18 ವರ್ಷ, 18 ಆವೃತ್ತಿ, ನಂ.18 ಜೆರ್ಸಿ – ಹೇಗಿದೆ ಆರ್‌ಸಿಬಿಯ ರೋಚಕ ಇತಿಹಾಸ..?

Public TV
8 Min Read
Kohli 18 Years

ಅಹಮದಾಬಾದ್‌: ಕೋಟ್ಯಂತರ ಅಭಿಮಾನಿಗಳ (RCB Fans) ಪ್ರಾರ್ಥನೆ ಕೊನೆಗೂ ನೆರವೇರಿದೆ. ಒಂದು ಬಾರಿಯಾದರೂ ಕಪ್‌ ಗೆಲ್ಲಬೇಕೆಂಬ 18 ವರ್ಷಗಳ ಕನಸು ಈ ಬಾರಿ ನನಸಾಗಿದೆ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡ ಮೊದಲ ಬಾರಿಗೆ ಚಾಂಪಿಯನ್‌ ಪಟ್ಟ ಅಲಂಕರಿಸುವ ಮೂಲಕ ʻಈ ಸಲ ಕಪ್‌ ನಮ್ದೇʼ ಎಂದು ಹುರಿದುಂಬಿಸುತ್ತಿದ್ದ ಅಭಿಮಾನಿಗಳಿಗೆ ಗಿಫ್ಟ್‌ ನೀಡಿದೆ. 17 ವರ್ಷಮ, 6,256 ದಿನಗಳು, 90,08,640 ಬಳಿಕ ಟ್ರೋಫಿ ಮುಡಿಗೇರಿಸಿಕೊಂಡಿದ್ದು, ಇತಿಹಾಸ ಪುಟ ಸೇರಿಕೊಂಡಿದೆ. ಹಾಗಿದ್ರೆ, ಕಳೆದ 17 ಆವೃತ್ತಿಗಳಲ್ಲಿ ಕಂಡ ಏಳು ಬೀಳಿನ ಕಥೆಯನ್ನು ನೋಡೋಣ….

Virat 2 2

ಚೊಚ್ಚಲ ಆವೃತ್ತಿಯಲ್ಲಿ ಹೀನಾಯ ಸೋಲು:
2008ರ ಚೊಚ್ಚಲ ಐಪಿಎಲ್ (IPL 2025) ಆವೃತ್ತಿಯಲ್ಲಿ 8 ತಂಡಗಳು ಮಾತ್ರ ಭಾಗವಹಿಸಿದ್ದವು. ರಾಜಸ್ಥಾನ್ ರಾಯಲ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಆಗ ವಿಜಯ್ ಮಲ್ಯಾ ಮಾಲೀಕತ್ವದಲ್ಲಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 14 ಪಂದ್ಯಗಳಲ್ಲಿ ಕೇವಲ 4 ಪಂದ್ಯಗಳನ್ನು ಗೆದ್ದು, ಲೀಗ್ ಸುತ್ತಿನಲ್ಲೇ ಹೊರಬಿದ್ದಿತ್ತು. ಚುಟುಕು ಕ್ರಿಕೆಟ್‌ಗೆ ಆಗಷ್ಟೇ ಚಾಲನೆ ಸಿಕ್ಕಿದ್ದರಿಂದ ಆರ್‌ಸಿಬಿ ಅಷ್ಟೇನು ಜನಪ್ರಿಯತೆ ಗಳಿಸಿರಲಿಲ್ಲ.

