Explainer| ಅಪರೂಪದ ಭೂ ಖನಿಜ ರಫ್ತಿಗೆ ಚೀನಾ ನಿಷೇಧ: ಭಾರತದ ಮೇಲೆ ಪರಿಣಾಮ ಏನು?

Public TV
4 Min Read
Explainer Chinas rare earth export curbs hit the auto industry india worldwide Electric Vehicle

ರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಚೀನಾ (China) ಈಗ ಭಾರತ, ಅಮೆರಿಕದ ಸೇರಿದಂತೆ ವಿವಿಧ ದೇಶಗಳಿಗೆ ಅಪರೂಪದ ಭೂಮಿಯ ಮ್ಯಾಗ್ನೆಟ್‌ಗಳ ರಫ್ತಿಗೆ ನಿರ್ಬಂಧ ಹೇರಿದೆ. ನಿರ್ಬಂಧದದಿಂದ ಭಾರತ (India) ಸೇರಿದಂತೆ ವಿಶ್ವದ ಎಲೆಕ್ಟ್ರಿಕ್‌ ವಾಹನ (Electric Vehicle) ಉದ್ಯಮದ ಮೇಲೆ ಭಾರೀ ಪರಿಣಾಮ ಬೀರುವ ಸಾಧ್ಯತೆಯಿದೆ. ಹೀಗಾಗಿ ಚೀನಾ ಈ ನಿರ್ಧಾರ ಕೈಗೊಂಡಿದ್ದು ಯಾಕೆ? ಭಾರತದ ಮೇಲೆ ಏನು ಪರಿಣಾಮ ಬೀರಲಿದೆ ಇತ್ಯಾದಿ ವಿಚಾರಗಳನ್ನು ಇಲ್ಲಿ ವಿವರಿಸಲಾಗಿದೆ.

ಚೀನಾ ನಿರ್ಬಂಧ ಹೇರಿದ್ದು ಯಾಕೆ?
ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಡೊನಾಲ್ಡ್‌ ಟ್ರಂಪ್‌ (Donald Trump) ವಿಶ್ವದ ಮೇಲೆ ತೆರಿಗೆ ಸಮರ ಆರಂಭಿಸಿದ್ದರು. ತೆರಿಗೆ ಸಮರ ಆರಂಭಿಸಿದ ಬೆನ್ನಲ್ಲೇ ಹಲವು ರಾಷ್ಟ್ರಗಳು ಅಮೆರಿಕದಿಂದ ಆಮದಾಗುವ ವಸ್ತುಗಳ ಮೇಲೆ ತೆರಿಗೆ ಕಡಿಮೆ ಮಾಡಲು ಮಾತುಕತೆ ಆರಂಭಿಸಿದ್ದವು. ಆದರೆ ಪ್ರತಿಷ್ಠೆಗೆ ಬಿದ್ದ ಚೀನಾ ಅಮೆರಿಕದ ವಸ್ತುಗಳ ಮೇಲೆ ಮತ್ತಷ್ಟು ಸುಂಕ ವಿಧಿಸಿತು. ಇದಕ್ಕೆ ಪ್ರತಿಯಾಗಿ ಅಮೆರಿಕವೂ ಸುಂಕ ವಿಧಿಸಿತು. ಇದರಿಂದಾಗಿ ಚೀನಾ ಆರ್ಥಿಕತೆಯ ಮೇಲೆ ಪೆಟ್ಟು ಬಿತ್ತು. ಷೇರು ಮಾರುಕಟ್ಟೆ ಪತನ ಹೊಂದಿತು. ವಿದೇಶಿ ಹೂಡಿಕೆಗಳು ಹಿಂದಕ್ಕೆ ಸರಿದವು. ಈ ಬೆನ್ನಲ್ಲೇ ಈಗ ವಿದೇಶಗಳಿಗೆ ಅಪರೂಪದ ಭೂ ಖನಿಜ (Rare Earth Minerals) ರಫ್ತು ಮಾಡಲು ನಿರ್ಬಂಧ ಹೇರಿದೆ.

