದೇ ಸುಳಿವುನಲ್ಲಿ ಹುಡಕಾಟ ನಡೆಸಿದಾಗ ಪತ್ತೆಯಾದ. ಇದೀಗ ಚಂದ್ರಶೇಖರ್ ತಾಯಿಗೆ 80 ವರ್ಷ ದಾಟಿದೆ. ಜೀವನದ ಇಳಿವಯಸ್ಸಿನಲ್ಲಿ ಮಗ ಮನೆ ಸೇರಿದ್ದು, ಕಂಡು ತಾಯಿಯ ಸಂತೋಷಕ್ಕೆ ಪಾರವೇ ಇಲ್ಲವಾಗಿದೆ. ಇದು ಮನೆ ದೈವ ಮಂತ್ರ ದೇವತೆಯಿಂದಲೇ ಸಾಧ್ಯ ಆಯ್ತು ಅನ್ನೋದು ಮನೆಯವರು ನಂಬಿಕೆ. ಇದನ್ನೂ ಓದಿ: ಬೆಳಗಾವಿ | ಭಾರೀ ಮಳೆಗೆ ಮುಳುಗಿತು ಹಬ್ಬಾನಟ್ಟಿ ಮಾರುತಿ ದೇವಸ್ಥಾನ – ಎಲ್ಲೆಲ್ಲಿ ಏನಾಗಿದೆ?

Share This Article