RCB in Finals

ಫೈನಲ್‌ನಲ್ಲಿ ವಿರೋಚಿತ ಸೋಲು
2009ರ ಆವೃತ್ತಿಯಲ್ಲೂ 8 ತಂಡಗಳು ಭಾಗವಹಿಸಿದ್ದವು. 2ನೇ ಆವೃತ್ತಿಯಲ್ಲಿ ಆರ್‌ಸಿಬಿ ಪುಟಿದೆದ್ದಿತ್ತು. 14 ಪಂದ್ಯಗಳಲ್ಲಿ 8 ಪಂದ್ಯಗಳಲ್ಲಿ ಗೆಲುವು ಸಾಧಿಸಿ 16 ಅಂಕ ಗಳಿಸಿ ಪ್ಲೇ ಆಫ್‌ಗೆ ಅರ್ಹತೆ ಪಡೆದುಕೊಂಡಿತ್ತು. ಆಗ ಎಲಿಮಿನೇಟರ್ ಪಂದ್ಯ ಇರಲಿಲ್ಲ, 2 ಸೆಮಿಫೈನಲ್ ಪಂದ್ಯಗಳು ಮಾತ್ರ ಇದ್ದವು. ಮೊದಲ ಸೆಮಿಫೈನಲ್‌ನಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ (ಇಂದಿನ ಡೆಲ್ಲಿ ಕ್ಯಾಪಿಟಲ್ಸ್), ಹೈದರಾಬಾದ್ ಡೆಕ್ಕನ್ ಚಾರ್ಜಸ್ ಕಾದಾಟ ನಡೆಸಿದ್ರೆ, 2ನೇ ಸೆಮಿಸ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆರ್‌ಸಿಬಿ ಸೆಣಸಾಡಿತ್ತು. ಈ ವೇಳೆ ಸೆಮಿಸ್‌ನಲ್ಲಿ ಗೆದ್ದು ಫೈನಲ್ ಪ್ರವೇಶಿಸಿದ್ದ ಆರ್‌ಸಿಬಿ ಫೈನಲ್‌ನಲ್ಲಿ ಡೆಕ್ಕನ್ ಚಾರ್ಜಸ್ ವಿರುದ್ಧ 6 ರನ್‌ಗಳ ಅಂತರದಿಂದ ಸೋಲು ಕಂಡಿತ್ತು. ಟ್ರೋಫಿ ಗೆಲ್ಲುವ ಕನಸೂ ಕಮರಿತ್ತು.

RCB first Batting 1

3ನೇ ಸ್ಥಾನಕ್ಕೆ ತೃಪ್ತಿ
2010ರ ಐಪಿಎಲ್ ವೇಳೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಜನಪ್ರಿಯತೆ ಗಳಿಸಿತ್ತು. ಈ ಆವೃತ್ತಿಯಲ್ಲಿ ಆರ್‌ಸಿಬಿ ಪ್ಲೇ ಆಫ್ ಪ್ರವೇಶಿಸಿದ್ರೂ, ಮೊದಲ ಸೆಮಿಫೈನಲ್‌ನಲ್ಲೇ ಮುಂಬೈ ಇಂಡಿಯನ್ಸ್ ವಿರುದ್ಧ 35 ರನ್‌ಗಳ ಅಂತರದಿಂದ ಹೀನಾಯವಾಗಿ ಸೋತಿತ್ತು. ಆದ್ರೆ ಡೆಲ್ಲಿ ವಿರುದ್ಧ ಗೆದ್ದು 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಚೆನ್ನೈ ಸೂಪರ್ ಕಿಂಗ್ಸ್ ಮೊದಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