rare earth minerals 2

ಚೀನಾವೇ ಸೂಪರ್‌ ಪವರ್!
ಈ ನಿರ್ಬಂಧದ ಪ್ರಕಾರ ಏಳು ಅಪರೂಪದ ಭೂಮಿಯ ಅಂಶಗಳು (REEs) ಮತ್ತು ಸಂಬಂಧಿತ ಆಯಸ್ಕಾಂತಗಳ ರಫ್ತು ಮಾಡಲು ನಿರ್ಬಂಧ ಹೇರಲಾಗಿದೆ. ಅಂತರರಾಷ್ಟ್ರೀಯ ಇಂಧನ ಸಂಸ್ಥೆ ಮತ್ತು ಯುನೈಟೆಡ್ ಸ್ಟೇಟ್ಸ್ ಭೂವೈಜ್ಞಾನಿಕ ಸಮೀಕ್ಷೆ (2025) ಪ್ರಕಾರ, ಚೀನಾ ವಿಶ್ವದ REEs ನ 60% ಉತ್ಪಾದಿಸುತ್ತದೆ ಮತ್ತು ಜಾಗತಿಕ ಸಂಸ್ಕರಣಾ ಸಾಮರ್ಥ್ಯದ 90% ಅನ್ನು ನಿಯಂತ್ರಿಸುತ್ತದೆ.

ಸಮರಿಯಮ್, ಗ್ಯಾಡೋಲಿನಿಯಮ್, ಟೆರ್ಬಿಯಂ, ಡಿಸ್ಪ್ರೋಸಿಯಮ್, ಲುಟೇಷಿಯಮ್, ಸ್ಕ್ಯಾಂಡಿಯಮ್ ಮತ್ತು ಯಟ್ರಿಯಮ್ ಸೇರಿದಂತೆ ನಿರ್ಣಾಯಕ ವಸ್ತುಗಳು ವಿದ್ಯುತ್ ಮೋಟಾರ್‌ಗಳು, ಬ್ರೇಕಿಂಗ್ ವ್ಯವಸ್ಥೆಗಳು, ಸ್ಮಾರ್ಟ್‌ಫೋನ್‌ಗಳು, ಏರೋಸ್ಪೇಸ್ ಘಟಕಗಳು ಮತ್ತು ಕ್ಷಿಪಣಿ ತಂತ್ರಜ್ಞಾನದಲ್ಲಿ ಅತ್ಯಗತ್ಯ.

ಏನಿದು ಅಪರೂಪದ ಭೂ ಖನಿಜ?
ಆವರ್ತಕ ಕೋಷ್ಟಕದಲ್ಲಿ ಇರುವ 17 ಲೋಹಗಳ ಗುಂಪನ್ನು ಅಪರೂಪದ ಭೂ ಖನಿಜಗಳು ಎಂದು ಕರೆಯಲಾಗುತ್ತದೆ. ಈ ಖನಿಜ ನಿಕ್ಷೇಪಗಳು ವಿಶ್ವದ ಕೆಲ ದೇಶಗಳಲ್ಲಿ ಮಾತ್ರ ಲಭ್ಯವಿದೆ. ಈ ಖನಿಜಗಳು ಕಾಂತೀಯ ಮತ್ತು ವಾಹಕ ಗುಣಲಕ್ಷಣಗಳನ್ನು ಒಳಗೊಂಡಂತೆ ಅವುಗಳ ವಿಶಿಷ್ಟ ಗುಣಲಕ್ಷಣಗಳಿಂದಾಗಿ ಇವು ಮೌಲ್ಯಯುತವಾಗಿವೆ. ಇದನ್ನೂ ಓದಿ: ಟೆಸ್ಲಾಗೆ 2 ಶೋ ರೂಂ ತೆರೆಯುವ ಆಸಕ್ತಿ ಇದೆ, ಆದ್ರೆ ಭಾರತದಲ್ಲೇ ಕಾರು ಉತ್ಪಾದಿಸುವ ಆಸಕ್ತಿ ಇಲ್ಲ: ಹೆಚ್‌ಡಿಕೆ

