ಮದುವೆಯಾಗಿ ಒಂದು ತಿಂಗಳ ಬಳಿಕ ಕೊನೆಗೂ ಸತ್ಯ ಕಕ್ಕಿದ ಹನಿಮೂನ್ ಹಂತಕಿ – ತಪ್ಪೊಪ್ಪಿಕೊಂಡ ಸೋನಮ್ ರಘುವಂಶಿ

Public TV
3 Min Read
Honeymoon Murder

ಶಿಲ್ಲಾಂಗ್: ಹನಿಮೂನ್‌ನಲ್ಲಿ (Honeymoon Murder) ಪತಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಂತಕಿ ಸೋನಮ್ ಸಂಚು ರೂಪಿಸಿರುವ ಕುರಿತು ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾಳೆ.

ಇಂದೋರ್ ಮೂಲದ ರಾಜಾ ರಘುವಂಶಿ ಕೊಲೆ ಪ್ರಕರಣ ಸದ್ಯ ದೇಶಾದ್ಯಂತ ಭಾರೀ ಸದ್ದು ಮಾಡುತ್ತಿದೆ. ಬಾ ನಲ್ಲೆ ಮಧುಚಂದ್ರಕೆ ಸಿನಿಮಾ ರೀತಿಯಲ್ಲಿ ಹನಿಮೂನ್‌ಗೆ ಕರೆದೊಯ್ದು ಪತಿಯನ್ನು ಹತ್ಯೆಗೈದ ಆರೋಪಿ ಪತ್ನಿ ಸೋನಂ ರಘುವಂಶಿಯ ಕರಾಳ ಮುಖಗಳು ಒಂದೊಂದಾಗಿ ಬಹಿರಂಗವಾಗುತ್ತಿದೆ.ಇದನ್ನೂ ಓದಿ: ರಾಜಾ ರಘುವಂಶಿ ಕೊಲೆ ಪ್ರಕರಣ – ಹಂತಕಿ ಸೇರಿ ಐವರನ್ನು ಮೇಘಾಲಯಕ್ಕೆ ಕರೆತಂದ ಪೊಲೀಸರು

Meghalaya Honeymoon 4

ಇದೀಗ ಪತಿ ರಾಜಾ ರಘುವಂಶಿ ಹತ್ಯೆಗೆ ಸಂಚು ರೂಪಿಸಿದ್ದನ್ನು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾಳೆ. ಜೊತೆಗೆ ಸುಪಾರಿ ಕಿಲ್ಲರ್ಸ್ ವಿಫಲವಾದರೆ ತಾನೇ ಹತ್ಯೆ ಮಾಡಲು ಸೋನಂ ಸಂಚು ರೂಪಿಸಿದ್ದಳು. ಜಲಪಾತ ನೋಡಲು ಹೋದ ಸಂದರ್ಭದಲ್ಲಿ ಫೋಟೊ ತೆಗೆಯುವ ನೆಪದಲ್ಲಿ ಕಂದಕಕ್ಕೆ ತಳ್ಳಿ ಹತ್ಯೆ ಮಾಡುವುದಾಗಿ ತನ್ನ ಗೆಳೆಯ ರಾಜ್ ಕುಶ್ವಾಹ ಮುಂದೆ ಸೋನಂ ಹೇಳಿಕೊಂಡಿದ್ದಳು ಎಂದು ಮೂಲಗಳು ತಿಳಿಸಿವೆ.

ಸೋನಮ್ ಮದುವೆಗೂ ಮುನ್ನ ಕಚೇರಿಯಲ್ಲಿ ನೌಕರನಾಗಿದ್ದ ರಾಜ್ ಜೊತೆಗಿನ ಸಂಬಂಧದ ಬಗ್ಗೆ ತನ್ನ ತಾಯಿಗೆ ತಿಳಿಸಿದ್ದಳು. ಅದೇ ಸಮಯದಲ್ಲಿ ನಿಮ್ಮ ಒತ್ತಾಯಕ್ಕೆ ನಾನು ರಾಜಾನನ್ನು ಮದುವೆ ಆಗುತ್ತಿದ್ದೇನೆ. ಆದರೆ, ಅವನಿಗೆ ನಾನು ಏನು ಮಾಡುತ್ತೇನೆಂದು ನೀವೆಲ್ಲಾ ನೋಡುತ್ತೀರಾ. ಅದರ ಪರಿಣಾಮವನ್ನು ನೀವೆಲ್ಲರೂ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟಿದ್ದಳು.