RCB 3

ಚೆನ್ನೈ ವಿರುದ್ಧ ಎರಡೆರಡುಬಾರಿ ಸೋಲು
2011ರ ಆವೃತ್ತಿ ಆರ್‌ಸಿಬಿ ಪಾಲಿಗೆ ಅತ್ಯಂತ ರೋಚಕ ಘಟ್ಟ. ಲೀಗ್ ಸುತ್ತಿನಲ್ಲಿ 14ರಲ್ಲಿ 9 ಪಂದ್ಯ ಗೆದ್ದು ಪ್ಲೇ ಆಫ್ ಪ್ರವೇಶಿಸಿತ್ತು. ಈ ವೇಳೆಗೆ ಪ್ಲೇ ಆಫ್ ಸ್ವರೂಪ ಸಂಪೂರ್ಣ ಬದಲಾಗಿತ್ತು. ಮೊದಲ ಸೆಮಿಫೈನಲ್‌ನಲ್ಲಿ ಚೆನ್ನೈ ವಿರುದ್ಧ 6 ವಿಕೆಟ್‌ಗಳ ಹೀನಾಯ ಸೋಲು ಕಂಡಿದ್ದ ಆರ್‌ಸಿಬಿಗೆ ಮತ್ತೊಂದು ಅವಕಾಶ ಸಿಕ್ಕಿತ್ತು. ಆಗ 2ನೇ ಕಾಲಿಫೈಯರ್ ಪಂದ್ಯದಲ್ಲಿ ಮುಂಬೈ ವಿರುದ್ಧ ಭರ್ಜರಿ ಗೆಲುವು ಕಂಡಿದ್ದ ಆರ್‌ಸಿಬಿ ಪುನಃ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 58 ರನ್‌ಗಳಿಂದ ಸೋಲು ಕಂಡಿತ್ತು. ಆಗ ಚೆನ್ನೈ ಸೂಪರ್ ಕಿಂಗ್ಸ್ ಸತತ 2ನೇ ಬಾರಿಗೆ ಟ್ರೋಫಿ ಮುಡಿಗೇರಿಸಿಕೊಂಡಿತ್ತು.

RCB 2

ಆರ್‌ಸಿಬಿ ಪಾಲಿಗೆ ಕಹಿ:
2012ರ ಐಪಿಎಲ್ ಆವೃತ್ತಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಾಗೂ ಅಭಿಮಾನಿಗಳ ಪಾಲಿಗೆ ಕಹಿಯಾಗಿತ್ತು. ಏಕೆಂದರೆ ಈ ಆವೃತ್ತಿಯಲ್ಲಿ ಪ್ಲೇ ಆಫ್ ಪ್ರವೇಶಿಸುವ ಅವಕಾಶವಿತ್ತು. 16 ಪಂದ್ಯಗಳಲ್ಲಿ ಆರ್‌ಸಿಬಿ ಮತ್ತು ಸಿಎಸ್‌ಕೆ ತಲಾ 8 ಪಂದ್ಯ ಗೆದ್ದು 17 ಅಂಕ ಪಡೆದುಕೊಂಡಿದ್ದವು. ಆದ್ರೆ ನೆಟ್‌ರನ್‌ರೇಟ್ ಕೊರತೆಯಿಂದ ಆರ್‌ಸಿಬಿ ಪ್ಲೇ ಆಫ್‌ನಿಂದ ಹೊರಗುಳಿಯಿತು. ಚೆನ್ನೈಗೆ ಗಿಫ್ಟ್ ಸಿಕ್ಕಿತು. ಆದ್ರೆ ಫೈನಲ್ಲಿ ಕೆಕೆಆರ್ ಸಿಎಸ್‌ಕೆ ಸೋಲಿಸಿ ಮೊದಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತು.

RCB 1

ಲೀಗ್‌ನಲ್ಲೇ ಹೊರಬಿದ್ದ ಬೆಂಗಳೂರು ಬಾಯ್ಸ್
2013ರ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಲೀಗ್ ಸುತ್ತಿನಲ್ಲೇ ಹೊರಬಿದ್ದಿತ್ತು. 16 ಪಂದ್ಯಗಳ ಪೈಕಿ 9 ಪಂದ್ಯ ಗೆದ್ದು 18 ಅಂಕ ಗಳಿಸಿದ್ರೂ ಪ್ಲೇ ಆಫ್ ಪ್ರವೇಶಿಸುವಲ್ಲಿ ವಿಫಲವಾಯಿತು. ಈ ಆವೃತ್ತಿಯಲ್ಲಿ 2ನೇ ಬಾರಿಗೆ ಚೆನ್ನೈ – ಮುಂಬೈ 2ನೇ ಬಾರಿಗೆ ಮುಖಾಮುಖಿಯಾಗಿದ್ದವು. ಮುಂಬೈ 23 ರನ್‌ಗಳಿಂದ ಗೆದ್ದು ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಧಕ್ಕಿಸಿಕೊಂಡಿತ್ತು.

