ಜೈಪುರ: ಇತ್ತೀಚಿನ ದಿನಗಳಲ್ಲಿ ಮದುವೆಗೂ ಮುನ್ನವೇ ಲಿವ್ ಇನ್ ರಿಲೇಶನ್‌ನಲ್ಲಿರುವುದು (Live In Relation) ಕಾಮನ್. ಆದರೆ ರಾಜಸ್ಥಾನದ (Rajasthan) ಜೋಡಿಯೊಂದು 70 ವರ್ಷಗಳಿಂದ ಲಿವ್ ಇನ್‌ನಲ್ಲಿದ್ದು, ವೃದ್ಧಾಪ್ಯದಲ್ಲಿ ಹಸಮಣೆ ಏರಿರುವ ಅಪರೂಪದ ಘಟನೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಹೌದು, ರಾಜಸ್ಥಾನದ ಡುಂಗರಪುರ (Dungarpur) ಜಿಲ್ಲೆಯ ಗಾಲಂದರ್ ಗ್ರಾಮದಲ್ಲಿ ಈ ಅಪರೂಪದ ಘಟನೆ ನಡೆದಿದೆ. ಡುಂಗರಪುರದ ರಾಮ ಅಂಗರಿ (95) ಹಾಗೂ ಜೀವಲಿ ದೇವಿ (90) 70 ವರ್ಷಗಳ ಕಾಲ ಲಿವ್ ಇನ್ ರಿಲೇಶನ್‌ನಲ್ಲಿದ್ದು, ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದನ್ನೂ ಓದಿ: ಆರ್‌ಸಿಬಿ ಅಂದ್ರೆ Real Culprits of Bangalore – ವಿಪಕ್ಷ ನಾಯಕ ಆರ್. ಅಶೋಕ್ ಲೇವಡಿ
ಈ ಜೋಡಿ ಒಂದೇ ಮನೆಯಲ್ಲಿ ಇದ್ದುಕೊಂಡು ಮದುವೆಯಾಗದೇ ಜೀವನ ನಡೆಸುತ್ತಿದ್ದರು. ಈ ಜೋಡಿಗೆ 4 ಗಂಡು ಹಾಗೂ 4 ಹೆಣ್ಣುಮಕ್ಕಳಿದ್ದಾರೆ. ಈ ಪೈಕಿ ನಾಲ್ವರು ಮಕ್ಕಳು ಸರ್ಕಾರಿ ಉದ್ಯೋಗದಲ್ಲಿದ್ದಾರೆ. ಬಹಳ ಹಿಂದೆಯೇ ಮದುವೆಯಾಗಬೇಕಿದ್ದ ಈ ಜೋಡಿಯ ಕನಸನ್ನು ಮಕ್ಕಳು ಅದ್ಧೂರಿಯಾಗಿ ಮದುವೆ ಮಾಡಿಸುವ ಮೂಲಕ ನೆರವೇರಿಸಿದ್ದಾರೆ. ಇದನ್ನೂ ಓದಿ: ಐತಿಹಾಸಿಕ ಕ್ಷಣಕ್ಕೆ ಭಾರತ ಸಜ್ಜು – ಜೂ.10ರಂದು ಭಾರತದ ಶುಭಾಂಶು ಶುಕ್ಲಾ ಬಾಹ್ಯಾಕಾಶ ಯಾನ ಶುರು
ಪುತ್ರರು, ಪುತ್ರಿಯರು, ಮೊಮ್ಮಕ್ಕಳು ಎಲ್ಲರೂ ಈ ವಿಶಿಷ್ಟ ಮದುವೆಯಲ್ಲಿ ಭಾಗವಹಿಸಿದ್ದಾರೆ. ಎಲ್ಲಾ ಯುವ ಜೋಡಿಗಳ ವಿವಾಹದಂತೆ ಹಳದಿ, ಮೆಹಂದಿ ಮತ್ತು ಬಿಂದೋರಿಯಂತಹ ಎಲ್ಲಾ ಆಚರಣೆಗಳನ್ನು ನಡೆಸಲಾಯಿತು. ಮದುವೆಯಲ್ಲಿ ಡಿಜೆ ಕಾರ್ಯಕ್ರಮವನ್ನು ಸಹ ಆಯೋಜಿಸಲಾಗಿದ್ದು, ಮಕ್ಕಳು, ಮೊಮ್ಮಕ್ಕಳು ಮತ್ತು ಗ್ರಾಮಸ್ಥರು ಮಸ್ತ್ ಡ್ಯಾನ್ಸ್ ಮಾಡಿದ್ದಾರೆ. ಅಪರೂಪದ ಮದುವೆಯಲ್ಲಿ ಇಡೀ ಊರಿಗೆ ಊರೇ ಭಾಗಿಯಾಗಿ ಸಂಭ್ರಮಿಸಿದೆ. ಇದನ್ನೂ ಓದಿ: ಕೊಲಂಬಿಯಾದ ಬಲಪಂಥೀಯ ಅಧ್ಯಕ್ಷೀಯ ಅಭ್ಯರ್ಥಿ ಮೇಲೆ ಗುಂಡೇಟು