ಇನ್ನೂ ಈ ಕುರಿತು ಸೋನಮ್ ಸಹೋದರ ಮಾತನಾಡಿ, ಆಕೆ ರಾಜನನ್ನು ಹತ್ಯೆ ಮಾಡುತ್ತಾಳೆ ಎಂದು ಯಾರೂ ಭಾವಿಸಿರಲಿಲ್ಲ. ನನ್ನ ತಂಗಿ ನೂರಕ್ಕೆ ನೂರರಷ್ಟು ಕೊಲೆಗಾರ್ತಿ ಎಂದು ಹೇಳಿ ಜೊತೆಗೆ ಕ್ಷಮೆಯಾಚಿಸಿದ್ದಾರೆ.ಇದನ್ನೂ ಓದಿ: ಹನಿಮೂನ್ ಮರ್ಡರ್ | ಪತಿ ಹತ್ಯೆಗೆ 20 ಲಕ್ಷ ನೀಡುವುದಾಗಿ ಆಫರ್ ನೀಡಿದ್ದ ಹಂತಕಿ

Meghalaya Honeymoon 6

ಏನಿದು ಪ್ರಕರಣ?
ಇಂದೋರ್ ಮೂಲದ ರಾಜಾ ರಘುವಂಶಿ ಮತ್ತು ಸೋನಮ್ ಕಳೆದ ಮೇ 11ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ನವದಂಪತಿ ಮೇ 20ರಂದು ಹನಿಮೂನ್‌ಗೆಂದು ಮೇಘಾಲಯಕ್ಕೆ ತೆರಳಿದ್ದರು. ಶಿಲ್ಲಾಂಗ್‌ನ ಬಾಲಾಜಿ ಅತಿಥಿಗೃಹದಲ್ಲಿ ಉಳಿದುಕೊಂಡಿದ್ದ ಅವರು ಮೇ 22ರ ಬೆಳಗ್ಗೆ ದ್ವಿಚಕ್ರ ವಾಹನವೊಂದನ್ನು ಬಾಡಿಗೆ ಪಡೆದು ಅತಿಥಿ ಗೃಹದಿಂದ ಜನಪ್ರಿಯ ಪ್ರವಾಸಿ ತಾಣ ಸೊಹ್ರಾಕ್ಕೆ ತೆರಳಿದ್ದರು. ಈ ವೇಳೆ ಅವರು 2 ಲಗೇಜ್ ಬ್ಯಾಗ್ ತಮ್ಮೊಂದಿಗೆ ತೆಗೆದುಕೊಂಡಿದ್ದರು. ಮೇ 25ರೊಳಗೆ ಹಿಂತಿರುಗುವುದಾಗಿ ಅತಿಥಿ ಗೃಹದ ವ್ಯವಸ್ಥಾಪಕರಿಗೆ ತಿಳಿಸಿದ್ದರು. ಮೇ 23ರಂದು ಮೌಲಾಖಿಯಾತ್ ಗ್ರಾಮ ತಲುಪಿದ ದಂಪತಿ, ನೊಂಗ್ರಿಯಾಟ್‌ನ ಶಿಪಾರಾ ಹೋಂಸ್ಟೇಯಲ್ಲಿ ವಾಸ್ತವ್ಯ ಹೂಡಿದ್ದರು. ಆ ಬಳಿಕ ದಂಪತಿ ನಿಗೂಢವಾಗಿ ನಾಪತ್ತೆಯಾಗಿದ್ದರು. ಇದಾದ 1 ದಿನದ ಬಳಿಕ ಅವರು ಬಾಡಿಗೆಗೆ ಪಡೆದಿದ್ದ ಸ್ಕೂಟಿ ಸೊಹ್ರಾರಿಮ್ ಬಳಿ ಪತ್ತೆಯಾಗಿತ್ತು. 11 ದಿನಗಳ ಹುಟುಕಾಟದ ಬಳಿಕ ಶಿಲ್ಲಾಂಗ್ ಪೊಲೀಸರು ಆಳವಾದ ಕಂದಕವೊಂದರಲ್ಲಿ ರಾಜಾ ರಘುವಂಶಿ ಅವರ ಮೃತದೇಹವನ್ನು ಪತ್ತೆ ಹಚ್ಚಿದ್ದರು. ಅವರನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಲಾಗಿದೆ ಎಂದು ದೃಢಪಡಿಸಿದ್ದರು.