RCB Top

ಸತತ ಹೀನಾಯ ಸೋಲು
2014ರ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿದ್ದ ಆರ್‌ಸಿಬಿ ಪ್ಲೇ ಆಫ್ ಸಮೀಪವೂ ಸುಳಿಯಲಿಲ್ಲ. ಅರಂಭಿಕ 2 ಪಂದ್ಯಗಳನ್ನು ಗೆದ್ದು ಶುಭಾರಂಭ ಕಂಡಿದ್ದ ಆರ್‌ಸಿಬಿ ಬಳಿಕ ಸತತ ಹೀನಾಯ ಸೋಲುಗಳನ್ನು ಅನುಭವಿಸಿತು. 14 ಪಂದ್ಯಗಳಲ್ಲಿ ಕೇವಲ 5 ಪಂದ್ಯ ಗೆದ್ದ ಆರ್‌ಸಿಬಿ 8 ತಂಡಗಳ ಪೈಕಿ 7ನೇ ಸ್ಥಾನಕ್ಕೆ ಕುಸಿದು, ಲೀಗ್‌ನಲ್ಲೇ ಮಕಾಡೆ ಮಲಗಿತು. ಈ ಆವೃತ್ತಿಯಲ್ಲಿ ಗೌತಮ್ ಗಂಭೀರ್ ನಾಯಕತ್ವದ ಕೋಲ್ಕತ್ತಾ ನೈಟ್‌ರೈಡರ್ಸ್ ಗೆದ್ದು 2ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತು.

RCB Team

ಬೆಂಗಳೂರಿಗೆ ಸಿಹಿ-ಕಹಿ
2015ರಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದ ಆರ್‌ಸಿಬಿಗೆ ಟ್ರೋಫಿ ಗೆಲ್ಲುವ ಕನಸು ನಿರಾಸೆಯಾಯಿತು. ಏಕೆಂದರೆ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 71 ರನ್‌ಗಳ ಭರ್ಜರಿ ಗೆಲುವು ಸಾಧಿಸಿದ್ದ ಬೆಂಗಳೂರು ತಂಡ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಸಿಎಸ್‌ಕೆ ವಿರುದ್ಧ 3 ವಿಕೆಟ್‌ಗಳ ವಿರೋಚಿತ ಸೋಲು ಕಂಡು ನಿರಾಸೆ ಅನುಭವಿಸಿತು. ಈ ಆವೃತ್ತಿಯಲ್ಲಿ 3ನೇ ಬಾರಿಗೆ ಮುಂಬೈ – ಚೆನ್ನೈ ಫೈನಲ್‌ನಲ್ಲಿ ಮುಖಾಮುಖಿಯಾಗಿತ್ತು. ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ 41 ರನ್‌ಗಳಿಂದ ಪಂದ್ಯ ಗೆದ್ದು 2ನೇ ಬಾರಿ ಚಾಂಪಿಯನ್ ಪಟ್ಟಕ್ಕೇರಿತು.