rare earth minerals 1

ಎಲೆಕ್ಟ್ರಿಕ್‌ ವಾಹನಗಳಿಗೆ ಪೆಟ್ಟು:
ಚೀನಾದ ಅಪರೂಪದ ಭೂಮಿಯ ಮ್ಯಾಗ್ನೆಟ್ ರಫ್ತನ್ನು ನಿಷೇಧಿಸಿದೆ. ಇದರಿಂದಾಗಿ ಭಾರತದ ಆಟೋ ವಲಯಕ್ಕೆ, ವಿಶೇಷವಾಗಿ ವಿದ್ಯುತ್ ವಾಹನ (EV) ಉದ್ಯಮಕ್ಕೆ ಪೆಟ್ಟು ಬೀಳುವ ಸಾಧ್ಯತೆಯಿದೆ. ದೇಶದ ಅಪರೂಪದ ಭೂಮಿಯ ಮ್ಯಾಗ್ನೆಟ್ ಪೂರೈಕೆಯ 80% ಕ್ಕಿಂತ ಹೆಚ್ಚು ಚೀನಾದಿಂದಲೇ ಆಮದಾಗುತ್ತಿದೆ. ಚೀನಾದ ನಿರ್ಧಾರದಿಂದ ಉತ್ಪಾದನೆಗೆ ಸಮಸ್ಯೆಯಾಗಬಹುದು.

ಇವಿ ಮೋಟಾರ್‌ಗಳಿಗೆ ಅಪರೂಪದ ಭೂಮಿಯ ಆಯಸ್ಕಾಂತಗಳು ಅವಶ್ಯಕ. ಪ್ರತಿ ವಾಹನವು ಅಂದಾಜು ಸುಮಾರು 1–2 ಕೆಜಿ ವರೆಗೆ ಈ ವಸ್ತುಗಳನ್ನು ಬಳಸುತ್ತದೆ. ಮೋಟಾರುಗಳನ್ನು  ನಿಯೋಡೈಮಿಯಮ್, ಕಬ್ಬಿಣ ಮತ್ತು ಬೋರಾನ್‌ನಿಂದ ತಯಾರಿಸಲಾಗುತ್ತದೆ. ಇವು EV ಮೋಟಾರ್‌ಗಳಿಗೆ ಅವಶ್ಯಕ. ಏಕೆಂದರೆ ಅವು ಮೋಟಾರ್‌ಗಳನ್ನು ಹಗುರಗೊಳಿಸುತ್ತವೆ ಮತ್ತು ವಾಹನಗಳ ಶಕ್ತಿಯನ್ನು ಹೆಚ್ಚಿಸುತ್ತವೆ. ಇದರಿಂದಾಗಿ ಇವಿಗಳು ವೇಗವಾಗಿ ಚಲಿಸಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೇ ಬ್ಯಾಟರಿಗಳು ಹೆಚ್ಚು ಕಾಲ ಬಾಳಿಕೆ ಬರುವಂತೆ ಮಾಡುತ್ತದೆ. ಇದನ್ನೂ ಓದಿ: ಐತಿಹಾಸಿಕ ಕ್ಷಣಕ್ಕೆ ಭಾರತ ಸಜ್ಜು – ಜೂ.10ರಂದು ಭಾರತದ ಶುಭಾಂಶು ಶುಕ್ಲಾ ಬಾಹ್ಯಾಕಾಶ ಯಾನ ಶುರು

Electric vehicle

ದ್ವಿಚಕ್ರ ವಾಹನ ಕಂಪನಿಗಳಿಗೆ ಸಮಸ್ಯೆ:
ಭಾರತದಲ್ಲಿ ಇವಿ ಕಾರುಗಳಿಗೆ ಹೋಲಿಸಿದರೆ ಇವಿ ದ್ವಿಚಕ್ರ ವಾಹನಗಳು ಈಗ ಭಾರೀ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ. ಚೀನಾದ ನಿರ್ಧಾರದಿಂದ ದಾಸ್ತಾನುಗಳು ಬೇಗ ಖಾಲಿಯಾಗಬಹುದು. ಇವಿ ಬ್ಯಾಟರಿಗೆ ಬೇಕಾದ ಕಚ್ಚಾ ವಸ್ತುಗಳ ಸಮಸ್ಯೆಯಿಂದ ಉತ್ಪಾದನೆ ಕಡಿಮೆಯಾಗಬಹುದು. ಮುಂದೆ ಬುಕ್‌ ಮಾಡಿದರೂ ಸರಿಯಾದ ಸಮಯಕ್ಕೆ ದ್ವಿಚಕ್ರ ವಾಹನಗಳು ಗ್ರಾಹಕರ ಕೈಗೆ ಸೇರದೇ ಇರಬಹುದು. ಮುಖ್ಯವಾಗಿ ಬಜಾಜ್ ಆಟೋ, ಟಾಟಾ ಮೋಟಾರ್ಸ್, ಟಿವಿಎಸ್ ಮೋಟಾರ್ಸ್ ಮತ್ತು ಓಲಾ ಎಲೆಕ್ಟ್ರಿಕ್‌ನಂತಹ ಪ್ರಮುಖ ಆಟೋಮೊಬೈಲ್ ಸಂಸ್ಥೆಗಳ ಮೇಲೆ ಪರಿಣಾಮ ಬೀಳುವ ಸಾಧ್ಯತೆಯಿದೆ.