ಮೇ 23ರಂದು ಸೋನಮ್ ಮತ್ತು ರಾಜಾ ರಘುವಂಶಿ ಸೊಹ್ರಾದಲ್ಲಿನ ಜಲಪಾತವನ್ನು ನೋಡಲು ಶಿಖರವನ್ನು ಹತ್ತಿಕೊಂಡು ಹೋಗುತ್ತಿದ್ದರು. ಈ ವೇಳೆ ಹಂತಕರು ಅವರನ್ನು ಹಿಂಬಾಲಿಸುತ್ತಿದ್ದರು. ಇದನ್ನರಿತ ಸೋನಮ್ ನಿರ್ಜನ ಪ್ರದೇಶ ಕಾಣಿಸಿದಂತೆ ಆಯಾಸವಾದಂತೆ ನಟಿಸಿದ್ದಳು. ಕೊಲೆ ಮಾಡಲೆಂದೇ ಹಿಂದುಳಿದು ಹಂತಕರಿಗೆ ಸನ್ನೆ ಮಾಡಿದ್ದಳು. ಆಗ ಓರ್ವ ರಾಜ್‌ಗೆ ಹರಿತವಾದ ಆಯುಧದಿಂದ ಚುಚ್ಚಿದ್ದಾನೆ. ಇನ್ನುಳಿದವರು ತಲೆಗೆ ಗಾಯಮಾಡಿದ್ದಾರೆ. ಬಳಿಕ ಹಂತಕರು ಹಾಗೂ ಸೋನಮ್ ಸೇರಿ ರಾಜ್ ಮೃತದೇಹವನ್ನು ಕಮರಿಗೆ ಎಸೆದಿದ್ದಾರೆ.

ಕೊಲೆ ಬಳಿಕ ವಾರಣಾಸಿಯ ಡಾಬಾವೊಂದರ ಬಳಿ ಸೋನಮ್‌ನ್ನು ಪೊಲೀಸರು ಬಂಧಿಸಿದ್ದರು. ವೈದ್ಯಕೀಯ ಪರೀಕ್ಷೆ ನಂತರ ಉತ್ತರ ಪ್ರದೇಶ ಪೊಲೀಸರು ಆಕೆಯನ್ನು ಮೇಘಾಲಯ ಪೊಲೀಸರಿಗೆ ಹಸ್ತಾಂತರಿಸಿದ್ದರು. ಮಂಗಳವಾರ ಬೆಳಿಗ್ಗೆ ಮೇಘಾಲಯ ಪೊಲೀಸರು ಆಕೆಯನ್ನು ಬಿಹಾರದ ಪಾಟ್ನಾದ ಫುಲ್ವರಿ ಷರೀಫ್ ಠಾಣೆಗೆ ಕರೆತಂದಿದ್ದು, ಮಂಗಳವಾರ ಮಧ್ಯರಾತ್ರಿ ಮೇಘಾಲಯ ಕರೆತಂದಿದ್ದಾರೆ.

Meghalaya Honeymoon 3

ಮೇ 11: ಇಂದೋರ್‌ನಲ್ಲಿ ಮದುವೆ
ಮೇ 21: ಹನಿಮೂನ್ ಶಿಲ್ಲಾಂಗ್‌ಗೆ ಬಂದ ದಂಪತಿ
ಮೇ 22: ಶಿಲ್ಲಾಂಗ್‌ನಿಂದ ಸ್ಕೂಟಿ ಬಾಡಿಗೆಗೆ ಪಡೆದು ಸೊಹ್ರಾಗೆ ಪ್ರಯಾಣ ಬೆಳೆಸಿದ ದಂಪತಿ
ಮೇ 23: ನೊಂಗ್ರಿಯಾಟ್ ಗ್ರಾಮದ ಬಳಿ ಟ್ರೇಕಿಂಗ್ ಹೊರಟಾಗ ಅಲ್ಲಿನ ಗೈಡ್ ಒಬ್ಬರು ದಂಪತಿಯನ್ನು ನೋಡಿದ್ದರು.
ಮೇ 24: ದಂಪತಿ ನಾಪತ್ತೆಯಾಗಿದ್ದು, ಬಾಡಿಗೆಗೆ ಪಡೆದಿದ್ದ ಸ್ಕೂಟಿ ಸೊಹ್ರಾರಿಮ್‌ನಲ್ಲಿ ಪತ್ತೆಯಾಗಿತ್ತು.
ಜೂನ್ 2: ಜಲಪಾತದ ಬಳಿಯ ಕಮರಿಯಲ್ಲಿ ರಾಜಾ ಶವ ಪತ್ತೆ
ಜೂನ್ 7-8: ಸೋನಮ್ ಹಾಗೂ ಇನ್ನುಳಿದ ಆರೋಪಿಗಳ ಬಂಧನ.ಇದನ್ನೂ ಓದಿ: ಇಂದು ಮಧ್ಯರಾತ್ರಿ ಮೇಘಾಲಯಕ್ಕೆ ಹಂತಕಿ ಸೋನಮ್

 

Share This Article