8 ರನ್‌ಗಳಿಂದ ಕೈತಪ್ಪಿದ ಟ್ರೋಫಿ
2016 ಐಪಿಎಲ್ ಆವೃತ್ತಿ ಆರ್‌ಸಿಬಿ ಅಭಿಮಾನಿಗಳ ಪಾಲಿಗೆ ಹಬ್ಬವಾಗಿತ್ತು. ಅಂಕಪಟ್ಟಿಯಲ್ಲಿ ಟಾಪ್-2 ಸ್ಥಾನದೊಂದಿಗೆ ಪ್ಲೇ ಆಫ್ ಪ್ರವೇಶಿಸಿದ್ದ ಆರ್‌ಸಿಬಿ ಮೊದಲ ಕ್ವಾಲಿಫೈಯರ್‌ನಲ್ಲಿ ಗುಜರಾತ್ ಲಯನ್ಸ್ ವಿರುದ್ಧ ಗೆದ್ದು ಫೈನಲ್ ತಲುಪಿತ್ತು. ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಸನ್ ರೈಸರ್ಸ್ ಹೈದರಾಬಾದ್ ತಂಡ 7 ವಿಕೆಟ್ ನಷ್ಟಕ್ಕೆ 208 ರನ್ ಸಿಡಿಸಿತ್ತು. ಆದ್ರೆ ಚೇಸಿಂಗ್ ಮಾಡಿದ್ದ ಆರ್‌ಸಿಬಿ ಕ್ರಿಸ್‌ಗೇಲ್ ಮತ್ತು ಕಿಂಗ್ ಕೊಹ್ಲಿ ಆರ್ಭಟದ ಹೊರತಾಗಿ 8 ರನ್‌ಗಳ ವಿರೋಚಿತ ಸೋಲು ಅನುಭವಿಸಿತು. ಆಗ ಸನ್ ರೈಸರ್ಸ್ ಡೇವಿಡ್ ವಾರ್ನರ್ ನಾಯಕತ್ವದಲ್ಲಿ ಟ್ರೋಫಿ ಎತ್ತಿ ಹಿಡಿದಿತ್ತು.

ಅಡ್ರೆಸ್‌ಗಿಲ್ಲದಂತೆ ಮಕಾಡೆ ಮಲಗಿತ್ತು ಬೆಂಗಳೂರು
ಪ್ರತಿ ಬಾರಿಯಂತೆ 2017ರ ಆವೃತ್ತಿಯಲ್ಲೂ ʻಈ ಸಲ ಕಪ್ ನಮ್ದೇʼ ಎಂಬ ಧ್ಯೇಯದೊಂದಿಗೆ ಆರ್‌ಸಿಬಿ ಕಣಕ್ಕಿಳಿದಿತ್ತು. ಈ ಆವೃತ್ತಿಯಲ್ಲಿ 8 ತಂಡಗಳು ಪಾಲ್ಗೊಂಡಿದ್ದವು. ಕ್ರಿಸ್‌ಗೇಲ್, ವಿರಾಟ್ ಕೊಹ್ಲಿ, ಎಬಿ ಡಿ ವಿಲಿಯರ್ಸ್, ಶೇನ್ ವಾಟ್ಸನ್, ಕೆ.ಎಲ್ ರಾಹುಲ್ ಅವರಂತಹ ದಿಗ್ಗಜ ಬ್ಯಾಟರ್‌ಗಳಿದ್ದರೂ ಹೀನಾಯ ಸೋಲುಗಳು ಅನುಭವಿಸಿತು. 14ರಲ್ಲಿ ಕೇವಲ 3 ಪಂದ್ಯಗಳನ್ನ ಗೆದ್ದು ಕೊನೆಯ ಸ್ಥಾನದೊಂದಿಗೆ ಹೊರನಡೆಯಿತು. ಈ ಆವೃತ್ತಿಯ ಫೈನಲ್‌ನಲ್ಲಿ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ವಿರುದ್ಧ ಗೆದ್ದು ಮುಂಬೈ ಇಂಡಿಯನ್ಸ್ ಚಾಂಪಿಯನ್ ಆಯಿತು.

CSK vs RCB 2

2018ರಲ್ಲಿ ವಿಫಲ ಪ್ರಯತ್ನ
ರಣಕಲಿಗಳ ಬ್ಯಾಟಿಂಗ್ ಪಡೆಯೊಂದಿಗೆ ಟ್ರೋಫಿ ಗೆಲ್ಲಲೇಬೇಕೆಂಬ ಛಲದೊಂದಿಗೆ ಕಣಕ್ಕಿಳಿದಿದ್ದ ಆರ್‌ಸಿಬಿಗೆ 2018ರ ಆವೃತ್ತಿಯಲ್ಲೂ ನಿರಾಸೆಯಾಯಿತು. ಈ ಆವೃತ್ತಿಯಲ್ಲೂ 8 ತಂಡಗಳಷ್ಟೇ ಭಾಗವಹಿಸಿದ್ದವು. ಜಿದ್ದಾಜಿದ್ದಿ ಹೋರಾಟದ ಹೊರತಾಗಿಯೂ ವಿರೋಚಿತ ಸೋಲುಗಳಿಂದಲೇ ಆರ್‌ಸಿಬಿ ಪ್ಲೇ ಆಫ್ ಪ್ರವೇಶಿಸುವಲ್ಲಿ ವಿಫಲವಾಯಿತು. 14 ಪಂದ್ಯಗಳಲ್ಲಿ ಕೇವಲ 6 ಪಂದ್ಯ ಗೆದ್ದು 6ನೇ ಸ್ಥಾನ ಪಡೆಯುವ ಮೂಲಕ ಲೀಗ್ ಸುತ್ತಿನಲ್ಲೇ ಹೊರಬಿದ್ದಿತು. ಈ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿತು.