ಬೇರೆ ಎಲ್ಲಿ ಬಳಕೆಯಾಗುತ್ತೆ?
ಅಪರೂಪದ ಭೂಮಿಯ ಆಯಸ್ಕಾಂತಗಳನ್ನು ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ವಿಂಡ್ ಟರ್ಬೈನ್‌ಗಳು, ವಿಮಾನಗಳು ಮತ್ತು ಕ್ಷಿಪಣಿಗಳಲ್ಲಿಯೂ ಬಳಸಲಾಗುತ್ತದೆ. ಬ್ರೇಕ್‌ಗಳು, ವೈಪರ್‌ಗಳು, ಆಡಿಯೊ ಸಿಸ್ಟಮ್‌ಗಳು, ಪವರ್ ವಿಂಡೋಗಳು,  ಸ್ಪೀಡೋಮೀಟರ್‌ಗಳು, ನೀರಿನ ಪಂಪ್‌ಗಳು ಮತ್ತು ಸ್ವಯಂಚಾಲಿತ ಪ್ರಸರಣಗಳಂತಹ ಅನೇಕ ಕಾರು ಭಾಗಗಳಲ್ಲಿಯೂ ಬಳಸಲಾಗುತ್ತದೆ.

ಕೋವಿಡ್‌ ಸಮಯಯದಲ್ಲಿ ಏನಾಗಿತ್ತು?
ಚೀನಾದಲ್ಲ ಲಾಕ್‌ಡೌನ್‌ ಘೋಷಣೆ ಮಾಡಿದ್ದರಿಂದ ಹಲವಾರು ಫ್ಯಾಕ್ಟರಿಗಳು ಬಂದ್‌ ಆಗಿತ್ತು. ಸಪ್ಲೈ ಚೈನ್‌ ವ್ಯವಸ್ಥೆಯ ಮೇಲೆ ಪೆಟ್ಟು ಬಿದ್ದರಿಂದ ಸರಿಯಾದ ಸಮಯದಲ್ಲಿ ಕಚ್ಚಾ ವಸ್ತುಗಳು ರಫ್ತಾಗದ ಕಾರಣ ಭಾರತದ ಅಟೋಮೊಬೈಲ್‌ ಕಂಪನಿಗಳಿಗೆ ಕಾರು ಉತ್ಪಾದನೆಗೆ ಸಮಸ್ಯೆಯಾಗಿತ್ತು. ಬುಕ್ಕಿಂಗ್‌ ಮಾಡಿದ ಬಳಿಕ 8-9 ತಿಂಗಳು ಕಳೆದರೂ ವಾಹನ ಗ್ರಾಹಕರ ಕೈಗೆ ಸಿಕ್ಕಿರಲಿಲ್ಲ. ಭಾರತದ ಜಿಡಿಪಿಯಲ್ಲಿ ಅಟೋ ಕ್ಷೇತ್ರ ಕೊಡುಗೆ ದೊಡ್ಡದಿದೆ. ಅಟೋ ಕ್ಷೇತ್ರಕ್ಕೆ ಹಿನ್ನಡೆಯಾದರೆ ಅಟೋಮೊಬೈಲ್‌ ಕಂಪನಿಗಳಿಗೆ ಮಾತ್ರವಲ್ಲ ಇತರ ಉದ್ಯಮಗಳ ಮೇಲೂ ಪರಿಣಾಮ ಬೀರುತ್ತದೆ.

Share This Article