2019ರಲ್ಲೂ ಹೀನಾಯ ಸೋಲು
ಅಭಿಮಾನಿಗಳ ಘೋಷಣೆಯಂತೆ ʻಈ ಸಲ ಕಪ್ ನಮ್ದೇʼ ಎನ್ನುವ ಉತ್ಸಾಹದಲ್ಲಿದ್ದ ಆರ್‌ಸಿಬಿ 14 ಪಂದ್ಯಗಳಲ್ಲಿ ಗೆದ್ದಿದ್ದು ಕೇವಲ 5 ಪಂದ್ಯ ಮಾತ್ರ. 8 ತಂಡಗಳು ಪಾಲ್ಗೊಂಡಿದ್ದ ಈ ಆವೃತ್ತಿಯಲ್ಲಿ ಆರ್‌ಸಿಬಿ ಕೊನೆಯ ಸ್ಥಾನ ಬಿಟ್ಟು ಮೇಲೇಳಲೇ ಇಲ್ಲ. ಇನ್ನೂ ಈ ಆವೃತ್ತಿಯಲ್ಲಿ ಫೈನಲ್ ಪ್ರವೇಶಿಸಿದ್ದ ಸಮಬಲ ಎದುರಾಳಿಗಳ ನಡುವೆ ರೋಚಕ ಕಾದಾಟ ನಡೆದಿತ್ತು. ಆದ್ರೆ ಚೆನ್ನೈ ಸೂಪರ್ ಕಿಂಗ್ಸ್ ಕೊನೆಯಲ್ಲಿ ಬ್ಯಾಟಿಂಗ್ ವೈಫಲ್ಯದಿಂದಾಗಿ ಮುಂಬೈ ವಿರುದ್ಧ 1 ರನ್‌ನಿಂದ ಸೋತಿತ್ತು. ಮುಂಬೈ ಇಂಡಿಯನ್ಸ್ ಟ್ರೋಫಿ ಎತ್ತಿಹಿಡಿಯಿತು.

RCB WIN OR LOST 2

2020ರಲ್ಲಿ ಪ್ಲೇ ಆಫ್‌ನಲ್ಲಿ ʻಎಲಿಮಿನೇಟ್‌ʼ
2020ರ ಐಪಿಎಲ್‌ ಆವೃತ್ತಿಯಲ್ಲೂ ʻಈ ಸಲ ಕಪ್‌ ನಮ್ದೇʼ ಅನ್ನೋ ಧ್ಯೇಯದೊಂದಿಗೇ ಆರ್‌ಸಿಬಿ ಅಖಾಡಕ್ಕಿಳಿದಿತ್ತು. ಈ ಆವೃತ್ತಿಯಲ್ಲಿ ಒಟ್ಟು 8 ಫ್ರಾಂಚೈಸಿಗಳು ಪಾಲ್ಗೊಂಡಿದ್ದವು. ಲೀಗ್‌ ಸುತ್ತಿಮ ಮುಕ್ತಾಯದ ವೇಳೆಗೆ 14 ಪಂದ್ಯಗಳಲ್ಲಿ 7 ಪಂದ್ಯ ಗೆದ್ದು 14 ಅಂಕ ಪಡೆದಿದ್ದ ಆರ್‌ಸಿಬಿ ನಾಲ್ಕನೇ ಸ್ಥಾನದೊಂದಿಗೆ ಪ್ಲೇ ಆಫ್‌ಗೆ ಎಂಟ್ರಿ ಕೊಟ್ಟಿತು. ಆದ್ರೆ, ಸನ್‌ ರೈಸರ್ಸ್‌ ಹೂದರಾಬಾದ್‌ ವಿರುದ್ಧ ನಡೆದ ಎಲಿಮಿನೇಟರ್‌ ಪಂದ್ಯದಲ್ಲಿ ಹೀನಾಯ ಸೋಲಿ ಅನುಭವಿಸಿ ಹೊರ ನಡೆಯಿತು. ಈ ಆವೃತ್ತಿಯಲ್ಲಿ ಮುಂಬೈ ಡೆಲ್ಲಿ ವಿರುದ್ಧ ಫೈನಲ್‌ನಲ್ಲಿ ಗೆದ್ದು ಟ್ರೋಫಿ ಎತ್ತಿ ಹಿಡಿಯಿತು.

2021ರಲ್ಲಿ ಮತ್ತೆ ಹೀನಾಯ ಸೋಲು
2021ರ ಆವೃತ್ತಿಯಲ್ಲಿ 18 ಅಂಕಗಳೊಂದಿಗೆ 3ನೇ ಸ್ಥಾನ ಪಡೆದು ಪ್ಲೇ ಆಫ್‌ ಪ್ರವೇಶಿಸಿದ್ದ ಆರ್‌ಸಿಬಿ ಎಲಿಮಿನೇಟರ್‌ ಪಂದ್ಯದಲ್ಲಿ ಇಯಾನ್‌ ಮಾರ್ಗನ್‌ ನಾಯಕತ್ವದ ಕೆಕೆಆರ್‌ ವಿರುದ್ಧ ಸೋಲಿನೊಂದಿಗೆ ಹೊರಬಿದ್ದಿತು. ಅಂತಿಮವಾಗಿ ಚೆನ್ನೈ ಸೂಪರ್‌ ಕಿಂಗ್ಸ್‌ ಟ್ರೋಫಿ ಗೆದ್ದುಕೊಂಡಿತು. ವಿಶ್ವದಾದ್ಯಂತ ಕೋವಿಡ್‌ ಉಲ್ಬಣಗೊಂಡಿದ್ದರಿಂದ ಈ ಆವೃತ್ತಿಯನ್ನು ಕೆಲ ದಿನಗಳ ವರೆಗೆ ಸ್ಥಗಿತಗೊಳಿಸಲಾಗಿತ್ತು.

RCB 3 2

2022 – ಕ್ವಾಲಿಫೈಯರ್‌-2ನಲ್ಲಿ ರಾಜಸ್ಥಾನ್‌ ಕೊಕ್ಕೆ
2022ರ ಆವೃತ್ತಿಯಲ್ಲಿ ಆರ್‌ಸಿಬಿ ಭರ್ಜರಿ ಪ್ರದರ್ಶನವನ್ನೇ ನೀಡಿತ್ತು. ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆಯುವ ಮೂಲಕ ಪ್ಲೇ ಆಫ್‌ಗೆ ಪ್ರವೇಶಿಸಿತ್ತು. ಎಲಿಮಿನೇಟರ್‌ ಪಂದ್ಯದಲ್ಲಿ ರಜತ್‌ ಪಾಟಿದಾರ್‌ ಅವರ ಭರ್ಜರಿ ಶತಕದ ನೆರವಿನಿಂದ ಆಗಷ್ಟೇ ಪದಾರ್ಪಣೆ ಮಾಡಿದ್ದ ಲಕ್ನೋ ಸೂಪರ್‌ ಜೈಂಟ್ಸ್‌ ವಿರುದ್ಧ ಗೆದ್ದು ಬೀಗಿತ್ತು. ಆದ್ರೆ ಕ್ವಾಲಿಫೈಯರ್‌-2ನಲ್ಲಿ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ಸೋತು ನಿರಾಸೆ ಅನುಭವಿಸಿತು. 2022ರಲ್ಲೇ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದ ಹಾರ್ದಿಕ್‌ ಪಾಂಡ್ಯ ನಾಯಕತ್ವದ ಗುಜರಾತ್‌ ಟೈಟಾನ್ಸ್‌ ತಂಡ ಚೊಚ್ಚಲ ಆವೃತ್ತಿಯಲ್ಲಿ ಟ್ರೋಫಿ ಮುಡಿಗೇರಿಸಿಕೊಂಡಿತು.

2023: ಲೀಗ್‌ ಸುತ್ತಿನಲ್ಲೇ ಹೊರಬಿದ್ದ ಬೆಂಗಳೂರು ಬಾಯ್ಸ್‌
ಪ್ರಶಸ್ತಿ ಗೆಲ್ಲುವ ಉತ್ಸಾಹದೊಂದಿಗೆ ಕಣಕ್ಕಿಳಿದಿದ್ದ ಆರ್‌ಸಿಬಿ 2023ರ ಆವೃತ್ತಿಯಲ್ಲಿ ಭಾರೀ ನಿರಾಸೆ ಅನುಭವಿಸಿತ್ತು. ಈ ಆವೃತ್ತಿಯಲ್ಲಿ ತಂಡಗಳ ಅಂಖ್ಯೆ 10ಕ್ಕೇರಿತ್ತು. ಲೀಗ್‌ನಲ್ಲಿ 14ರಲ್ಲಿ 7 ಪಂದ್ಯ ಗೆದ್ದಿದ್ದ ಆರ್‌ಸಿಬಿ 14 ಅಂಕ ಗಳಿಸುವ ಮೂಲಕ 6ನೇ ಸ್ತಾನಕ್ಕೆ ತೃಪ್ತಿಪಟ್ಟುಕೊಂಡಿತು. ಈ ಆವೃತ್ತಿಯ ರೋಚಕ ಫೈನಲ್‌ನಲ್ಲಿ ಗುಜರಾತ್‌ ಟೈಟಾನ್ಸ್‌ ವಿರುದ್ಧ ಗೆದ್ದು ಚೆನ್ನೈ ಸೂಪರ್‌ ಕಿಂಗ್ಸ್‌ 5ನೇ ಬಾರಿಗೆ ಟ್ರೋಫಿ ತನ್ನದಾಗಿಸಿಕೊಂಡಿತು.

RCB 2 3

2024: ರಾಜಸ್ಥಾನ್‌ ವಿರುದ್ಧ ಆರ್‌ಸಿಬಿ ಎಲಿಮಿನೇಟ್‌
ʻಇದು ಆರ್‌ಸಿಬಿಯ ಹೊಸ ಅಧ್ಯಾಯʼ ಎನ್ನುವ ಹೊಸ ಘೋಷ ವಾಕ್ಯದೊಂದಿಗೆ ಕಣಕ್ಕಿಳಿದಿದ್ದ ಆರ್‌ಸಿಬಿ ತಂಡವು ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ನಾಕೌಟ್‌ ಕದನದಲ್ಲಿ ಭರ್ಜರಿ ಗೆಲುವು ಸಾಧಿಸಿತ್ತು. ಆದ್ರೆ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ಎಲಿಮಿನೇಟರ್‌ ಪಂದ್ಯದಲ್ಲಿ ಸೋತು ಹೊರ ನಡೆಯಿತು. ಈ ಆವೃತ್ತಿಯಲ್ಲಿ ಪ್ರಬಲ ಪಡೆ ರಚಿಸಿಕೊಂಡಿದ್ದ ಶ್ರೇಯಸ್‌ ಅಯ್ಯರ್‌ ನಾಯಕತ್ವದ ಪಂಜಾಬ್‌ ಕಿಂಗ್ಸ್‌ ತಂಡವು ಟ್ರೋಫಿ ಗೆದ್ದು ಬೀಗಿತು.

Share This Article